ADVERTISEMENT

‘ಫ್ರೆಂಚ್‌ ಬಿರಿಯಾನಿ’ ಸಿನಿಮಾ ಸೋರಿಕೆ ಮಾಡಿದ ತಮಿಳ್‌ ರಾಕರ್ಸ್‌

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 8:57 IST
Last Updated 24 ಜುಲೈ 2020, 8:57 IST
'ಫ್ರೆಂಚ್ ಬಿರಿಯಾನಿ' ಚಿತ್ರದ ದೃಶ್ಯ
'ಫ್ರೆಂಚ್ ಬಿರಿಯಾನಿ' ಚಿತ್ರದ ದೃಶ್ಯ   

‘ಫ್ರೆಂಚ್‌ ಬಿರಿಯಾನಿ’ ಪನ್ನಗ ಭರಣ ನಿರ್ದೇಶನದ ಕಾಮಿಡಿ ಚಿತ್ರ. ಡ್ಯಾನಿಶ್‌ ಸೇಟ್‌ ಮತ್ತು ರಂಗಾಯಣ ರಘು ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ಇಂದು ಬಿಡುಗಡೆಯಾಗಿದೆ. ರಘು ಸಮರ್ಥ ನಿರ್ದೇಶನದ ‘ಲಾ’ ಚಿತ್ರದ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಎರಡನೇ ಚಿತ್ರ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಗುರುದತ್‌ ಎ. ತಲ್ವಾರ್‌ ಇದಕ್ಕೆ ಬಂಡವಾಳ ಹೂಡಿದ್ದಾರೆ.

ಕಳೆದ ವಾರ ಒಟಿಟಿಯಲ್ಲಿ ತೆರೆಕಂಡ ‘ಲಾ’ ಚಿತ್ರಕ್ಕೂ ಪೈರಸಿ ಕಾಟ ತಟ್ಟಿತ್ತು. ಈಗ ‘ಫ್ರೆಂಚ್ ಬಿರಿಯಾನಿ’ಗೂ ಇದರ ಬಿಸಿ ತಟ್ಟಿದೆ. ಶುಕ್ರವಾರ ಮಧ್ಯರಾತ್ರಿಯೇ ಅಮೆಜಾನ್‌ ಪ್ರೈಮ್ ವಿಡಿಯೊದಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ತಮಿಳ್‌ ರಾಕರ್ಸ್‌ ವೆಬ್‌ಸೈಟ್‌ನಲ್ಲಿ ಇದರ ಎಚ್‌ಡಿ ವಿಡಿಯೊವೇ ಸೋರಿಕೆಯಾಗಿದೆ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಸಿನಿಮಾ ನಿರ್ಮಿಸುವ ನಿರ್ಮಾಪಕರಿಗೆ ಇದು ತಲೆನೋವು ತಂದಿದೆ.

ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಮತ್ತು ವೆಬ್‌ ಸರಣಿಗಳನ್ನು ಸೋರಿಕೆ ಮಾಡುವುದರಲ್ಲಿ ತಮಿಳ್‌ ರಾಕರ್ಸ್‌ ಸಿದ್ಧಹಸ್ತರು. ಅವರ ಈ ದುಷ್ಕೃತ್ಯ ಚಿತ್ರೋದ್ಯಮದ ಬೆಳವಣಿಗೆಗೆ ಕಂಟಕವಾಗಿ ಪರಿಣಮಿಸಿದೆ.

ADVERTISEMENT

ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಎಚ್‌ಡಿ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಸುಲಭ. ಡೌನ್‌ಲೋಡ್‌ ಆಗುವ ಈ ವಿಡಿಯೊಗಳನ್ನು ತಮಿಳ್‌ ರಾಕರ್ಸ್‌ ನೇರವಾಗಿ ತಮ್ಮ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುತ್ತಾರೆ. ಜೊತೆಗೆ, ಯಾವುದೇ ಸಿನಿಮಾಗಳು ಥಿಯೇಟರ್‌ನಲ್ಲಿ ಬಿಡುಗಡೆಗೊಂಡರೂ ತಮಿಳ್‌ ರಾಕರ್ಸ್‌ ಚಿತ್ರಮಂದಿರದಲ್ಲಿಯೇ ಮೊಬೈಲ್‌ಗಳಲ್ಲಿ ಆ ಸಿನಿಮಾವನ್ನು ಚಿತ್ರೀಕರಿಸಿಕೊಂಡು ಸೋರಿಕೆ ಮಾಡುತ್ತಾರೆ. ಅವರ ಈ ಕಾಟಕ್ಕೆ ಚಿತ್ರ ನಿರ್ಮಾಣ ಸಂಸ್ಥೆಗಳು ಮತ್ತು ನಿರ್ಮಾಪಕರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.