ADVERTISEMENT

ಪುನೀತ್‌ ರಾಜ್‌ಕುಮಾರ್‌ ಮಿತಾಹಾರ... ಶ್ರದ್ಧೆ ಪೂರಾ!

ವಿಶಾಖ ಎನ್.
Published 29 ಅಕ್ಟೋಬರ್ 2021, 21:07 IST
Last Updated 29 ಅಕ್ಟೋಬರ್ 2021, 21:07 IST
   

ತೂಕ ಮಾಡಿಟ್ಟಂತೆ ಅನ್ನ-ಸಾಂಬಾರಿನಲ್ಲಿ ತುಸು ಹೆಚ್ಚೇ ತರಕಾರಿಗಳು. ಎರಡು ಸಣ್ಣ ಹೋಳು ಪಪ್ಪಾಯ ಹಣ್ಣು. ಎರಡು ಚಮಚ ಗಸೆಗಸೆ ಪಾಯಸ...

ಪುನೀತ್ ರಾಜ್‌ಕುಮಾರ್ ತಟ್ಟೆಯಲ್ಲಿ ಇದ್ದದ್ದು ಇಷ್ಟು. 'ಅರಸು' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ ಅದು. ಹಾಸ್ಯನಟರಾಗಿ ಆ ಚಿತ್ರದಲ್ಲಿ ಅಭಿನಯಿಸಿದ್ದ ಕೋಮಲ್ ಕೂಡ ತಾರಾ ಡಯೆಟ್ಟನ್ನು ನೋಡಿ ಆಗ ಕಣ್ಣರಳಿಸಿದ್ದರು.

ಆಗಿನಿಂದಲೇ ಪುನೀತ್ ಡಯೆಟ್ ಕಟ್ಟುನಿಟ್ಟು. ವ್ಯಾಯಾಮ ಅವರಿಗೆ ದೈನಂದಿನ ಕಾಯಂ ಚಟುವಟಿಕೆ. ಸಾಮಾನ್ಯವಾಗಿ ಬಹುತೇಕ ನಟರು ಭುಜದಿಂದ ಸೊಂಟದವರೆಗೆ ದೇಹಾಕಾರ ರೂಪಿಸಿಕೊಳ್ಳುತ್ತಾರೆ. ಪುನೀತ್ ಮೀನಖಂಡಗಳು ಬಹಳ ಗಟ್ಟಿಮುಟ್ಟಾಗಿದ್ದವು. ಅವರು ಕೋವಿಡ್ ಲಾಕ್‌ಡೌನ್‌ನಲ್ಲಿ ಮಾಡಿದಂಥ ವರ್ಕ್‌ಔಟ್‌ನಲ್ಲೂ ಇದು ಸ್ಪಷ್ಟವಾಗಿತ್ತು.

ADVERTISEMENT

ಸಿನಿಮಾದ ಸಾಹಸ ದೃಶ್ಯಗಳಿಗೆ ಹಾಗೂ ನೃತ್ಯ ಲಾಲಿತ್ಯಕ್ಕೆ ಕಾಲುಗಳು ಗಟ್ಟಿಯಾಗಿರುವುದು ತುಂಬಾ ಮುಖ್ಯ ಎನ್ನುವುದು ಪುನೀತ್ ಅನುಭವದ ನುಡಿಯಾಗಿತ್ತು.

ತಮ್ಮ ಮಕ್ಕಳು ಹೀಗೆ ಅಳೆದೂ ತೂಗಿದಂತೆ ಊಟ ಮಾಡುವುದನ್ನು ಕಂಡಿದ್ದ ಪಾರ್ವತಮ್ಮ ರಾಜ್‌ಕುಮಾರ್, ಒಮ್ಮೆ ಬೇಸರಿಸಿದ್ದರು. ಬೆಂಗಳೂರಿನ ಗಾಂಧಿನಗರದಲ್ಲಿ ರಾಜ್‌ಕುಮಾರ್ ಇಂಟರ್‌ನ್ಯಾಷನಲ್ ಹೋಟೆಲ್ ಉದ್ಘಾಟನೆಯಾದಾಗ ಅವರು ಮಕ್ಕಳ ಡಯೆಟ್ ಪ್ರೀತಿಯನ್ನು ತಾಯಿ ವಾತ್ಯಲ್ಯದಿಂದಲೇ ಖಂಡಿಸಿದ್ದರು.

ರಾಜ್‌ಕುಮಾರ್ ಹೊಟ್ಟೆತುಂಬಾ ಊಟ ಮಾಡುತ್ತಿದ್ದರೂ ದೇಹಾಕಾರ ಕಾಪಾಡಿಕೊಂಡಿದ್ದನ್ನು ಉಲ್ಲೇಖಿಸಿಯೇ ಅವರು ಮಕ್ಕಳನ್ನು ತರಾಟೆಗೆ ತೆಗೆದುಕೊಂಡಾಗ, ಪುನೀತ್ ಮಂದಹಾಸ ಬೀರಿದ್ದರಷ್ಟೆ.

ಫಿಟ್‌ನೆಸ್ ವಿಷಯದಲ್ಲಿ ತಂದೆಯೇ ತಮ್ಮ ಗುರು ಎಂದು ಪುನೀತ್ ಪದೇ ಪದೇ ಹೇಳುತ್ತಿದ್ದರು. ಕೋವಿಡ್ ಲಾಕ್‌ಡೌನ್‌ನಲ್ಲಿ ಸೈಕ್ಲಿಂಗ್ ಮಾಡಿ ಚೈತನ್ಯದ ಪಾಠ ಹೇಳಿದ್ದ ಅವರೇ ಹೀಗೆ ದಿಢೀರನೆ ಅಗಲಿರುವುದು ಎಂಥವರಿಗೂ ಪರಮಾಶ್ಚರ್ಯ.

ಬಾಲ್ಯದಲ್ಲಿ ಆಟಿಕೆ, ಚಾಕೊಲೇಟ್‌ನಂಥ ಸಣ್ಣ ಆಮಿಷಗಳಿಂದಾಗಿ ಅಭಿನಯಿಸಲು ಒಪ್ಪಿದ್ದ ಪುನೀತ್, ನಾಯಕನಾದ ಮೇಲೆ ಪ್ರಜ್ಞಾಪೂರ್ವಕವಾಗಿ ವೃತ್ತಿಶಿಸ್ತನ್ನು ಅಳವಡಿಸಿಕೊಂಡಿದ್ದರು.

'ನಮ್ಮ ತಂದೆಯ ಸೊಂಟದ ಸುತ್ತಳತೆ ಕೊನೆಯವರೆಗೂ ಮೂವತ್ತೆರಡೇ ಇಂಚು ಇತ್ತು' ಎಂದು ಪುನೀತ್ ಹೇಳಿದ್ದ ಮಾತು ಈಗಲೂ ಕಿವಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.