ADVERTISEMENT

ಜಾನಿ ಡೆಪ್‌, ಆ್ಯಂಬರ್‌ ಹರ್ಡ್‌ ಪ್ರಕರಣ: ವಿವಾದದ ಪೂರ್ಣ ಮಾಹಿತಿ ಇಲ್ಲಿದೆ...

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 7:44 IST
Last Updated 2 ಜೂನ್ 2022, 7:44 IST
ಹಾಲಿವುಡ್‌ ನಟ ಜಾನಿ ಡೆಪ್‌ ಮತ್ತು ಅವರ ಮಾಜಿ ಪತ್ನಿ, ನಟಿ ಆ್ಯಂಬರ್ ಹರ್ಡ್‌– ಸಂಗ್ರಹ ಚಿತ್ರ
ಹಾಲಿವುಡ್‌ ನಟ ಜಾನಿ ಡೆಪ್‌ ಮತ್ತು ಅವರ ಮಾಜಿ ಪತ್ನಿ, ನಟಿ ಆ್ಯಂಬರ್ ಹರ್ಡ್‌– ಸಂಗ್ರಹ ಚಿತ್ರ   

ಹಾಲಿವುಡ್‌ ಖ್ಯಾತ ತಾರೆಯರಾದ ಜಾನಿ ಡೆಪ್‌ ಹಾಗೂ ಆ್ಯಂಬರ್‌ ಹರ್ಡ್‌ ಅವರ ಕೌಟುಂಬಿಕ ದೌರ್ಜನ್ಯ ಹಾಗೂ ಮಾನನಷ್ಟ ಪ್ರಕರಣದ ತೀರ್ಪು ಹೊರ ಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ.

ಇಬ್ಬರ ನಡುವಿನ ಮಾನನಷ್ಟ ಪ್ರಕರಣದ ತೀರ್ಪಿನಲ್ಲಿ ಜಾನಿ ಡೆಪ್‌ ಹಾಗೂ ಆ್ಯಂಬರ್‌ ಹರ್ಡ್‌ ಪರಸ್ಪರ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಆ್ಯಂಬರ್‌ ಹರ್ಡ್‌ ಅವರು ಮಾಜಿ ಪತಿ ಜಾನಿ ಡೆಪ್‌ ಅವರ ಮಾನ ಹಾನಿಗೆ ಪ್ರಯತ್ನ ಮಾಡಿರುವುದು ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ. ಇದರಿಂದ ಆ್ಯಂಬರ್‌ ಹರ್ಡ್‌ ಅವರು ₹115ಕೋಟಿ ಪರಿಹಾರವನ್ನುಜಾನಿ ಡೆಪ್‌ ಅವರಿಗೆ ನೀಡಬೇಕು ಎಂದು ಹೇಳಿದೆ.

ಅಲ್ಲದೇ, ಆ್ಯಂಬರ್‌ ಹರ್ಡ್‌ ಅವರಿಗೆ ಕಿರುಕುಳ ನೀಡಿರುವ ಪ್ರಕರಣದಲ್ಲಿ ಕೆಲವು ವಿಚಾರಗಳುಸತ್ಯವಾಗಿವೆ ಎಂದು ನ್ಯಾಯಾಲಯ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಾನಿ ಡೆಪ್‌ ಅವರು ₹ 15 ಕೋಟಿ ಪರಿಹಾರವನ್ನು ಆ್ಯಂಬರ್‌ ಹರ್ಡ್‌ ಅವರಿಗೆ ನೀಡಬೇಕು ಎಂದು ಕೋರ್ಟ್‌ ಹೇಳಿದೆ.

6 ವಾರಗಳ ಕಾಲ ನಡೆದ ಈ ವಿಚಾರಣೆಯ ತೀರ್ಪು ತಮಗೆ ತೃಪ್ತಿ ತಂದಿದೆ ಎಂದು ಜಾನಿ ಡೆಪ್‌ ಹೇಳಿದ್ದಾರೆ. ಈ ತೀರ್ಪಿನಿಂದ ಆ್ಯಂಬರ್‌ ಹರ್ಡ್‌ ಅಸಮಾಧಾನಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಏನಿದು ಪ್ರಕರಣ?

2018ರಲ್ಲಿ ಆ್ಯಂಬರ್‌ ಹರ್ಡ್‌ ಅವರುತಾನು ಅನುಭವಿಸಿದ ಸಂಕಷ್ಟದ ಕುರಿತು 2018ರಲ್ಲಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿಒಪೆಡ್‌ ಪುಟಕ್ಕಾಗಿ ಲೇಖನ ಬರೆದಿದ್ದರು. ಅದರಲ್ಲಿ ನಾನು ಕೂಡ ಕೌಟುಂಬಿಕ ದೌರ್ಜನ್ಯ ಎದುರಿಸಿದ್ದೇನೆ. ನನಗೆ ಕಿರುಕುಳ ನೀಡಲಾಗಿತ್ತು ಎಂದು ಹೇಳಿದ್ದರು. ಇದನ್ನು ವಿರೋಧಿಸಿ ಜಾನಿ ಡೆಪ್‌ ಅವರು, ನನ್ನ ಮಾಜಿ ಪತ್ನಿ ಸಾರ್ವಜನಿಕ ಜೀವನದಲ್ಲಿರುವ ನನಗೆ ಮಾನ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಇತ್ತ ಆ್ಯಂಬರ್‌ ಹರ್ಡ್ ಕೂಡ ಜಾನಿ ಡೆಫ್‌ ವಿರುದ್ಧ ದಾವೆ ಹೂಡಿದ್ದರು.

2009ರಲ್ಲಿ ಶುರುವಾದ ಪ್ರಣಯ...

ಪೈರೆಟ್ಸ್‌ ಆಫ್‌ ಕೆರಿಬಿಯನ್‌ ಚಿತ್ರ ಸರಣಿಯಲ್ಲಿ ಕ್ಯಾಪ್ಟನ್ ಜ್ಯಾಕ್ ಸ್ಪ್ಯಾರೊ ಪಾತ್ರದ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿದ ನಟ ಜಾನಿ ಡೆಪ್‌ಗೆ 2009ರಲ್ಲಿ ದಿ ರಮ್‌ ಡೈರಿ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ನಟಿ ಆ್ಯಂಬರ್‌ ಹರ್ಡ್‌ ಪರಿಚಯವಾಗಿತ್ತು. ಕೆಲವು ವರ್ಷಗಳ ನಂತರ ಜೊತೆಯಾಗಿ ಓಡಾಟ ನಡೆಸಿದ್ದ ಅವರು 2015ರಲ್ಲಿ ಮದುವೆಯಾದರು. ಆದರೆ, ಒಂದೇ ವರ್ಷದ ಅಂತರದಲ್ಲಿ ಮದುವೆಯು ವಿಚ್ಛೇದನಕ್ಕೆ ತಿರುಗಿತು. ಡ್ರಗ್ಸ್ ಮತ್ತು ಮದ್ಯದ ನಶೆಯಲ್ಲಿ ಡೆಪ್‌ ತನ್ನ ಮೇಲೆ ದೈಹಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿದ ಹರ್ಡ್‌, ವಿಚ್ಛೇದನ ನೀಡುವಂತೆ 2016ರಲ್ಲಿ ಅರ್ಜಿ ಹಾಕಿದ್ದರು. 2017ರಲ್ಲಿ ಅವರಿಗೆ ವಿಚ್ಛೇದನ ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.