ಹರ್ಷವರ್ಧನ್ ನಟನೆಯ, ದಿಲೀಪ್ ಕುಮಾರ್ ಜೆ.ಆರ್. ನಿರ್ದೇಶನದ ‘ತ್ರಿಕಾರಂ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿದೆ.
ಹೊಸಬರೇ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ‘ಇದು ಸ್ಮಶಾನ ಅಲ್ಲ’ ಎಂಬ ಅಡಿಬರಹವಿದೆ. ಜಿ.ಗಣೇಶ್ ಮೂರ್ತಿ ಅವರು ಸದ್ಗುರು ಸಿನಿ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಖಳನಾಯಕನ ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ.
‘ಚಿತ್ರವು ಕಾಲ್ಪನಿಕ ಸಾಹಸಭರಿತ ಕಥೆಯನ್ನು ಹೊಂದಿದೆ. ಹೊಸದುರ್ಗದಲ್ಲಿ ಬೃಹತ್ ಸೆಟ್ ಹಾಕಿ, ಅಲ್ಲಿ ಸಿನಿಮಾದ ಮುಖ್ಯವಾದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ’ ಎಂದರು ದಿಲೀಪ್ ಕುಮಾರ್.
‘ವೀರಂ’, ‘ಶುಗರ್‌ಲೆಸ್’ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹರ್ಷವರ್ಧನ್ ಈ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ನಿಶ್ವಿತ ಶೆಟ್ಟಿ ಈ ಚಿತ್ರದ ನಾಯಕಿ. ಉಳಿದಂತೆ ನಾಗೇಂದ್ರ ಅರಸು, ಬಲರಾಜವಾಡಿ, ಮಂಜು ಪಾವಗಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿ.ನಾಗೇಂದ್ರಪ್ರಸಾದ್, ಭರ್ಜರಿ ಚೇತನ್, ಚೀತು ಕೇಶವ, ಪ್ರಮೋದ್ ಮರವಂತೆ ಸಾಹಿತ್ಯದ ಗೀತೆಗಳಿಗೆ ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ. ಯಾಸಿನ್ ಹೊನ್ನಾಳಿ ಛಾಯಾಚಿತ್ರಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಚಂದ್ರುಬಂಡೆ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರದುರ್ಗ, ಚಿಕ್ಕಮಗಳೂರು, ಮಾರಿಕಣಿವೆ, ಸಾಣೆಹಳ್ಳಿ, ದಾವಣಗೆರೆ ಸುತ್ತಮುತ್ತ ಐವತ್ತು ದಿನ ಚಿತ್ರದ ಚಿತ್ರೀಕರಣ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.