‘ಬಾಹುಬಲಿ’ ಸರಣಿ ಸಿನಿಮಾಗಳಲ್ಲಿ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಪಾತ್ರದಲ್ಲಿ ಮಿಂಚಿನಹೊಳೆ ಹರಿಸಿದ ಬಳಿಕ ನಟ ಪ್ರಭಾಸ್ ಸಂಭಾವನೆಯ ಗ್ರಾಫ್ ಕೂಡ ಏರಿಕೆಯಾಗಿತ್ತು. ಕಳೆದ ವರ್ಷ ತೆರೆಕಂಡ ‘ಸಾಹೊ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಯಶಸ್ಸು ಕಾಣದಿದ್ದರೂ, ಹೂಡಿದ ಬಂಡವಾಳಕ್ಕೆ ಮೋಸ ಮಾಡಲಿಲ್ಲ. ಹಾಗಾಗಿ, ಅವರ ಸಂಭಾವನೆಗೂ ಕತ್ತರಿ ಪ್ರಯೋಗವಾಗಲಿಲ್ಲ.
ಪ್ರಸ್ತುತ ರಾಧಾ ಕೃಷ್ಣಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಇದರಲ್ಲಿ ಅವರಿಗೆ ಪೂಜಾ ಹೆಗ್ಡೆ ನಾಯಕಿ. ಇದಾದ ಬಳಿಕ ‘ಮಹಾನಟಿ’ ಚಿತ್ರದ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ಇದರ ಪ್ರೀ ಪ್ರೊಡಕ್ಷನ್ ಕೆಲಸ ಈಗಾಗಲೇ ಶುರುವಾಗಿದೆ. ಇದಕ್ಕೆ ಬಂಡವಾಳ ಹೂಡುತ್ತಿರುವುದು ವೈಜಯಂತಿ ಮೂವೀಸ್.
ಸೈಂಟಿಫಿಕ್ ಕಥನ ಇದು. ಭವಿಷ್ಯದಲ್ಲಿ ನಡೆಯಲಿರುವ ಥರ್ಡ್ ವರ್ಲ್ಡ್ ವಾರ್‌ನ ಕಲ್ಪನೆಯಡಿ ಇದರ ಚಿತ್ರಕಥೆ ಹೆಣೆಯಲಾಗಿದೆಯಂತೆ. ಆದರೆ, ನಾಗ್ ಅಶ್ವಿನ್ ಎಲ್ಲಿಯೂ ಕಥೆಯ ಎಳೆಯನ್ನು ಬಿಟ್ಟುಕೊಟ್ಟಿಲ್ಲ. ಅಂದಹಾಗೆ ಇದು ಪ್ರಭಾಸ್ ನಟನೆಯ 21ನೇ ಸಿನಿಮಾ.
ಕೋವಿಡ್–19 ಪರಿಣಾಮ ಭಾರತೀಯ ಚಿತ್ರೋದ್ಯಮ ಆರ್ಥಿಕ ಸಂಕಷ್ಟದ ಜ್ವರದಿಂದ ಬಳಲುತ್ತಿದೆ. ಇದರ ಪರಿಣಾಮ ನಟ, ನಟಿಯರ ದುಬಾರಿ ಸಂಭಾವನೆಗೆ ಕತ್ತರಿ ಬಿದ್ದಿದೆ. ಆದರೆ, ಪ್ರಭಾಸ್ ಮಾತ್ರ ಸಂಭಾವನೆಯ ಕಡಿತಕ್ಕೆ ಮುಂದಾಗುತ್ತಿಲ್ಲವಂತೆ. ನಾಗ್ ಅಶ್ವಿನ್ ಸಿನಿಮಾಕ್ಕೆ ಪ್ರಭಾಸ್ ಪಡೆಯುತ್ತಿರುವ ಸಂಭಾವನೆಯ ಮೊತ್ತ ₹ 70 ಕೋಟಿ ಎಂಬ ಸುದ್ದಿ ಟಾಲಿವುಡ್ ಪಡಸಾಲೆಯಿಂದ ಹೊರಬಿದ್ದಿದೆ.
‘ಬಾಹುಬಲಿ’ ಸರಣಿ ಸಿನಿಮಾಗಳ ಗೆಲುವಿನ ಬಳಿಕ ಸಿನಿಮಾದಿಂದ ಸಿನಿಮಾಕ್ಕೆ ಪ್ರಭಾಸ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಗುಟ್ಟೇನಲ್ಲ. ಅವರ ದುಬಾರಿ ಸಂಭಾವನೆಗೆ ನಿರ್ಮಾಪಕರು ತಬ್ಬಿಬ್ಬುಗೊಂಡಿರುವುದು ಸತ್ಯ. ಮತ್ತೊಂದೆಡೆ ಪ್ರಭಾಸ್ ನಟನೆಯ ಸಿನಿಮಾಗಳು ದಕ್ಷಿಣ ಭಾರತದ ಭಾಷೆಗಳಿಗೂ ಡಬ್ಬಿಂಗ್ ಆಗುವುದು ಸರ್ವೇ ಸಾಮಾನ್ಯ. ಇದರಿಂದ ಸಾಕಷ್ಟು ದುಡ್ಡು ಹರಿದು ಬರುತ್ತದೆ. ಹಾಗಾಗಿಯೇ, ಡಬ್ಬಿಂಗ್ ರೈಟ್ಸ್‌ನಿಂದ ಸಿಗುವ ಮೊತ್ತದಲ್ಲಿ ಅರ್ಧದಷ್ಟು ಪಾಲನ್ನೂ ಸಂಭಾವನೆಯ ರೂಪದಲ್ಲಿ ಪ್ರಭಾಸ್ ಪಡೆಯುತ್ತಾರಂತೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಚಿತ್ರದ ನಾಯಕಿ. ಈ ಮೊದಲು ಅವರು ಇದರಲ್ಲಿ ನಟಿಸಲು ₹ 20 ಕೋಟಿ ಸಂಭಾವನೆಗೆ ಬೇಡಿಕೆ ಮುಂದಿಟ್ಟಿದ್ದರಂತೆ. ಕೊನೆಗೆ, ₹ 18 ಕೋಟಿ ಸಂಭಾವನೆಗೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಈ ಸಿನಿಮಾದ ಬಜೆಟ್ ಮೊತ್ತ ₹ 400 ಕೋಟಿ. ಕೊರೊನಾ ಪರಿಣಾಮ ಸದ್ಯಕ್ಕೆ ಇದರ ಶೂಟಿಂಗ್ ಶುರುವಾಗುವ ಬಗ್ಗೆ ಅನುಮಾನವಿದೆ. ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.