ADVERTISEMENT

‘ಶಕೀಲಾ’ ಎಂಬ ಸ್ಥಿತಪ್ರಜ್ಞೆ..ರಿಚಾ ಚಡ್ಡಾ ಮನದಾಳದ ಮಾತು

ರಿಚಾ ಚಡ್ಡಾ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 19:31 IST
Last Updated 24 ಡಿಸೆಂಬರ್ 2020, 19:31 IST
ರಿಚಾ ಚಡ್ಡಾ
ರಿಚಾ ಚಡ್ಡಾ   

ಒಂದು ಕಾಲದಲ್ಲಿ ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದ ಮಲಯಾಳಂ ನಟಿ ಶಕೀಲಾ ಅವರ ವೈಯಕ್ತಿಕ ಬದುಕು ಬೆಳ್ಳಿತೆರೆಯಲ್ಲಿ ಅವರದೇ ಹೆಸರಿನಲ್ಲಿ ಇದೇ 25ರಂದು ತೆರೆ ಕಾಣುತ್ತಿದೆ. ‘ಶಕೀಲಾ’ ಸಿನಿಮಾಕ್ಕೆ ಚಂದನವನದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಶಕೀಲಾ’ ಪಾತ್ರಧಾರಿಯಾಗಿ ನಟಿಸಿರುವ ಬಾಲಿವುಡ್‌ ನಟಿ ರಿಚಾ ಚಡ್ಡಾ ಸಿನಿಮಾ ಕುರಿತಂತೆ ತಮ್ಮ ಅನುಭವಗಳನ್ನು ‘ಪ್ರಜಾಪ್ಲಸ್‌’ನೊಂದಿಗೆ ಹಂಚಿಕೊಂಡಿದ್ದಾರೆ.

‘ಶಕೀಲಾ’ ಸಿನಿಮಾ ಒಪ್ಪಿಕೊಂಡಿದ್ದು ಯಾವ ಕಾರಣಕ್ಕಾಗಿ?

ಕಾಲ್ಪನಿಕ ಕಥೆಗಳಿಗಿಂತ ನೈಜ ಜೀವನಾಧಾರಿತ ಕಥೆಗಳ ಸಿನಿಮಾ ಮಾಡುವುದು ಸವಾಲಿನ ಸಂಗತಿ. ನಿಜ ಜೀವನವು ಜನರಿಗೆ ಹತ್ತಿರವಾಗುತ್ತದೆ. ತೆರೆ ಮೇಲಿನ ಶಕೀಲಾ ಅವರನ್ನು ಆರಾಧಿಸುವ ದೊಡ್ಡ ಸಮೂಹವೇ ಇದೆ. ಆದರೆ, ಆಕೆಯ ವೈಯಕ್ತಿಕ ಜೀವನ ಹಾಗಿಲ್ಲ. ಈ ಸಂಗತಿ ನನಗೆ ಬಹುವಾಗಿ ಕಾಡಿತು. ಹಾಗಾಗಿ, ಈ ಸಿನಿಮಾ ಮಾಡಲು ಒಪ್ಪಿಕೊಂಡೆ.

ADVERTISEMENT

ಇದು ಮತ್ತೊಂದು ‘ಡರ್ಟಿ ಪಿಕ್ಚರ್’ ಆಗುತ್ತಾ?

ಖಂಡಿತಾ ಇದು ಮತ್ತೊಂದು ‘ಡರ್ಟಿ ಪಿಕ್ಚರ್’ ಅಂತ ನನಗನ್ನಿಸಿಲ್ಲ. ಸಿಲ್ಕ್ ಸ್ಮಿತಾ ಅವರ ಸಾವಿನ ನಂತರದ ಸ್ಥಾನವನ್ನು ತುಂಬಿದವರು ಶಕೀಲಾ. ಸಿಲ್ಕ್ ಸ್ಮಿತಾ ಮತ್ತು ಶಕೀಲಾ ಇಬ್ಬರ ಬದುಕು ಭಿನ್ನ ಹಾದಿಯಲ್ಲಿ ಸಾಗಿರುವಂಥದ್ದು. ಒಂದು ವೇಳೆ ಈ ಸಿನಿಮಾವನ್ನು ಜನರು ‘ಡರ್ಟಿ ಪಿಕ್ಚರ್’ ಜೊತೆಗೆ ಹೋಲಿಸಿದರೆ ನನಗೆ ತಪ್ಪೆಂದು ಅನಿಸುವುದಿಲ್ಲ. ನಿಜ ಹೇಳಬೇಕೆಂದರೆ ನಾನು ನಟಿ ವಿದ್ಯಾ ಬಾಲನ್ ಅವರ ದೊಡ್ಡ ಅಭಿಮಾನಿ. ಒಂದು ವೇಳೆ ಆ ಸಿನಿಮಾದೊಂದಿಗೆ ಹೋಲಿಸಿದರೂ ಅದರಲ್ಲಿ ತಪ್ಪೇನಿದೆ? ವಿದ್ಯಾ ಅವರು ಅಭಿನಯಿಸಿದ ಸಿನಿಮಾದೊಂದಿಗೆ ಹೋಲಿಸುವುದು ಒಂದು ರೀತಿಯಲ್ಲಿ ಒಳ್ಳೆಯದೇ ಅನಿಸುತ್ತೆ ನನಗೆ.

ನೀವು ಕಂಡಂತೆ ರಿಯಲ್ ಲೈಫ್ ಶಕೀಲಾ, ರೀಲ್ ಲೈಫ್ ಶಕೀಲಾ ಎರಡರಲ್ಲಿ ವ್ಯತ್ಯಾಸಗಳೇನು?

