ADVERTISEMENT

ಸುಶಾಂತ್‌ ಆತ್ಮಹತ್ಯೆ ಪ್ರಕರಣ: ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ

‌ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣ

ಪಿಟಿಐ
Published 31 ಜುಲೈ 2020, 21:30 IST
Last Updated 31 ಜುಲೈ 2020, 21:30 IST
ಸುಶಾಂತ್ ಸಿಂಗ್‌ ಮತ್ತು ರಿಯಾ ಚಕ್ರವರ್ತಿ 
ಸುಶಾಂತ್ ಸಿಂಗ್‌ ಮತ್ತು ರಿಯಾ ಚಕ್ರವರ್ತಿ    

ನವದೆಹಲಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮ ಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಶುಕ್ರವಾರ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ನಟಿ ರಿಯಾ ಚಕ್ರವರ್ತಿ, ಅವರ ಕುಟುಂಬದವರು ಹಾಗೂ ಇತರ ಆರು ಮಂದಿಗೆ ಶೀಘ್ರವೇ ಸಮನ್ಸ್‌ ನೀಡುವ ಸಾಧ್ಯತೆ ಇದೆ.

‘ನನ್ನ ಮಗನ ಸಾವಿಗೆ ರಿಯಾ ಮತ್ತು ಅವರ ಕುಟುಂಬದವರೇ ಕಾರಣ ಎಂದು ಆರೋಪಿಸಿ ಸುಶಾಂತ್‌ ಅವರ ತಂದೆಕೃಷ್ಣ ಕುಮಾರ್‌ ಸಿಂಗ್, ಬಿಹಾರ ಪೊಲೀಸರಿಗೆ ದೂರು ನೀಡಿ ದ್ದರು. ಗುರುವಾರ ರಿಯಾ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಬಿಹಾರ ಪೊಲೀಸರಿಂದ ಎಫ್‌ಐಆರ್‌ ಪ್ರತಿಯನ್ನು ತರಿಸಿಕೊಂಡು ಅಧ್ಯಯನ ಮಾಡಲಾಗಿದೆ. ಇದರ ಆಧಾರದಲ್ಲೇ ಆರೋಪಿಗಳ ವಿರುದ್ಧ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐ ಆರ್)‌ ದಾಖಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

‘ಹಣ ಅಕ್ರಮ ವರ್ಗಾವಣೆಗೂ, ಆತ್ಮಹತ್ಯೆಗೂ ಸಂಬಂಧ ಇರುವ ಸಾಧ್ಯತೆ ಇದೆ. ಹೀಗಾಗಿರಿಯಾ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಶೀಘ್ರವೇ ವಿಚಾರಣೆಗೆ ಕರೆಯಲಾಗುತ್ತದೆ.ಸುಶಾಂತ್‌ ಅವರ ಆದಾಯ, ಬ್ಯಾಂಕ್ ಖಾತೆಗಳ ಮಾಹಿತಿಯನ್ನೂ ಕಲೆಹಾಕಲಾಗಿದೆ’ ಎಂದು ಹೇಳಿದ್ದಾರೆ.

ಸಿಬಿಐ ತನಿಖೆಯಾಗಲಿ: ಫಡಣವೀಸ್

ಮುಂಬೈ: ‘ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು’ ಎಂದು ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಶುಕ್ರವಾರ ಒತ್ತಾಯಿಸಿದ್ದಾರೆ. ‘ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂಬುದು ಬಹುತೇಕ ಸಾರ್ವಜನಿಕರ ಭಾವನೆಯಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಅದನ್ನು ಸಿಬಿಐಗೆ ವಹಿಸಲು ಹಿಂಜರಿಯುತ್ತಿದೆ’ ಎಂದಿದ್ದಾರೆ.

‘ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಜನರಿಂದಲೇ ಬೇಡಿಕೆ ಬರುತ್ತಿದೆಯೇ ಹೊರತು ಬಿಜೆಪಿಯಿಂದಲ್ಲ. ಈ ಪ್ರಕರಣದಲ್ಲಿ ದಿನಕ್ಕೊಂದು ಹೊಸ, ಹೊಸ ವಿಷಯಗಳು ಬಹಿರಂಗವಾಗುತ್ತಿವೆ’ ಎಂದರು.

ಮುಂಬೈ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಇತ್ತೀಚೆಗೆ ಹೇಳಿದ್ದರು. ಸುಶಾಂತ್‌ ಆತ್ಮಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 40 ಜನರ ವಿಚಾರಣೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.