ADVERTISEMENT

ರೊಮ್ಯಾಂಟಿಕ್‌ ಕಥೆ ಹೇಳಲು ಸಜ್ಜಾದ ಸೃಜಾ

ಅ. 11ಕ್ಕೆ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 9:06 IST
Last Updated 20 ಸೆಪ್ಟೆಂಬರ್ 2019, 9:06 IST
‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದಲ್ಲಿ ಸೃಜನ್‌ ಲೋಕೇಶ್‌ ಮತ್ತು ಹರಿಪ್ರಿಯಾ
‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದಲ್ಲಿ ಸೃಜನ್‌ ಲೋಕೇಶ್‌ ಮತ್ತು ಹರಿಪ್ರಿಯಾ   

ನಟ ಸೃಜನ್‌ ಲೋಕೇಶ್‌ಗೆ ಬೆಳ್ಳಿತೆರೆಗಿಂತಲೂ ಕಿರುತೆರೆಯಲ್ಲಿಯೇ ಖ್ಯಾತಿ ದಕ್ಕಿದ್ದು ಹೆಚ್ಚು. ಹಾಗೆಂದು ಅವರು ದೊಡ್ಡ ಪರದೆಯಿಂದ ದೂರ ಸರಿದಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲಾ ಹಿರಿತೆರೆಯ ಮೇಲೂ ನಗೆಯ ಬುಗ್ಗೆ ಉಕ್ಕಿಸುತ್ತಾರೆ.

ಎರಡು ವರ್ಷದ ಹಿಂದೆ ತೆರೆಕಂಡ ಅವರು ನಾಯಕರಾಗಿದ್ದ ‘ಹ್ಯಾಪಿ ಜರ್ನಿ’ ಚಿತ್ರ ಅವರ ಪಾಲಿಗೆ ಅಷ್ಟೇನು ಆನಂದದಾಯಕವಾಗಿರಲಿಲ್ಲ. ಈಗ ಮತ್ತೆ ಅವರು ‘ಎಲ್ಲಿದ್ದೆ ಇಲ್ಲಿ ತನಕ’ ಎನ್ನುತ್ತಲೇ ರೊಮ್ಯಾಂಟಿಕ್‌ ಕಥೆ ಹೇಳಲು ಸಜ್ಜಾಗಿದ್ದಾರೆ. ನಟನೆ ಮತ್ತು ನಿರ್ಮಾಣ ಎರಡೂ ಪಾತ್ರಗಳನ್ನೂ ಅವರೇ ನಿಭಾಯಿಸುತ್ತಿದ್ದಾರೆ. ಹಾಗಾಗಿ, ಅವರದು ಈಗ ದ್ವಿಪಾತ್ರ.

‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಅಕ್ಟೋಬರ್‌ 11ರಂದು ತೆರೆಗೆ ಬರುತ್ತಿದೆ. ಯಾವುದೇ ಕಟ್‌, ಮ್ಯೂಟ್‌ಗಳಿಲ್ಲದೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಇದಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

ADVERTISEMENT

ಇಂದು 4 ಗಂಟೆಗೆ ನಟ ದರ್ಶನ್‌ ಅವರು ಸಿನಿಮಾ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ.

ಹುಡುಗನೊಬ್ಬ ತಾನು ಪ್ರೀತಿಸುವ ಹುಡುಗಿಯನ್ನು ವಿವಾಹವಾಗಲು ಮುಂದಾಗುತ್ತಾನೆ. ಆಗ ಹಲವು ಸನ್ನಿವೇಶಗಳು ಎದುರಾಗುತ್ತವೆ. ಅವುಗಳು ಅವನ ವ್ಯಕ್ತಿತ್ವವನ್ನೇ ಬದಲಾಯಿಸುವ ಮಟ್ಟಿಗೆ ಹೋಗುತ್ತವೆ. ಕೊನೆಗೊಂದು ದಿನ ಸತ್ಯದ ಅರಿವಾಗುತ್ತದೆ. ಆಗ ಆತ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದೇ ಚಿತ್ರದ ಕಥಾಹಂದರ.

ಚಿತ್ರದ ಪಾತ್ರಕ್ಕಾಗಿ ಸೃಜನ್ ಸಾಕಷ್ಟು ಬೆವರು ಹರಿಸಿದ್ದಾರಂತೆ. ಕಥೆ ಹೊಸೆಯಲು ನಾಲ್ಕು ತಿಂಗಳ ಕೂತಿದ್ದರಂತೆ. ಕಥೆಯಿಂದ ಹಿಡಿದು ಡೈಲಾಗ್‌ವರೆಗೂ ಹೆಚ್ಚಿನ ಶ್ರಮ ಹಾಕಿದ್ದಾರೆ. ಸೃಜಾ ಅವರ ಪುತ್ರ ಸುಕೃತ್‌ ಲೋಕೇಶ್‌ ಕೂಡ ಇದರಲ್ಲಿ ನಟಿಸಿದ್ದು, ಅವರ ಕುಟುಂಬದ ನಾಲ್ಕನೇ ತಲೆಮಾರು ಕನ್ನಡ ಚಿತ್ರರಂಗ ಪ್ರವೇಶಿಸಿದ ಶ್ರೇಯಕ್ಕೆ ಪಾತ್ರವಾಗಿದೆ.

ಸೃಜನ್‌ಗೆ ಹರಿಪ್ರಿಯಾ ಜೋಡಿಯಾಗಿದ್ದಾರೆ. ಕಾಶ್ಮೀರದ ರಮಣೀಯ ಸ್ಥಳಗಳಲ್ಲಿ ಈ ಚಿತ್ರದ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ತೇಜಸ್ವಿ. ಸೃಜನ್‌ ನಡೆಸಿಕೊಡುವ ‘ಮಜಾ ಟಾಕೀಸ್‌’ ಕಾರ್ಯಕ್ರಮದ ಭಾಗವಾಗಿರುವ ಅವರು ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ.

ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಎಚ್‌.ಸಿ. ವೇಣು ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.