ADVERTISEMENT

‘ಶ್ರೀಮಂತ’ ಹಾಗೂ ‘ಡೇರ್‌ ಡೆವಿಲ್‌ ಮುಸ್ತಾಫಾ’ಇಂದು ತೆರೆಗೆ

​ಪ್ರಜಾವಾಣಿ ವಾರ್ತೆ
Published 18 ಮೇ 2023, 23:31 IST
Last Updated 18 ಮೇ 2023, 23:31 IST
   

ಚುನಾವಣೆ ನಂತರ ಮತ್ತೆ ಚಿತ್ರರಂಗ ಸಕ್ರಿಯಗೊಂಡಿದೆ. ಇಂದು ನಟ ಸೋನು ಸೂದ್‌ ಅಭಿನಯದ ‘ಶ್ರೀಮಂತ’ ಹಾಗೂ ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ ‘ಡೇರ್‌ ಡೆವಿಲ್‌ ಮುಸ್ತಾಫಾ’ ಚಿತ್ರಗಳು ತೆರೆಗೆ ಬರುತ್ತಿವೆ.

ರಮೇಶ್‌ ಹಾಸನ್‌ ನಿರ್ದೇಶನದ ‘ಶ್ರೀಮಂತ’ ಏಪ್ರಿಲ್‌ನಲ್ಲಿಯೇ ತೆರೆಗೆ ಬರಬೇಕಿತ್ತು. ಹಿರಿಯ ರಾಜಕಾರಣಿಗಳಾದ ಎಚ್‌.ಡಿ.ದೇವೇಗೌಡ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ್‌ ಹೊರಟ್ಟಿ, ಈಶ್ವರ ಖಂಡ್ರೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಚಿತ್ರ ಬಿಡುಗಡೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿತ್ತು.

ರೈತನೇ ನಿಜವಾದ ಶ್ರೀಮಂತ ಎಂಬ ಆಶಯ ಹೊಂದಿರುವ ಈ ಚಿತ್ರದಲ್ಲಿ ಹಳ್ಳಿಗಾಡಿನ ಬದುಕು ತೋರಿಸಲಾಗಿದೆ. ನಟ ಕ್ರಾಂತಿ, ನಟಿ ಕಲ್ಯಾಣಿ, ವೈಷ್ಣವಿ ಚಂದ್ರನ್ ಮೆನನ್‌, ರಮೇಶ್‌ ಭಟ್‌, ರವಿಶಂಕರ್‌ ಗೌಡ, ಸಾಧು ಕೋಕಿಲ, ಚರಣ್‌ ರಾಜ್‌, ಗಿರಿ, ರಾಜು ತಾಳಿಕೋಟೆ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಹಂಸಲೇಖ ಅವರ ಸಂಗೀತ, ಸಾಹಿತ್ಯವಿದೆ. ಚಿತ್ರದ ಶೀರ್ಷಿಕೆ ಗೀತೆಯನ್ನು ದಿವಂಗತ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಇದು ಅವರು ಹಾಡಿದ ಕೊನೆಯ ಹಾಡಾಗಿತ್ತಂತೆ. ರವಿಕುಮಾರ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನವಿದೆ.

ADVERTISEMENT

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ಚಿತ್ರ ‘ಡೇರ್‌ ಡೆವಿಲ್‌ ಮುಸ್ತಫಾ’ ಕೂಡ ಇಂದು ತೆರೆ ಕಾಣುತ್ತಿದೆ. ಈ ಹಿಂದೆ ಕಿರುಚಿತ್ರಗಳನ್ನು ಮಾಡಿದ್ದ ಶಶಾಂಕ್‌ ಸೋಗಲ್‌ ಚಿತ್ರದ ನಿರ್ದೇಶಕರು. ತೇಜಸ್ವಿಯವರ ಓದುಗರೇ ಸಿನಿಮಾಮರ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರಾಹುಲ್‌ ರಾಯ್‌ ಛಾಯಾಗ್ರಹಣ, ನವನೀತ್‌ ಶ್ಯಾಮ್‌ ಸಂಗೀತವಿದೆ. ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ.

ರಾಜ್ಯ ಮಟ್ಟದ ಹಾಕಿ ಆಟಗಾರ ಆದ್ಯ ತಿಮ್ಮಯ್ಯ ನಟಿಸಿ, ನಿರ್ದೇಶಿಸಿರುವ ‘ಜರ್ಸಿ ನಂಬರ್ 10’ ಚಿತ್ರ ಕೂಡ ತೆರೆ ಕಾಣುತ್ತಿದೆ. ಹಾಕಿ ಕ್ರೀಡೆ ಕುರಿತಾದ ಮೊದಲ ಅಧಿಕೃತ ಕನ್ನಡ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದ್ಯ ತಿಮ್ಮಯ್ಯ ಮತ್ತು ಲಾಲು ತಿಮ್ಮಯ್ಯ ಮತ್ತು ರಾಶಿನ್ ಸುಬ್ಬಯ್ಯ ಜಂಟಿಯಾಗಿ ನಿರ್ಮಿಸಿದ್ದಾರೆ.

ನಟ ಥ್ರಿಲ್ಲರ್ ಮಂಜು ಚಿತ್ರದಲ್ಲಿ ತರಬೇತುದಾರನಾಗಿ ನಟಿಸಿದ್ದಾರೆ. ಹಿರಿಯ ನಟ ದತ್ತಣ್ಣ, ಚಂದನ್ ಮಂಜುನಾಥ್, ಚಂದನ್ ಆಚಾರ್, ಮಂಡ್ಯ ರಮೇಶ್, ಟೆನ್ನಿಸ್ ಕೃಷ್ಣ ಮತ್ತು ಜೈ ಜಗದೀಶ್ ಮೊದಲಾದವರಿದ್ದಾರೆ. ಜುಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ. ಉದಯ್ ಬಲ್ಲಾಳ್ ಅವರ ಛಾಯಾಗ್ರಹಣ ಮತ್ತು ಸುರೇಶ್ ಅರಸ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.