‘ಯುಐ’ ಸಿನಿಮಾ ಬಳಿಕ ನಟ ಉಪೇಂದ್ರ ತಮಿಳಿನಲ್ಲಿ ‘ಕೂಲಿ’ ಚಿತ್ರವನ್ನು ಪೂರ್ಣಗೊಳಿಸಿ ಸದ್ಯ ರಾಮ್ ಪೋತಿನೇನಿ ನಟನೆಯ ತೆಲುಗು ಪ್ರಾಜೆಕ್ಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಉಪೇಂದ್ರ ಅವರಿಗೆ ಆ್ಯಕ್ಷನ್ ಕಟ್ ಹೇಳಲು ‘ಕರ್ವ’ ಖ್ಯಾತಿಯ ನವನೀತ್ ಸಜ್ಜಾಗಿದ್ದಾರೆ. ಸಿನಿಮಾ ಜುಲೈನಲ್ಲಿ ಸೆಟ್ಟೇರಲಿದ್ದು ಮುಂದಿನ ವರ್ಷ ತೆರೆಗೆ ಬರಲಿದೆ.
ಹಾರರ್ ಜಾನರ್ ಮೂಲಕ ಗುರುತಿಸಿಕೊಂಡಿರುವ ನವನೀತ್ ಈ ವರ್ಷದ ಆರಂಭದಲ್ಲೇ ಶರಣ್ ಮುಖ್ಯಭೂಮಿಕೆಯಲ್ಲಿದ್ದ ‘ಛೂ ಮಂತರ್’ ಮೂಲಕ ಮತ್ತೆ ಸದ್ದು ಮಾಡಿದ್ದರು. ಇದೀಗ ತಮ್ಮ ಹಳೆಯ ಜಾನರ್ ಬಿಟ್ಟು ತಿಳಿ ಹಾಸ್ಯದ ಮಿಶ್ರಣವಿರುವ ಸ್ಪೋರ್ಟ್ಸ್ ಡ್ರಾಮಾ ಕಥಾಹಂದರವನ್ನು ತೆರೆ ಮೇಲೆ ತರಲು ನವನೀತ್ ಮುಂದಾಗಿದ್ದಾರೆ. ಇದು ಇವರ ನಾಲ್ಕನೇ ಪ್ರಾಜೆಕ್ಟ್.
ಉಪ್ಪಿಯೇ ಸ್ಫೂರ್ತಿ
‘ನನ್ನ ಮೊದಲ ಸಿನಿಮಾ ಹಾರರ್ ಜಾನರ್‌ನಲ್ಲಿತ್ತು. ಇದಕ್ಕೆ ‘ಶ್’ ಸಿನಿಮಾವೇ ಸ್ಫೂರ್ತಿ. ಉಪೇಂದ್ರ ಅವರ ಸಿನಿಪಯಣದ ಹಾದಿಯಲ್ಲೇ ನಾನು ಹೆಜ್ಜೆ ಹಾಕುತ್ತಿದ್ದೇನೆ. ಸಿನಿಮಾದಲ್ಲಿ ಅವರು ತೆಗೆದುಕೊಳ್ಳುವ ಭಿನ್ನ ವಿಷಯಗಳು, ಕಥೆಯೊಳಗೆ ಇರುವ ತಿರುವುಗಳು ಹೀಗೆ ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ನಾನು ನಿರ್ದೇಶನ ಮಾಡುತ್ತಿದ್ದೇನೆ. ಇದೀಗ ಅವರಿಗೇ ಆ್ಯಕ್ಷನ್ ಕಟ್ ಹೇಳುವ ಸಂದರ್ಭ ಬಂದಿದೆ. ಇದೊಂದು ಕನಸಿನ ಪ್ರಾಜೆಕ್ಟ್. ನನಗಿಷ್ಟವಾದ ಹೀರೊ, ನಿರ್ದೇಶಕನ ಜೊತೆಗೇ ಕೆಲಸ ಮಾಡುತ್ತಿರುವ ಉತ್ಸಾಹವಿದೆ. ಇಷ್ಟು ದಿನ ಅಭಿಮಾನಿಯಾಗಿದ್ದೆ ಹೌದು. ಇದೀಗ ಅಭಿಮಾನಿಯಾಗಿ ಅಲ್ಲ, ಅಭಿಮಾನಿಗಳಿಗೆ ಏನು ಬೇಕೋ ಅದನ್ನು ಚಿತ್ರದಲ್ಲಿ ನೀಡಲಿದ್ದೇನೆ. ನಾಲ್ಕು ವರ್ಷದ ಹಿಂದೆಯೇ ಉಪೇಂದ್ರ ಅವರಿಗೆ ಈ ಕಥೆ ಹೇಳಿದ್ದೆ. ಆಗ ಅವರು ‘ಯುಐ’ ಸಿದ್ಧತೆಯಲ್ಲಿದ್ದರು. ನಾನು ನಂತರದಲ್ಲಿ ‘ಛೂ ಮಂತರ್’ ಮಾಡಿದೆ. ಇದೀಗ ಕಥೆಯನ್ನು ಕೊಂಚ ಅಪ್‌ಡೇಟ್ ಮಾಡಿಕೊಂಡಿದ್ದೇನೆ. ಶೀಘ್ರದಲ್ಲೇ ಟೀಸರ್ ಶೂಟಿಂಗ್ ಮಾಡಲಿದ್ದೇನೆ. ಇದನ್ನು ಬಿಡುಗಡೆ ಮಾಡುವ ಮೂಲಕ ಮುಹೂರ್ತ ಮಾಡಲಿದ್ದೇವೆ’ ಎಂದರು ನವನೀತ್.
