ADVERTISEMENT

ರಣವೀರ್‌ ಕ್ರಿಕೆಟ್‌ ಕಾಮೆಂಟ್ರಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 19:45 IST
Last Updated 24 ಜೂನ್ 2019, 19:45 IST
ಇಂಗ್ಲೆಂಡ್‌ನಲ್ಲಿ ನಡೆದ ಭಾರತ–ಪಾಕ್‌ ನಡುವಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ವೀಕ್ಷಿಸಿದ ರಣವೀರ್‌
ಇಂಗ್ಲೆಂಡ್‌ನಲ್ಲಿ ನಡೆದ ಭಾರತ–ಪಾಕ್‌ ನಡುವಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯ ವೀಕ್ಷಿಸಿದ ರಣವೀರ್‌   

ಕ್ರಿಕೆಟಿಗರ ಜತೆ ಬಾಲಿವುಡ್‌ ತಾರೆಗಳ ಸ್ನೇಹ ಹೊಸದಲ್ಲ. ಇದೀಗ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಆ ಸಾಲಿಗೆ ಸೇರಿದ್ದಾರೆ. ತರಲೆ, ಕುಚೇಷ್ಟೆಗಳಿಗೆ ಹೆಸರಾದ ರಣವೀರ್‌ ತೆರೆಯ ಮೇಲಷ್ಟೇ ಅಲ್ಲ ಕ್ರಿಕೆಟ್‌ ಅಂಗಳದಲ್ಲೂ ಮಿಂಚುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ ವೀಕ್ಷಕ ವಿವರಣಾಕಾರರಾಗಿ ಗಮನ ಸೆಳೆದಿದ್ದಾರೆ. ಮಾಜಿ ಕ್ರಿಕೆಟಿಗರಾದ ಸುನೀಲ್‌ ಗವಾಸ್ಕರ್‌, ಸೌರವ್‌ ಗಂಗೂಲಿ ಮತ್ತು ವಿರೇಂದ್ರ ಸೆಹ್ವಾಗ್‌ ಜತೆ ಕಾಮೆಂಟ್ರಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಚೆಂಸ್ಟರ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದ ಮೇಲೆ ಕ್ರೀಡಾಂಗಣಕ್ಕೆ ನುಗ್ಗಿ ನಾಯಕ ವಿರಾಟ್‌ ಕೋಹ್ಲಿ ಅವರನ್ನು ತಬ್ಬಿ ಕುಣಿದಾಡುವುದಲ್ಲದೇ ಭಾರತ ತಂಡದ ಎಲ್ಲ ಕ್ರಿಕೆಟಿಗರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸಚಿನ್‌ ತೆಂಡೂಲ್ಕರ್‌, ಶಿಖರ್‌ ಧವನ್‌ ಹಾರ್ದಿಕ್‌ ಪಾಂಡ್ಯ ಜತೆಗಿನ ಹಲವು ಫೋಟೊಗಳನ್ನು ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೊಣಕಾಲವರೆಗಿನ ಓವರ್‌ ಕೋಟ್‌, ಬಣ್ಣ, ಬಣ್ಣದ ಮಫ್ಲರ್‌, ಮುಖಕ್ಕಿಂತ ದೊಡ್ಡದಾದ ಕೂಲಿಂಗ್‌ ಗ್ಲಾಸ್‌ ಹಾಕಿರುವ ರಣವೀರ್‌ ಮತ್ತು ನೆಚ್ಚಿನ ಕ್ರಿಕೆಟಿಗರ ಜತೆಗಿನ ಚಿತ್ರಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಣವೀರ್‌ ಪಾತ್ರಗಳಿಗೆ ಮಾತ್ರವಲ್ಲ, ಕ್ರಿಕೆಟ್‌ ವೀಕ್ಷಕ ವಿವರಣೆಗೂ ಜೀವ ತುಂಬಿದ್ದಾರೆ ಎಂದು ನೆಟ್ಟಿಗರು ಹಾಡಿ ಹೊಗಳಿದ್ದಾರೆ.

ADVERTISEMENT

ಬಾಲಿವುಡ್‌ನಲ್ಲಿ ಅಜರ್‌, ಸಚಿನ್‌ ಅವರಂತಹ ಕ್ರಿಕೆಟಿಗರ ಬಯೋಪಿಕ್‌ಗಳು ತೆರೆಯ ಮೇಲೆ ಬಂದಿವೆ. ಭಾರತಕ್ಕೆ ಮೊದಲ ವಿಶ್ವಕಪ್‌ ಗೆಲ್ಲಿಸಿಕೊಟ್ಟ ಡೇರ್‌ ಡೆವಿಲ್‌ ಕಪಿಲ್‌ ದೇವ್‌ ಕುರಿತ ಬಯೋಪಿಕ್‌ನಲ್ಲಿ ರಣವೀರ್‌ ಸಿಂಗ್‌, ಕಪಿಲ್‌ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ರಣವೀರ್‌ ತಾರಾ ಪತ್ನಿ ದೀಪಿಕಾ ಪಡುಕೋಣೆ, ಕಪಿಲ್‌ ಪತ್ನಿ ರೋಮಿ ಭಾಟಿಯಾ ಪಾತ್ರ ನಿರ್ವಹಿಸಲಿದ್ದಾರೆ.ಕಪಿಲ್‌ ದೇವ್‌ ಜೀವನ ಚರಿತ್ರೆಯ ‘83’ ಚಿತ್ರವನ್ನು ‘ಭಜರಂಗಿ ಭಾಯಿಜಾನ್‌’ ಖ್ಯಾತಿಯ ಕಬೀರ್‌ ಖಾನ್‌ ನಿರ್ದೇಶಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.