
ಪತ್ರಕರ್ತ ರವಿ ಬೆಳಗೆರೆ ಅವರ ‘ವೇಷಗಳು’ ಎಂಬ ಸಣ್ಣಕಥೆಯನ್ನಾಧರಿಸಿದ ಚಿತ್ರ ಅದೇ ಶೀರ್ಷಿಕೆಯಲ್ಲಿ ಇತ್ತೀಚೆಗೆ ಸೆಟ್ಟೇರಿದೆ. ಕಿಶನ್ ರಾವ್ ದಳವಿ ಚಿತ್ರಕಥೆ ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಶ್ರೀನಗರ ಕಿಟ್ಟಿ ಬಂಡವಾಳ ಹೂಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
‘ಆರಂಭದಲ್ಲಿ ಒಂದಷ್ಟು ನಾಟಕ ಮಾಡಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿರುವೆ. ನಿರ್ದೇಶಕನಾಗಿ ಇದು ನನ್ನ ಮೊದಲ ಸಿನಿಮಾ. ‘ವೇಷಗಳು’ ಕಥೆ ಓದಿದಾಗ ಇದನ್ನು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎನ್ನಿಸಿತು. ಭಾವನಾ ಬೆಳಗೆರೆ ಅವರಿಗೆ ಕೇಳಿದಾಗ ಅವರೂ ಒಪ್ಪಿದರು. ಈ ಚಿತ್ರದಲ್ಲಿ ರಂಗಭೂಮಿ ಕಲಾವಿದರು, ಜೋಗತಿಯರ ಜೀವನ ಶೈಲಿಯ ಬಗ್ಗೆಯೂ ಹೇಳಲಾಗುತ್ತಿದೆ. ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ರಂಗಸಜ್ಜಿಕೆಯೊಳಗೇ ನಡೆಯುವ, ನಾಟಕದ ಹಿನ್ನೆಲೆಯಲ್ಲಿ ಸಾಗುವ ಪ್ರೇಮಕಥೆಯಿದು. ಮಾಲೂರು ವಿಜಯ್ ಅವರು ಅದ್ಭುತವಾದ ಡ್ರಾಮಾ ಸೆಟ್‌ಗಳನ್ನು ಹಾಕಿಕೊಟ್ಟಿದ್ದಾರೆ. ಚಿತ್ರದಲ್ಲಿ ಶೇಕಡ 50ರಷ್ಟು ನಾಟಕದ ಸನ್ನಿವೇಶಗಳು ಬರುತ್ತವೆ. ಈ ಕಥೆ ಬಳ್ಳಾರಿಯಿಂದ ಶುರುವಾಗಿ ಉತ್ತರ ಕರ್ನಾಟಕ, ಬೆಂಗಳೂರು, ಮೈಸೂರು, ಮಧ್ಯಪ್ರದೇಶದ ಮಹಾಕಾಲೇಶ್ವರದವರೆಗೂ ಸಾಗುತ್ತದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕ.
ನಾಯಕ ಭರತ್ ಬೋಪಣ್ಣಗೆ ಅಂಕಿತಾ ಅಮರ್ ಜೋಡಿಯಾಗಿದ್ದಾರೆ. ಶರತ್ ಲೋಹಿತಾಶ್ವ, ತಬಲಾ ನಾಣಿ ಮುಂತಾದವರು ಚಿತ್ರದಲ್ಲಿದ್ದಾರೆ. ಕೌಶಿಕ್ ಹರ್ಷ ಸಂಗೀತ, ಮನೋಹರ ಜೋಷಿ ಛಾಯಾಚಿತ್ರಗ್ರಹಣ, ಅಕ್ಷಯ್ ಪಿ.ರಾವ್ ಸಂಕಲನ, ಕವಿರಾಜ್, ನಾಗೇಂದ್ರ ಪ್ರಸಾದ್, ಕಲ್ಯಾಣ್, ವಿ.ಮನೋಹರ್ ಸಾಹಿತ್ಯವಿದೆ.
‘ರಂಗಭೂಮಿಯ ಒಳಹರಿವುಗಳು ಹೇಗಿರುತ್ತವೆ, ಅಲೆಮಾರಿ ತಂಡಗಳು ಯಾವ ರೀತಿ ಇರುತ್ತವೆ ಎಂಬುದನ್ನು ನಮ್ಮ ಚಿತ್ರದಲ್ಲಿ ಹೇಳುತ್ತಿದ್ದೇವೆ. ಎರಡು ದಶಕಗಳ ಹಿಂದಿನ ರಂಗಭೂಮಿ, ಅಲ್ಲೊಂದು ಪ್ರೇಮಕಥೆಯೂ ಸಾಗುತ್ತದೆ. ಇದೊಂದು ಹೊಸ ಪ್ರಯತ್ನ’ ಎಂದರು ಶ್ರೀನಗರ ಕಿಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.