ADVERTISEMENT

ಅಪ್ಪು ಅಗಲಿಕೆಗೆ 10 ದಿನಗಳು: ನ. 8ರಂದು ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 7:13 IST
Last Updated 7 ನವೆಂಬರ್ 2021, 7:13 IST
   

ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾಗಿ 10 ದಿನಗಳು ಕಳೆದೇಬಿಟ್ಟವು. ನ. 8ರಂದು 11ನೇ ದಿನದ ವಿಧಿವಿಧಾನಗಳು ನಡೆಯಲಿವೆ. ಇದಕ್ಕಾಗಿ ಸದಾಶಿವನಗರದಲ್ಲಿರುವ ಪುನೀತ್‌ ನಿವಾಸ ಹಾಗೂ ಸಮಾಧಿ ಮಾಡಿದ ಕಂಠೀರವ ಸ್ಟುಡಿಯೋ ಆವರಣದಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆದಿದೆ. ಮನೆಯಲ್ಲಿ ಪೂಜಾ ಕಾರ್ಯಕ್ರಮ ನಡೆದ ಬಳಿಕ ಸಮಾಧಿ ಸ್ಥಳದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪೂಜೆ ನಡೆಯಲಿದೆ.12ನೇ ದಿನದ ಕಾರ್ಯಕ್ರಮ (ನ.9) ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇಂದು (ನ. 7) ಚಿತ್ರಮಂದಿರಗಳಲ್ಲಿ ನಮನ

ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ವತಿಯಿಂದ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಪುನೀತ್‌ ಅವರಿಗೆ ವಿಶೇಷ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 6ರಿಂದ ಏಕಕಾಲಕ್ಕೆ ಎಲ್ಲ ಚಿತ್ರಮಂದಿರಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊ‌ಳ್ಳಲಾಗಿದೆ.ಗೀತಾಂಜಲಿ, ಪುಷ್ಪಾಂಜಲಿ ಹಾಗೂ ದೀಪಾಂಜಲಿ ಮೂಲಕ ನಮನ ಸಲ್ಲಿಸಲಾಗುತ್ತದೆ. ಗೀತಾಂಜಲಿಯಲ್ಲಿ ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ಅವರು ಬರೆದ ಹಾಡಿನ ಮೂಲಕ ನಮನ ಸಲ್ಲಿಸಲಾಗುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ADVERTISEMENT

ಸಮಾಧಿ ಬಳಿ ಜನರ ಆಗಮನ ಹೆಚ್ಚಳ

ಭಾನುವಾರವಾದ ಕಾರಣ ಪುನೀತ್‌ ಸಮಾಧಿ ಬಳಿ ಅಭಿಮಾನಿಗಳ ಆಗಮನ ಹೆಚ್ಚಿದೆ. ಇಂದು (ನ.7) ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸಮಾಧಿ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.