ದಶಕದ ಹಿಂದೆ ತೆರೆಕಂಡಿದ್ದ ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಸಿನಿಮಾ ಕಥೆ ಹಾಗೂ ಹಾಡುಗಳಿಂದ ಜನರನ್ನು ಸೆಳೆದಿತ್ತು. ಕಳೆದ ಜನವರಿಯಲ್ಲಿ ನಾಗಶೇಖರ್ ಅವರೇ ‘ಸಂಜು ವೆಡ್ಸ್ ಗೀತಾ–2’ ತೆರೆ ಮೇಲೆ ತಂದಿದ್ದರು. ಆದರೆ ಮೂರೇ ದಿನಗಳಲ್ಲಿ ಈ ಸಿನಿಮಾದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತಷ್ಟು ದೃಶ್ಯಗಳನ್ನು ಸೇರಿಸಿ ಇದೇ ಸಿನಿಮಾವನ್ನು ಮರುಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಸಿನಿಮಾ ಜೂನ್ 6ರಂದು ಮರುಬಿಡುಗಡೆಯಾಗಲಿದೆ. ‘ರಿಲೀಸ್‌ಗೆ ಮೂರು ದಿನ ಇರುವಾಗ ಸಿನಿಮಾ ಬಿಡುಗಡೆಗೆ ಕೋರ್ಟ್‌ನಿಂದ ತಡೆ ತಂದಿದ್ದರಿಂದ ನಮಗೆ ತೊಂದರೆ ಆಗಿತ್ತು. ಎಲ್ಲಾ ಚಿತ್ರಮಂದಿರಗಳು ನಿಗದಿಯಾಗಿದ್ದರಿಂದ ತರಾತುರಿಯಲ್ಲಿ ತಡೆ ತೆಗೆಸಿ ಸಿನಿಮಾ ಬಿಡುಗಡೆ ಮಾಡಿದ್ದೆವು. ಆನಂತರ ಮೂರು ದಿನದಲ್ಲಿ ಸಿನಿಮಾ ನಿಲ್ಲಿಸಿದ್ದೆವು. ಈಗ 20 ನಿಮಿಷಗಳ ಪ್ರಮುಖವಾದ ಹೃದಯಸ್ಪರ್ಶಿ ದೃಶ್ಯಗಳನ್ನು ಸೇರಿಸಿ ಮರುಬಿಡುಗಡೆ ಮಾಡುತ್ತಿದ್ದೇವೆ’ ಎಂದರು ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್.
‘ನಾನೇ ಈ ಚಿತ್ರದ ನಿರ್ಮಾಪಕ ಎಂದುಕೊಂಡವರು ನ್ಯಾಯಾಲಯದಿಂದ ತಡೆ ತಂದಿದ್ದರು. ಆ ಸಂದರ್ಭದಲ್ಲಿ ಗ್ರಾಫಿಕ್ಸ್ ಕೆಲಸಗಳು ಬಾಕಿ ಇದ್ದವು. 21 ನಿಮಿಷದ ಸಿಜಿ ಸಿದ್ಧವಾಗಿ ಕೈಸೇರುವ ಸಂದರ್ಭದಲ್ಲೂ ತಡೆ ಇತ್ತು. ಹೀಗಾಗಿ ಆ ದೃಶ್ಯಗಳಿಲ್ಲದೇ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ರಿವರ್ಕ್ ಮಾಡಿದ್ದೇವೆ. ಇದಕ್ಕೇ ಸುಮಾರು ₹50 ಲಕ್ಷ ಖರ್ಚು ಆಗಿದೆ. ಮತ್ತೆ ಕೋಟ್ಯಂತರ ರೂಪಾಯಿ ಹಾಕಿ ನಿರ್ಮಾಪಕರು ರಿರಿಲೀಸ್ ಮಾಡುತ್ತಿದ್ದಾರೆ. ಸಿನಿಮಾ ಈ ಬಾರಿ ಹಿಟ್ ಆಗಿಯೇ ಆಗುತ್ತದೆ. ಸಿನಿಮಾ ಈ ಹಿಂದೆ 2 ಗಂಟೆ 02 ನಿಮಿಷವಿತ್ತು. ಜೂನ್ 2ರಂದು ಪ್ರಿರಿಲೀಸ್ ಕಾರ್ಯಕ್ರಮ ಮಾಡಲಿದ್ದೇವೆ’ ಎಂದರು ನಾಗಶೇಖರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.