ADVERTISEMENT

ಜನರಿಗೊಂದು ಸುವರ್ಣಾವಕಾಶ!

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 19:30 IST
Last Updated 19 ನವೆಂಬರ್ 2018, 19:30 IST
ಧನ್ಯಾ ಮತ್ತು ರಿಷಿ
ಧನ್ಯಾ ಮತ್ತು ರಿಷಿ   

ಕೆಲವು ನಿರ್ದೇಶಕರು ಇಂಗ್ಲಿಷ್‌ ಪದ, ಅಂಕಿಗಳನ್ನು ಸಿನಿಮಾಕ್ಕೆ ಶೀರ್ಷಿಕೆಯಾಗಿಟ್ಟು ಜನರನ್ನು ಸೆಳೆಯಲು ಯತ್ನಿಸುತ್ತಾರೆ. ಇತ್ತೀಚೆಗೆ ಕನ್ನಡ ಶೀರ್ಷಿಕೆಗಳು ಪ್ರೇಕ್ಷಕರ ಗಮನಸೆಳೆಯುತ್ತಿವೆ. ‘ದಯವಿಟ್ಟು ಗಮನಿಸಿ’, ‘ಸಾರ್ವಜನಿಕರಲ್ಲಿ ವಿನಂತಿ’, ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರ ಶೀರ್ಷಿಕೆಗಳು ಇದಕ್ಕೆ ನಿದರ್ಶನ. ಕನ್ನಡ ಶಬ್ದಕೋಶ ಹುಡುಕಿ ತೆಗೆದು ಪೋಣಿಸಿದಂತಿರುವ ಶೀರ್ಷಿಕೆಗಳ ಸಾಲಿಗೆ ಈಗ ಹೊಸ ಶೀರ್ಷಿಕೆಯೊಂದು ಸೇರ್ಪಡೆಯಾಗಿದೆ. ಆ ಚಿತ್ರದ ಹೆಸರು ‘ಸಾರ್ವಜನಿಕರಿಗೆ ಸುವರ್ಣಾವಕಾಶ’.

ಇತ್ತೀಚೆಗೆ ಕಂಠೀರವ ಸ್ಟುಡಿಯೊದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಅನೂಪ್‌ ರಾಮಸ್ವಾಮಿ ಕಶ್ಯಪ್ ಇದನ್ನು ನಿರ್ದೇಶಿಸುತ್ತಿದ್ದಾರೆ. ‘ಆಪರೇಷನ್‌ ಅಲಮೇಲಮ್ಮ’ ಚಿತ್ರದ ಖ್ಯಾತಿಯ ರಿಷಿ ಇದರ ನಾಯಕ.

‘ಆಧುನಿಕ ಯುಗದಲ್ಲಿ ಎಲ್ಲರೂ ಆಸೆಪಡುವ ವಸ್ತುವಿನ ಆಧಾರದ ಮೇಲೆ ಈ ಚಿತ್ರದ ಕಥೆ ಸಾಗಲಿದೆ. ನಾಯಕ ತನ್ನ ಪ್ರಿಯತಮೆಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾನೆ. ಆತ ಒಂದು ಘಟನೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾನೆ ಎನ್ನುವುದೇ ಕಥಾಹಂದರ’ ಎಂದರು ನಿರ್ದೇಶಕ ಅನೂಪ್‌ ರಾಮಸ್ವಾಮಿ ಕಶ್ಯಪ್ .

ADVERTISEMENT

ಬೆಂಗಳೂರು, ವೈನಾಡು, ಚಿಕ್ಕಮಗಳೂರಿನ ಸುತ್ತಮುತ್ತ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ. ರಂಗಾಯಣ ರಘು ಇಲ್ಲಿಯವರೆಗೂ ನಟಿಸದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕರು ಕುತೂಹಲದ ಬೀಜ ಬಿತ್ತಿದರು.

ಧನ್ಯಾ ಬಾಲಕೃಷ್ಣ ಈ ಚಿತ್ರದ ನಾಯಕಿ. ಈಕೆ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರ ಮೊಮ್ಮಗಳು. ‘ಚಿತ್ರದಲ್ಲಿ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಮಾಹಿತಿ ನೀಡಿದರು.

‘ನನ್ನ ನಾಲ್ಕನೇ ಚಿತ್ರದಲ್ಲಿ ಎಂ.ಬಿ.ಎ. ವಿದ್ಯಾರ್ಥಿಯಾಗಿದ್ದೇನೆ. ಪೋಸ್ಟರ್‌ನಲ್ಲಿ ಸ್ಪೀಕರ್ ಹಿಡಿದುಕೊಂಡಿರುವುದು ಸಿನಿಮಾಕ್ಕೆ ಪೂರಕವಾಗಿದೆ. ಅದು ಏನು ಎಂಬುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ’ ಎಂದು ನಕ್ಕರು ನಾಯಕ ರಿಷಿ.

ಛಾಯಾಗ್ರಹಣ ವಿಜ್ಞೇಶ್‌ ರಾಜ್ ಅವರದ್ದು. ಐದು ಹಾಡುಗಳಿಗೆ ಮಿಧುನ್‌ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಆರ್. ದೇವರಾಜ್‌, ಪ್ರಶಾಂತ್‌ ರೆಡ್ಡಿ, ಜನಾರ್ದನ್‌ ಚಿಕ್ಕಣ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.