ADVERTISEMENT

ಆ ಸ್ಪೂಕಿ ಕಾಲೇಜಿನಲ್ಲಿ ನಡೆದ ಭಯಾನಕ ಘಟನೆಯಾದರೂ ಏನು?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 8:37 IST
Last Updated 2 ಅಕ್ಟೋಬರ್ 2020, 8:37 IST
ಖುಷಿ ರವಿ
ಖುಷಿ ರವಿ   

‘ಸ್ಪೂಕಿ ಕಾಲೇಜ್’ –‘ಪ್ರೀಮಿಯರ್‌ ಪದ್ಮಿನಿ’ ಖ್ಯಾತಿಯ ವಿವೇಕ್ ಸಿಂಹ ಹಾಗೂ ‘ದಿಯಾ’ ಖ್ಯಾತಿಯ ಖುಷಿ ರವಿ ನಾಯಕ– ನಾಯಕಿಯಾಗಿ ನಟಿಸಿರುವ ಚಿತ್ರ. ಅಂದಹಾಗೆ ಇದಕ್ಕೆ ಬಂಡವಾಳ ಹೂಡಿರುವುದು ಎಚ್.ಕೆ. ಪ್ರಕಾಶ್. ‘ರಂಗಿತರಂಗ’ ಮತ್ತು ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗಳಿಗೆ ಬಂಡವಾಳ ಹೂಡಿದ್ದು ಅವರೇ. ಈ ಸಿನಿಮಾಗಳಿಗೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು, ‘ಸ್ಪೂಕಿ ಕಾಲೇಜ್’ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರಂತೆ.

ಹಾರರ್, ಕಾಮಿಡಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಇದು. ಇದನ್ನು ನಿರ್ದೇಶಿಸುತ್ತಿರುವುದು ಭರತ್ ಜಿ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಅವರೇ ನಿಭಾಯಿಸಿದ್ದಾರೆ. ಯೋಗರಾಜ್ ಭಟ್ ಮತ್ತು ರಮೇಶ್ ಅರವಿಂದ್ ಜೊತೆಗೆ ಕೆಲಸ ಮಾಡಿದ ಅನುಭವ ಅವರ ಬೆನ್ನಿಗಿದೆ. ರೇಡಿಯೊ ಮತ್ತು ಪ್ರಚಾರ ವಿಭಾಗದಲ್ಲೂ ಅವರು ಕಾರ್ಯ ನಿರ್ವಹಿಸಿದ್ದಾರೆ.

ನವೆಂಬರ್ ಮೊದಲ ವಾರದಿಂದ ಧಾರವಾಡದಲ್ಲಿ ಇದರ ಶೂಟಿಂಗ್‌ ಆರಂಭವಾಗಲಿದೆ. ಅಲ್ಲಿನ 103 ವರ್ಷಗಳ ಇತಿಹಾಸ ಹೊಂದಿರುವ ಕಾಲೇಜಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ದ್ವಿತೀಯ ಹಂತದಲ್ಲಿ ದಾಂಡೇಲಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಶೂಟಿಂಗ್‌ಗೆ ಯೋಜನೆ ರೂಪಿಸಿದೆ.

ADVERTISEMENT

‘ಸಿನಿಮಾವು ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ. ಅದಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಮುಂಬೈನಿಂದ ತರಿಸಿಕೊಳ್ಳಲಾಗುತ್ತಿದೆ. ಚಿತ್ರದಲ್ಲಿ ವಸ್ತ್ರವಿನ್ಯಾಸವೂ ವಿಭಿನ್ನವಾಗಿದೆ’ ಎನ್ನುತ್ತಾರೆ ನಿರ್ದೇಶಕ ಭರತ್.

ಮನೋಹರ್ ಜೋಷಿ ಅವರ ಛಾಯಾಗ್ರಹಣವಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ. ಶ್ರೀಕಾಂತ್ ಸಂಕಲನ ನಿರ್ವಹಿಸಲಿದ್ದಾರೆ. ವಿಶ್ವಾಸ್ ಕಲಾ ನಿರ್ದೇಶನವಿದೆ. ಚೇತನ್ ಅವರ ವಸ್ತ್ರವಿನ್ಯಾಸ ಈ ಚಿತ್ರಕ್ಕಿದೆ.

ಪೃಥ್ವಿ ರಾಷ್ಟ್ರಕೂಟ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಕಾಶ್ ಬೆಳವಾಡಿ, ಹನುಮಂತೇಗೌಡ, ರಘು ರಮಣಕೊಪ್ಪ, ಅರವಿಂದ್ ಬೋಳಾರ್, ವಿಜಯ್ ಚೆಂಡೂರ್, ಎಂ.ಕೆ. ಮಠ, ಅಶ್ವಿನ್ ಹಾಸನ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.