ADVERTISEMENT

‘ರತ್ನಮಂಜರಿ’ ತೆರೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:43 IST
Last Updated 23 ಏಪ್ರಿಲ್ 2019, 20:43 IST
ಅಖಿಲಾ ಪ್ರಕಾಶ್‌
ಅಖಿಲಾ ಪ್ರಕಾಶ್‌   

‘ರತ್ನಮಂಜರಿ’ ಎಂದಾಕ್ಷಣ ‘ಯಾರು ಯಾರು ನೀ ಯಾರು’ ಹಾಡು ಥಟ್ಟನೆ ನೆನಪಾಗುತ್ತದೆ. ಅರವತ್ತರ ದಶಕದಲ್ಲಿ ತೆರೆಕಂಡ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚೊತ್ತಿದೆ. ಈಗ ಇದೇ ಶೀರ್ಷಿಕೆಯಡಿ ಮಾರ್ಡನ್‌ ‘ರತ್ನಮಂಜರಿ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಥ್ರಿಲ್ಲರ್‌, ಹಾರರ್‌ ಸಿನಿಮಾ ಇದು.

ಚಲನಚಿತ್ರ ಕಲಾವಿದರ ಸಂಘದ ಕಚೇರಿಯಲ್ಲಿ ಹಾಡುಗಳ ಬಿಡುಗಡೆಯೂ ನಡೆಯಿತು. ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರಂತೆ. ಆದರೆ, ರತ್ನಮಂಜರಿ ಯಾರು ಎನ್ನುವುದು ವೇದಿಕೆಯಲ್ಲಿ ಆಸೀನರಾಗಿದ್ದವರಿಗೆ ಕಾಡಿತು. ಅಂದಹಾಗೆ ಮೇ ಮೊದಲ ವಾರ ಜನರ ಮುಂದೆ ಬರಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ.

ಇದು ಪ್ರಸಿದ್ಧ್‌ ನಿರ್ದೇಶನದ ಮೊದಲ ಚಿತ್ರ. ಒಂದು ದಶಕದ ಹಿಂದೆ ಅವರು ಕಥೆಯೊಂದನ್ನು ಬರೆದುಕೊಂಡು ಸಂಗೀತ ನಿರ್ದೇಶಕ ಹಂಸಲೇಖ ಅವರ ಬಳಿಗೆ ಹೋಗಿದ್ದರಂತೆ. ಅವರು ಪ್ರೋತ್ಸಾಹ ನೀಡಿದ್ದರ ಪರಿಣಾಮವೇ ನಾನಿಂದು ಸಿನಿಮಾ ನಿರ್ದೇಶನ ಮಾಡಲು ಸಾಧ್ಯವಾಯಿತು ಎಂದು ಭಾವುಕರಾಗಿ ನುಡಿದರು.

ADVERTISEMENT

‘ಹಂಸಲೇಖ ಸರ್‌ ಅವರೊಟ್ಟಿಗೆ ಸಂಗೀತಮಯ ಚಿತ್ರವೊಂದನ್ನು ಮಾಡುವ ಆಸೆಯಿದೆ’ ಎಂದು ಹೇಳಿಕೊಂಡರು.

ನಾಯಕ ನಟ ರಾಜ್‌ ಚರಣ್‌ ಎನ್‌ಆರ್‌ಐ ಕನ್ನಡಿಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿರುತ್ತೇನೆ. ರತ್ನಮಂಜರಿ ಕಥೆಗೆ ನನ್ನ ಪಾತ್ರ ಹೇಗೆ ಸರಿಹೊಂದುತ್ತದೆ ಎನ್ನುವುದೇ ಚಿತ್ರದ ಹೂರಣ’ ಎಂದಷ್ಟೇ ಹೇಳಿದರು.

ನಾಯಕಿ ಅಖಿಲಾ ಪ್ರಕಾಶ್‌ಗೂ ರತ್ನಮಂಜರಿ ಯಾರು ಎನ್ನುವುದು ಗೊತ್ತಿಲ್ಲವಂತೆ. ‘ನನಗೂ ನಿರ್ದೇಶಕರು ಗುಟ್ಟು ಬಿಟ್ಟುಕೊಟ್ಟಿಲ್ಲ. ಸಿನಿಮಾ ಬಿಡುಗಡೆಗೆ ನಾನೂ ಕಾಯುತ್ತಿದ್ದೇನೆ’ ಎಂದರು.

ಸಂಗೀತ ಸಂಯೋಜಕ ಹಂಸಲೇಖ, ‘ಜನರು ರಾಜಕೀಯ ನಾಯಕರ ಭಾಷಣದಿಂದ ಬೇಸತ್ತಿದ್ದಾರೆ. ಹಾಗಾಗಿ, ಸಿನಿಮಾಕ್ಕೆ ಆಕರ್ಷಕ ಅಡಿಬರಹ ನೀಡಿ ಆಹ್ವಾನಿಸಿದರೆ ಚಿತ್ರಮಂದಿರಕ್ಕೆ ಬರುತ್ತಾರೆ’ ಎಂದು ಸಲಹೆ ನೀಡಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಚಿತ್ರತಂಡಕ್ಕೆ ಶುಭ ಕೋರಿದರು. ನಟರಾದ ಪುನೀತ್‌ ರಾಜ್‌ಕುಮಾರ್‌ ಮತ್ತು ವಸಿಷ್ಠ ಸಿಂಹ ಚಿತ್ರದ ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಎನ್‌ಆರ್‌ಐ ಕನ್ನಡಿಗರಾದ ಎಸ್. ಸಂದೀಪ್‌ಕುಮಾರ್‌, ನಟರಾಜ್ ಹಳೇಬೀಡು, ಡಾ.ನವೀನ್‌ಕೃಷ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹರ್ಷವರ್ಧನ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರೀತಮ್‌ ತಗ್ಗಿನಮನೆ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.