ADVERTISEMENT

ಲಂಡನ್‌ ಬೀದಿಯಲ್ಲಿ ಶ್ರದ್ದಾ –ವರುಣ್‌ ರೋಮಾನ್ಸ್!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:30 IST
Last Updated 21 ಫೆಬ್ರುವರಿ 2019, 19:30 IST
‘ಸ್ಟ್ರೀಟ್ ಡಾನ್ಸರ್‌ 3ಡಿ’ ಶ್ರದ್ಧಾ ಕಪೂರ್‌– ವರುಣ್‌ ಧವನ್‌
‘ಸ್ಟ್ರೀಟ್ ಡಾನ್ಸರ್‌ 3ಡಿ’ ಶ್ರದ್ಧಾ ಕಪೂರ್‌– ವರುಣ್‌ ಧವನ್‌   

ಲಂಡನ್‌ ಬೀದಿಗಳಲ್ಲಿ ಸುತ್ತುವುದು ಶ್ರದ್ಧಾ ಕಪೂರ್‌ಗೆ ಬಹಳ ಇಷ್ಟ. ಕೆಲದಿನಗಳಿಂದ ಅವರು ಹೊತ್ತಲ್ಲದ ಹೊತ್ತಲ್ಲಿ ಅಲ್ಲಿನ ಬೀದಿಗಳಲ್ಲಿ ಸುತ್ತಾಡುತ್ತಾ ಮನಸೋ ಇಚ್ಛೆ ಮೋಜು ಮಾಡುತ್ತಿದ್ದಾರೆ. ಒಬ್ಬರೇನಾ? ಬಿಲ್‌ಕುಲ್‌ ಅಲ್ಲ.‘ಎಬಿಸಿಡಿ 2’ಯ ಜೋಡಿ ವರುಣ್‌ ಧವನ್‌ ಜೊತೆ!

ಹೌದು, ಶ್ರದ್ಧಾ ಮತ್ತು ವರುಣ್‌ ಲಂಡನ್‌ ಬೀದಿಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಬೆರಗಾಗಬೇಡಿ. ರೆಮೊ ಡಿಸೋಜಾ ನಿರ್ದೇಶನದ ‘ಸ್ಟ್ರೀಟ್‌ ಡಾನ್ಸ್‌ 3ಡಿ’ ಚಿತ್ರದ ಎರಡನೇ ಹಂತದ ಚಿತ್ರೀಕರಣದ ಸನ್ನಿವೇಶಗಳಿವು. ‘ಎಬಿಸಿಡಿ 2’ನಲ್ಲಿ ಮೋಡಿ ಮಾಡಿದ್ದ ಪ್ರಭುದೇವ ಕೂಡಾ ರೆಮೊ ಕ್ಯಾಂಪ್‌ ಸೇರಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗ ಹಿಂದೆಂದೂ ಕಂಡಿರದಂತಹ ಅದ್ಧೂರಿ ಮತ್ತು ವಿಭಿನ್ನ ನೃತ್ಯಗಳನ್ನು ‘ಸ್ಟ್ರೀಟ್‌ ಡಾನ್ಸ್‌’ನಲ್ಲಿ ತೋರಿಸುವುದು ರೆಮೊ ಉದ್ದೇಶ. ಅದಕ್ಕಾಗಿ ಶ್ರದ್ಧಾ ಕೂಡಾ ಬೆವರು ಸುರಿಸುತ್ತಿದ್ದಾರೆ. ಗಾಳಿಯಲ್ಲಿ ಅಷ್ಟೆತ್ತರ ಜಂಪ್‌ ಮಾಡಿರುವ ನೃತ್ಯದ ಭಂಗಿಯೊಂದನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದರು.

ADVERTISEMENT

‘ಸ್ಟ್ರೀಟ್‌ ಡಾನ್ಸ್‌’ನ ಮೊದಲ ಹಂತದ ಚಿತ್ರೀಕರಣ ಅಮೃತಸರದಲ್ಲಿ ಮುಗಿದಿದೆ. ವರುಣ್‌ ಧವನ್‌ ಜೊತೆ ಪಂಜಾಬಿ ನಟಿ ಸೋನಂ ಬಜ್ವಾ ಈ ಹಂತದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಲಂಡನ್‌ನಲ್ಲಿ ಮುಂದುವರಿಯುವ ಕತೆಯ ಭಾಗದಲ್ಲಿ ಶ್ರದ್ಧಾ ಜೊತೆಗಿನ ರೊಮ್ಯಾನ್ಸ್‌ ಮತ್ತು ಭರ್ಜರಿ ನೃತ್ಯವೇ ಹೈಲೈಟ್‌ ಆಗಿರುತ್ತದೆ. ನೋರಾ ಫತೇಹಿ ಕೂಡಾ ಕೆಲವು ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್‌ ಮೊದಲ ವಾರದಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ರೆಮೊ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.