ಚಿತ್ರದಲ್ಲಿ ಕ್ರಿಕೆಟ್ ಕಥೆ
‘ಕನ್ನಡ ಚಿತ್ರರಂಗದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಕಥೆಗಳು ಬಂದಿಲ್ಲ. ನನ್ನ ಈ ಪ್ರಾಜೆಕ್ಟ್ ಕ್ರಿಕೆಟ್ ಮೇಲೆ ಇರಲಿದೆ. ಐಪಿಎಲ್ ಮಾದರಿಯ ಟೂರ್ನಮೆಂಟ್ ಇಲ್ಲಿ ಇರಲಿದೆ. ಉಪೇಂದ್ರ ಅವರ ಪಾತ್ರದ ಬಗ್ಗೆ ಟೀಸರ್ ಸಂದರ್ಭದಲ್ಲೇ ಹೇಳುತ್ತೇನೆ. ಹಿಂದೆಂದೂ ಮಾಡದ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಶ್ರೀಮಂತ ಉದ್ಯಮಿಯಾಗಿರುವ ವ್ಯಕ್ತಿಯೊಬ್ಬರ ಕ್ರಿಕೆಟ್ ಪ್ರೀತಿ ಚಿತ್ರದಲ್ಲಿರಲಿದೆ. ಅವರು ಕ್ರಿಕೆಟ್ ಆಡುವುದನ್ನೂ ಚಿತ್ರದಲ್ಲಿ ಕಾಣಬಹುದು. ಹಿಂದಿಯಲ್ಲಿ ಕ್ರಿಕೆಟ್ ಆಟಗಾರರ ಬಯೋಪಿಕ್‌ಗಳು ಬಂದಿವೆ. ಆದರೆ ಇದು ಯಾರ ಬಯೋಪಿಕ್ ಅಲ್ಲ. ಇದೊಂದು ಕಾಲ್ಪನಿಕ ಕಥೆ. ರಾಜ್‌ಕುಮಾರ್ ಹಿರಾನಿಯವರ ಸಿನಿಮಾಗಳಂತೆ ಲೈಟ್ ಹಾರ್ಟೆಡ್ ಕಾಮಿಡಿ ಸಿನಿಮಾವಿದು. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ. ಬಹುತೇಕ ಎಲ್ಲರೂ ಕನ್ನಡದವರೇ ಆಗಿರುತ್ತಾರೆ’ ಎನ್ನುತ್ತಾರೆ ನವನೀತ್.
- ಸುಮಾರು ಎಂಟು ತಿಂಗಳಲ್ಲಿ ಈ ಸಿನಿಮಾವನ್ನು ಪೂರ್ಣಗೊಳಿಸುವ ಯೋಜನೆಯಿದೆ. ಹೆಚ್ಚಿನ ವಿಎಫ್‌ಎಕ್ಸ್ ಚಿತ್ರದಲ್ಲಿರಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಚಿತ್ರೀಕರಣ ನಡೆಸುವ ಪ್ಲ್ಯಾನ್ ಇದೆ. ಸಾಧ್ಯವಾಗದೇ ಇದ್ದಲ್ಲಿ ಶ್ರೀಲಂಕಾದ ಕ್ರಿಕೆಟ್ ಮೈದಾನಗಳಲ್ಲಿ ಚಿತ್ರೀಕರಣ ನಡೆಯಲಿದೆ.–ನವನೀತ್ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.