ಶಕೀಲಾ ಅಂದಾಕ್ಷಣ ಬಹುತೇಕರಿಗೆ ಅವರಿಗೆ ಬೋಲ್ಡ್ ಸೀನ್‌ಗಳೇ ನೆನಪಾಗುವುದು ಸಹಜ. ಅದು ಅವರ ವೃತ್ತಿ ಜೀವನವಾಗಿತ್ತು. ಆದರೆ, ನಿಜ ಜೀವನದಲ್ಲಿ ಶಕೀಲಾ ಅವರದ್ದು ಅದಕ್ಕೆ ತದ್ವಿರುದ್ಧದ ಪಾತ್ರ. ಇತರ ಮುಸ್ಲಿಂ ಹೆಣ್ಣುಮಕ್ಕಳಂತೆ ಅವರೂ ಬುರ್ಖಾ ಧರಿಸಿ, ಮಾರುಕಟ್ಟೆಗೆ ಹೋಗಿ ಹಣ್ಣು–ತರಕಾರಿ ಖರೀದಿಸುತ್ತಾರೆ. ಇತರರಂತೆ ಸಹಜವಾಗಿ ಬದುಕುತ್ತಿದ್ದಾರೆ. ಅವರಲ್ಲಿ ಯಾವುದೇ ಆಡಂಬರಗಳಿಲ್ಲ. ಅವರದ್ದು ಬಹಳ ಸರಳ ವ್ಯಕ್ತಿತ್ವ. ಶಕೀಲಾ ಅವರ ಚಿತ್ರ ಜೀವನ, ವೈಯಕ್ತಿಕ ಜೀವನ ಎರಡೂ ಭಿನ್ನ. ಶಕೀಲಾ ಅವರ ವೈಯಕ್ತಿಕ ಬದುಕಿನ ಬಗ್ಗೆಯೇ ಈ ಸಿನಿಮಾ ಹೆಚ್ಚು ಕೇಂದ್ರಿಕೃತವಾಗಿದೆ. ಇದುವರೆಗೆ ನೀವು ತೆರೆಯ ಮೇಲೆ ಕಂಡಿರುವ ಶಕೀಲಾ ಇಲ್ಲಿಲ್ಲ. ಇಲ್ಲಿ ಬೇರೆಯ ಶಕೀಲಾ ನಿಮಗೆ ಕಾಣುತ್ತಾರೆ. ನಿಜ ಜೀವನದಲ್ಲಿ ತಾವು ಕಷ್ಟದಲ್ಲಿದ್ದಾಗಲೂ ಒಬ್ಬರನ್ನು ದತ್ತು ಪಡೆದು ಸಾಕುವಂಥ ವ್ಯಕ್ತಿತ್ವ ಅವರದ್ದು. ಅವರ ಈ ಗುಣ ನನಗೆ ಬಹುವಾಗಿ ಆಕರ್ಷಿಸಿತು.

ಶಕೀಲಾ ಅಂದರೆ ನಿಮ್ಮ ಮಾತಿನಲ್ಲಿ...

ಶಕೀಲಾ ಒಂದು ಪವಿತ್ರ ಆತ್ಮ. ತಮ್ಮ ಕುಟುಂಬದ ಹಿತಕ್ಕಾಗಿ ದುಡಿದ ಅವರನ್ನೇ ಆ ಕುಟುಂಬ ದೂರಿವಿಟ್ಟಿದೆ. ಆದರೂ ಶಕೀಲಾ ಅವರಿಗೆ ತಮ್ಮ ಕುಟುಂಬದ ಬಗ್ಗೆ ಯಾವುದೇ ದೂರು–ದುಮ್ಮಾನಗಳಿಲ್ಲ. ‘ಸಿನಿಮಾ ಜೀವನದಲ್ಲಿ ದೊಡ್ಡ ದೊಡ್ಡ ನಾಯಕರನ್ನು ಎದುರು ಹಾಕಿಕೊಂಡಿದ್ರಲ್ಲಾ ಭಯವಾಗಲಿಲ್ವಾ?’ ಅಂತ ಕೇಳಿದರೆ, ‘ಇಲ್ಲ ಭಯವಾಗಲಿಲ್ಲ. ಆ ದೇವರೇ ಎಲ್ಲವನ್ನೂ ಕೊಡುತ್ತಾನೆ. ಕೊಟ್ಟಿದ್ದಾನೆ’ ಅಂತಾರೆ. ವೈಯಕ್ತಿಕ ಜೀವನ ಕಳೆದುಕೊಂಡರೂ ಅದರಿಂದ ಅವರು ಒಂದಿಷ್ಟೂ ವಿಚಲಿತರಾಗಿಲ್ಲ. ನಮ್ಮ ವೈಯಕ್ತಿಕ ಬದುಕಿನಲ್ಲಿ ಸಣ್ಣದೊಂದು ಘಟನೆ ಸಂಭವಿಸಿದರೂ ವಿಚಲಿತರಾಗುವ ನಾವು ಕುಟುಂಬದ ಬೆಂಬಲ ಬೇಡುತ್ತೇವೆ. ಆದರೆ, ಅದ್ಯಾವುದೂ ಇಲ್ಲದೇ ಶಕೀಲಾ ಸ್ಥಿತಪ್ರಜ್ಞರಾಗಿ ಬದುಕುತ್ತಿರುವುದು ನಿಜಕ್ಕೂ ಸೋಜಿಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.