ADVERTISEMENT

ವರ್ಷಾಂತ್ಯಕ್ಕೆ ‘ಪುಷ್ಪ’ ಚಿತ್ರದ ಅರ್ಧ ಶೂಟಿಂಗ್‌ ಪೂರ್ಣಕ್ಕೆ ಸುಕುಮಾರ್‌ ಪ್ಲಾನ್

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 11:51 IST
Last Updated 25 ಆಗಸ್ಟ್ 2020, 11:51 IST
‘ಪುಷ್ಪ’ ಚಿತ್ರದ ಪೋಸ್ಟರ್
‘ಪುಷ್ಪ’ ಚಿತ್ರದ ಪೋಸ್ಟರ್   

‘ರಂಗಸ್ಥಲಂ’ ಚಿತ್ರದ ಬಳಿಕ ನಿರ್ದೇಶಕ ಸುಕುಮಾರ್ ಯಾವುದೇ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿರಲಿಲ್ಲ. ಎರಡು ವರ್ಷಗಳ ಕಾಲ ಅವರು ‘ಪುಷ್ಪ’ ಚಿತ್ರದ ನಿರ್ದೇಶನಕ್ಕಾಗಿಯೇ ಸಿದ್ಧತೆಯಲ್ಲಿ ಮುಳುಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಇದರ ಶೂಟಿಂಗ್‌ಗೆ ಕೋವಿಡ್‌–19 ಬಿಸಿ ತಟ್ಟಿತು. ಅಲ್ಲು ಅರ್ಜುನ್‌ ನಾಯಕರಾಗಿರುವ ಈ ಚಿತ್ರಕ್ಕೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ.

‘ಪುಷ್ಪ’ ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ನಡಿ ನಿರ್ಮಾಣವಾಗುತ್ತಿರುವ ಚಿತ್ರ. ತೆಲುಗಿನಲ್ಲಿ ನಿರ್ಮಾಣವಾಗುವ ಈ ಚಿತ್ರ ಕನ್ನಡಕ್ಕೆ ಡಬ್‌ ಆಗಿ ಬಿಡುಗಡೆಯಾಗಲಿದೆ. ಕಳೆದ ಮಾರ್ಚ್‌ನಲ್ಲಿಯೇ ಶೂಟಿಂಗ್‌ ಆರಂಭಿಸಿ ಈ ವರ್ಷದ ಅಂತ್ಯಕ್ಕೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಆದರೆ, ಚಿತ್ರತಂಡದ ಎಲ್ಲಾ ಲೆಕ್ಕಾಚಾರವನ್ನು ಕೋವಿಡ್‌ ಬುಡಮೇಲು ಮಾಡಿತು.

ಕೇಂದ್ರ ಸರ್ಕಾರ ಈಗ ಸಿನಿಮಾ ಮತ್ತು ಧಾರಾವಾಹಿಯ ಶೂಟಿಂಗ್‌ಗೆ ಅನುಮತಿ ನೀಡಿದೆ. ಹಾಗಾಗಿ, ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿ ಅನ್ವಯ ಚಿತ್ರೀಕರಣಕ್ಕೆ ಸುಕುಮಾರ್‌ ನಿರ್ಧರಿಸಿದ್ದಾರೆ. ಶೀಘ್ರವೇ, ‘ಪುಷ್ಪ’ದ ಶೂಟಿಂಗ್‌ ಶುರುವಾಗಲಿದೆಯಂತೆ.

ADVERTISEMENT

ರಕ್ತ ಚಂದನದ ಕಳ್ಳ ಸಾಗಾಣಿಕೆಯ ಸುತ್ತ ಇದರ ಚಿತ್ರಕಥೆ ಹೆಣೆಯಲಾಗಿದೆ. ಹಾಗಾಗಿ, ಬಹುತೇಕ ಭಾಗದ ಚಿತ್ರೀಕರಣ ನಡೆಯುವುದು ಅರಣ್ಯ ಪ್ರದೇಶದಲ್ಲಿಯೇ. ಅಕ್ಟೋಬರ್‌ ಅಂತ್ಯದವರೆಗೆ ಸುಮಾರು 40 ದಿನಗಳ ಕಾಲ ಒಂದೇ ಹಂತದಡಿ ಶೂಟಿಂಗ್‌ ನಡೆಸಲು ಸುಕುಮಾರ್‌ ನಿರ್ಧರಿಸಿದ್ದಾರೆ. ಇದರ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಲು ತನ್ನ ತಂಡಕ್ಕೆ ಸೂಚಿಸಿದ್ದಾರೆ ಎನ್ನುವುದು ಟಾಲಿವುಡ್‌ ಅಂಗಳದ ಹೊಸ ಸುದ್ದಿ.

ಇಷ್ಟು ದಿನಗಳ ಕಾಲ ಶೂಟಿಂಗ್‌ ನಡೆಸಿದರೆ ಚಿತ್ರದ ಅರ್ಧದಷ್ಟು ಶೂಟಿಂಗ್‌ ಪೂರ್ಣಗೊಳ್ಳಲಿದೆ. ಆ ನಂತರ ಉಳಿದ ಭಾಗದ ಚಿತ್ರೀಕರಣ ಪೂರ್ಣಗೊಳಿಸಿ 2021ರ ವೇಳೆಗೆ ಥಿಯೇಟರ್‌ಗೆ ಬರುವ ಯೋಜನೆ ನಿರ್ದೇಶಕರದ್ದು. ಅಲ್ಲು ಅರ್ಜುನ್‌ ಅವರದ್ದು ಇದರಲ್ಲಿ ಲಾರಿ ಡ್ರೈವರ್‌ ಪಾತ್ರ. ರಕ್ತ ಚಂದನದ ಕಳ್ಳ ಸಾಗಾಣಿಕೆದಾರನಾಗಿ ಅವರು ನಟಿಸುತ್ತಿದ್ದಾರೆ. ರಶ್ಮಿಕಾ ಚಿತ್ತೂರು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.