ADVERTISEMENT

ರೌಡಿಸಂ ಕಥೆ ಬಿಚ್ಚಿಡಲಿದೆ ‘ಕಲಿಯುಗದ ಕಂಸ’

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:30 IST
Last Updated 15 ಮೇ 2020, 19:30 IST
ನಟ ಸಂದೀಪ್ ಕಲಿಯುಗದ ಕಂಸ ಚಿತ್ರದಲ್ಲಿ
ನಟ ಸಂದೀಪ್ ಕಲಿಯುಗದ ಕಂಸ ಚಿತ್ರದಲ್ಲಿ   

ಮಚ್ಚು, ಲಾಂಗುಗಳ ಜಳಪಿಸುವಿಕೆ ಇಲ್ಲದೆ ರೌಡಿಯೊಬ್ಬ ತನ್ನ ಚತುರತೆಯಿಂದಲೇ ಎಬ್ಬಿಸುವ ಹವಾದ ಅಸಲಿ ಕಥೆಯನ್ನು ‘ಕಲಿಯುಗದ ಕಂಸ’ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕಬಿ.ವಿ.ಎಚ್. ಪ್ರಸಾದ್.

ಕಲಿಯುಗದ ಕಂಸನಾಗಿ ನಟಿಸುತ್ತಿರುವ ನವ ನಟ ಸಂದೀಪ್‌ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇವರ ಜನ್ಮದಿನದಂದು ಚಿತ್ರದ 48 ಸೆಕೆಂಡ್‌ಗಳ ಮೋಷನ್‌ ಪೋಸ್ಟರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಎ2 ಮ್ಯೂಜಿಕ್’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವಈ ಮೋಷನ್ ಪೋಸ್ಟರ್ ಅನ್ನು ತೆಲುಗಿನ ‘ಬಾಹುಬಲಿ’ ಹಾಗೂ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾಗಳನ್ನು ಸಂಕಲನ ಮಾಡಿದ್ದ ರಾಮ್ ಬಾಬು ಸಂಕಲನ ಮಾಡಿದ್ದಾರೆ.

‘ಗುಜರಾತ್‌ನಲ್ಲಿ ನಡೆದ ಒಂದು ನೈಜ ಘಟನೆ ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ.ಕಥಾ ನಾಯಕ ತನ್ನ ಬುದ್ಧಿಶಕ್ತಿಯಿಂದ ‘ಕಂಸ’ನಾಗುವ ಬಗೆಯನ್ನು ಆ್ಯಕ್ಷನ್‌ ಮತ್ತು ಥ್ರಿಲ್ಲರ್‌ ಜಾನರ್‌ನಲ್ಲಿ ಕಟ್ಟಿಕೊಡಲಿದ್ದೇನೆ. ಜುಲೈನಲ್ಲಿ ಚಿತ್ರೀಕರಣ ಆರಂಭಿಸುವ ಯೋಜನೆ ಇದೆ’ ಎನ್ನುತ್ತಾರೆ ನಿರ್ದೇಶಕ‌ಪ್ರಸಾದ್‌.

ADVERTISEMENT

ಮಂಬೈನಲ್ಲಿ ಅಭಿನಯ ತರಬೇತಿ ಪಡೆದಿರುವ ಸಂದೀಪ್‌, ಪಾತ್ರಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ರಂಗಭೂಮಿಯ ಪರಿಣತರಿಂದಲೂ ನಟನೆಯ ಟಿಪ್ಸ್‌ ಪಡೆದಿದ್ದಾರೆ. ನೃತ್ಯ ಮತ್ತು ಸಾಹಸಗಳಲ್ಲೂ ಪಳಗಿದ್ದಾರೆ ಎನ್ನುವ ಮಾತು ಸೇರಿಸಿದರು ಪ್ರಸಾದ್‌.

2007ರಲ್ಲಿ ರಮೇಶ್ ಅರವಿಂದ್ ನಟನೆಯ ‘ಸೌಂದರ್ಯ’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದಶ್ರೇಯ ಶರ್ಮ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಕನ್ನಡ ಚಿತ್ರ ‘ರಾಜ ರಥ’ದಲ್ಲಿ ನಟಿಸಿದ್ದತಮಿಳಿನ ಜನಪ್ರಿಯ ನಟ ಆರ್ಯ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಹರೀಶ್ ರೈ ತಾರಾಗಣದಲ್ಲಿದ್ದಾರೆ.

ಈ ಚಿತ್ರಕ್ಕೆ ಸಂದೀಪ್‌ ಸಹೋದರದಿಲೀಪ್ ಕುಮಾರ್ ಹಾಗೂ ಸಹೋದರಿ ಶ್ರೀಮತಿ ದೇವಕಿ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣಪ್ರಖ್ಯಾತ್ ನಾರಾಯಣ್, ಸಂಗೀತ ನಿರ್ದೇಶನ ಲೋಕಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.