ಚಂದನವನದಲ್ಲಿ ಸೂಪರ್‌ಹಿಟ್ ಚಿತ್ರಗಳ ಶೀರ್ಷಿಕೆ ಮರುಬಳಕೆ ಆಗುವುದು ಹೊಸದೇನಲ್ಲ. ಈಗ ಡೈನಾಮಿಕ್ ಸ್ಟಾರ್ ದೇವರಾಜ್ ನಟನೆಯ ‘ಹುಲಿಯಾ’ ಚಿತ್ರದ ಶೀರ್ಷಿಕೆ ಮರುಬಳಕೆ ಮಾಡಿಕೊಂಡು ಹೊಸ ಚಿತ್ರವೊಂದು ತಯಾರಾಗುತ್ತಿದೆ.
‘ತೂತುಮಡಿಕೆ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ, ನಟ ಚಂದ್ರಕೀರ್ತಿ ಎರಡನೇ ಸಿನಿಮಾಗೆ ‘ಹುಲಿಯಾ’ ಎಂಬ ಶೀರ್ಷಿಕೆ ಇಡಲಾಗಿದೆ.
‘ಸಿಲಿಕಾನ್ ಸಿಟಿ’, ‘ಕಿಸ್’, ‘ಮೂಕವಿಸ್ಮಿತ’, ‘ಬೆಂಕಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಚಂದ್ರಕೀರ್ತಿ ‘ತೂತುಮಡಿಕೆ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ‘ಹುಲಿಯಾ’ ಚಿತ್ರದ ಮೂಲಕ ಪ್ರೀತಿ ಹಾಗೂ ಆ್ಯಕ್ಷನ್ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಮುಂದೆ ಹಾಜರಾಗುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಚಂದ್ರಕೀರ್ತಿ ನಾಯಕನಾಗಿಯೂ ನಟಿಸುತ್ತಿದ್ದಾರೆ.
‘ಹುಲಿಯಾ’ ಪೋಸ್ಟರ್‌ನಲ್ಲಿ ಅವರು ರಗಡ್ ಆಗಿ ಕಾಣಿಸಿಕೊಂಡಿದ್ದು, ‘ತೂತುಮಡಿಕೆ’ ಸಿನಿಮಾ ನಿರ್ಮಾಣ ಮಾಡಿದ್ದ ಸರ್ವತಾ ಸಿನಿ ಗ್ಯಾರೇಜ್, ಮಧು ರಾವ್ ಹಾಗೂ ವಸಂತ್ ವಲ್ಲಭ್ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಸ್ವಾಮಿನಾಥನ್ ಆರ್. ಕೆ. ಸಂಗೀತ, ಭಜರಂಗಿ, ವೇದ ಹಾಗೂ ‘ಬೆಲ್ ಬಾಟಂ’ ಸಂಭಾಷಣೆಗಾರ ರಘು ನಿಡುವಳ್ಳಿ ಮಾತು ಚಿತ್ರಕ್ಕಿದೆ. ಉಳಿದ ತಾಂತ್ರಿಕ ಹಾಗೂ ತಾರಾಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದ್ದೇವೆ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.