ADVERTISEMENT

ನಟಿ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 16:17 IST
Last Updated 11 ಫೆಬ್ರುವರಿ 2021, 16:17 IST
ಪದ್ಮಜಾ ರಾವ್
ಪದ್ಮಜಾ ರಾವ್   

ಮಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಿರ್ದೇಶಕಿ, ನಟಿ ಪದ್ಮಜಾ ರಾವ್ ಅವರಿಗೆ ಮಂಗಳೂರಿನ ಜೆಎಂಎಫ್‌ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

‘ಮಂಗಳೂರಿನ ವೀರೂ ಟಾಕೀಸ್‌ ಪ್ರೊಡಕ್ಷನ್‌ ಸಂಸ್ಥೆಯಿಂದ ಪದ್ಮಜಾ ರಾವ್‌ ಅವರು 2018ರಿಂದ ಹಂತಹಂತವಾಗಿ ₹ 41 ಲಕ್ಷ ಸಾಲವನ್ನು ಪಡೆದಿದ್ದರು. ಬ್ಯಾಂಕ್‌ ಖಾತೆಯ ಮೂಲಕವೇ ಹಣ ವರ್ಗಾವಣೆಯಾಗಿದೆ. ಸಾಲದ ಭದ್ರತೆಗಾಗಿ ₹ 40 ಲಕ್ಷದ ಚೆಕ್‌ ಅನ್ನು ಪದ್ಮಜಾ ರಾವ್‌ ನೀಡಿದ್ದರು. ಸಾಲ ವಾಪಸ್‌ ಕೊಡದಿದ್ದಾಗ ಚೆಕ್‌ ಅನ್ನು ನಗದೀಕರಣಕ್ಕೆ ಹಾಕಲಾಗಿತ್ತು. ಅವರ ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆಗಿದೆ. ಈ ಸಂಬಂಧ ದೂರು ನೀಡಲಾಗಿತ್ತು’ ಎಂದು ಪ್ರೊಡಕ್ಷನ್‌ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಕಾವೂರು ತಿಳಿಸಿದ್ದಾರೆ.

‘ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಪದ್ಮಜಾ ಅವರಿಗೆ ಸಮನ್ಸ್ ನೀಡಿದರೂ ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ, ಫೆ.3ರಂದು ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿದೆ’ ಎಂದು ಹೇಳಿದ್ದಾರೆ. ಬೆಂಗಳೂರಿನ ತಲಘಟ್ಟಪುರ ಪೊಲೀಸ್‌ ಠಾಣೆಗೆ ವಾರಂಟ್‌ ರವಾನಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.