ADVERTISEMENT

ಶರಣ್‌ ವಿಷಲ್‌ ಹೊಡೆದಿದ್ದು ಗುರುಶಿಷ್ಯರಿಗಾಗಿ!

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 11:20 IST
Last Updated 21 ಡಿಸೆಂಬರ್ 2020, 11:20 IST
ಗುರು ಶಿಷ್ಯರು
ಗುರು ಶಿಷ್ಯರು   

ಕೊರೊನಾ ಲಾಕ್‌ಡೌನ್‌ ವೇಳೆ ಸ್ಯಾಂಡಲ್‌ವುಡ್‌ ನಟ ಶರಣ್‌ ಮನೆಯಲ್ಲಿ ಕುಂತಲ್ಲಿ, ನಿಂತಲ್ಲಿ ವಿಷಲ್‌ ಹೊಡಿತಾ ಇದ್ದರು. ಅವರ ದೈನಂದಿನ ಮಾತುಕತೆ, ಪ್ರಶ್ನೆ, ಉತ್ತರ, ಪ್ರತಿಕ್ರಿಯೆ ಎಲ್ಲವೂ ವಿಷಲ್‌ಮಯವಾಗಿದ್ದವು! ಶರಣ್‌ ಯಾಕಪ್ಪಾ ಹೀಗೆ ಎಂದು ಸಿನಿಪ್ರಿಯರು ತಲೆ ಕೆರೆದುಕೊಳ್ಳುತ್ತಿದ್ದರು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಅವರು ವಿಷಲ್‌ ಹೊಡೆಯುವುದನ್ನು ಅಭ್ಯಾಸ ಮಾಡುತ್ತಿದ್ದುದು ‘ಗುರುಶಿಷ್ಯರು’ ಸಂಬಂಧ ಹೇಳಲಿಕ್ಕೆ. ಅಂದರೆ ಅವರ ಹೊಸ ಚಿತ್ರದ ಹೆಸರು ‘ಗುರು ಶಿಷ್ಯರು’. ಈ ಚಿತ್ರದ ಶೀರ್ಷಿಕೆ ಮತ್ತು ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ಗುರು ಶಿಷ್ಯರು ಎಂದಾಕ್ಷಣ ಹಿರಿಯ ನಟ ದ್ವಾರಕೀಶ್‌ ಮತ್ತು ಡಾ.ವಿಷ್ಣುವರ್ಧನ್‌ ಅವರ ನಟನೆಯ ‘ಗುರು ಶಿಷ್ಯರು’ಚಿತ್ರ ನೆನಪಾಗುವುದು ಸಹಜ. 1981ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ದ್ವಾರಕೀಶ್‌ ಅವರೇ ನಿರ್ಮಿಸಿದ್ದರು. ಎಚ್‌.ಆರ್‌. ಭಾರ್ಗವ ನಿರ್ದೇಶಿಸಿದ್ದರು. ಈ ಚಿತ್ರದ ಟೈಟಲ್‌ ಅನ್ನು ಆಯ್ಕೆ ಮಾಡಿಕೊಂಡಿರುವ ಶರಣ್‌ ಮತ್ತು ತರುಣ್‌ ತಂಡ, ಪೋಸ್ಟರ್‌ನಲ್ಲಿರುವ ಅಡಿ ಟಿಪ್ಪಣಿ ಸುಳಿವು ನೀಡುವಂತೆ 1995ರ ಅವಧಿಯ ಕಥೆಯೊಂದನ್ನು ತೆರೆಯ ಮೇಲೆ ತರಲಿದೆ.

ಈ ಚಿತ್ರದ ಮೋಷನ್‌ ಪೋಸ್ಟರ್‌ ಅನ್ನು ದ್ವಾರಕೀಶ್‌ ಅವರೇ ಅನಾವರಣಗೊಳಿಸಿ, ಶರಣ್‌ ಮತ್ತು ಚಿತ್ರತಂಡವನ್ನು ಬೆನ್ನುತಟ್ಟಿದ್ದಾರೆ.

ADVERTISEMENT

ಇನ್ನು ಟೈಟಲ್‌ ಪರಿಚಯಿಸುವ ಈ ಮೋಷನ್‌ ಪೋಸ್ಟರ್‌ ಅನ್ನು ಚಿತ್ರತಂಡ ತುಂಬ ಸೃಜನಾತ್ಮಕವಾಗಿಯೇ ರೂಪಿಸಿದೆ. ಶರಣ್‌ ನಟನೆ ಇದ್ದ ಮೇಲೆ ಅದರಲ್ಲಿ ಕಾಮಿಡಿ ಇರಲೇಬೇಕಲ್ಲಾ, ಈ ಚಿತ್ರ ಗುರುಶಿಷ್ಯರ ಸಂಬಂಧವನ್ನಷ್ಟೇ ಬಿಡಿಸಿಡುವುದಿಲ್ಲ, ಭರಪೂರ ಹಾಸ್ಯ ರಸಾಯನವನ್ನೂ ಸಿನಿರಸಿಕರಿಗೆ ಉಣಬಡಿಸಲಿದೆ ಎನ್ನುವುದನ್ನು ಶರಣ್‌ ಅವರ ಡೈಲಾಗುಗಳೇ ಸೂಚನೆ ಕೊಡುತ್ತವೆ. ‘ಹೀರೋಯಿನ್‌ ಸೆಲೆಕ್ಟ್‌ ಆಯ್ತಾ, ಟೈಟಲ್‌ ಏನೋ ಹಳೆಯದೆನ್ನೇ ಎತ್ತಿಕೊಂಡ್ರಿ, ಕಥೆ ಹೊಸದು ತಾನೇ’ ಎಂದು ಶರಣ್‌ ಕೇಳುವ ಪ್ರಶ್ನೆಗಳು ತಕ್ಷಣಕ್ಕೆ ನಗುಮೂಡಿಸುತ್ತವೆ.

ಈ ಚಿತ್ರವನ್ನು ಜಡೇಶ್‌ ಕೆ. ಹಂಪಿ ನಿರ್ದೇಶನ ಮಾಡಲಿದ್ದು, ಲಡ್ಡು ಸಿನಿಮಾಸ್‌ ಹೌಸ್‌ ಮತ್ತು ತರುಣ್‌ ಸುಧೀರ್‌ ಕ್ರಿಯೇಟಿವ್ಸ್‌ ಜಂಟಿಯಾಗಿ ಈ ಚಿತ್ರ ನಿರ್ಮಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.