ADVERTISEMENT

ನಿಜ ಬದುಕಿನ ಯಾನ

ಕೆ.ಎಂ.ಸಂತೋಷಕುಮಾರ್
Published 11 ಜುಲೈ 2019, 19:30 IST
Last Updated 11 ಜುಲೈ 2019, 19:30 IST
ಯಾನ ಸಿನಿಮಾದಲ್ಲಿವೈಭವಿ, ವೈನಿಧಿ, ವೈಸಿರಿ
ಯಾನ ಸಿನಿಮಾದಲ್ಲಿವೈಭವಿ, ವೈನಿಧಿ, ವೈಸಿರಿ   

ಈ ಮೂವರು ಮಕ್ಕಳನ್ನು ಸುಲಭವಾಗಿ ಇವರು ಇಂಥವರೇ ಎಂದು ಹೆಸರುಗಳಿಂದ ಗುರುತು ಹಿಡಿಯುವುದು ಸ್ವಲ್ಪ ಕಷ್ಟ. ನೋಡಲುಮೂವರೂ ಒಂದೇ ರೀತಿ ಇದ್ದಾರೆ. ಅದರಲ್ಲಿ ಇಬ್ಬರ ಹೋಲಿಕೆ, ಧ್ವನಿ ಒಂದೇ ರೀತಿ. ಒಬ್ಬರಿಗಿಂತ ಒಬ್ಬರು ನೋಡಲು ಚೆಂದ, ಅಗಣಿತ ಸೌಂದರ್ಯವನ್ನೇ ಹೊದ್ದುಕೊಂಡಿರುವ ರೂಪವತಿಯರು. ಅವರಮಾತೂ ಅಷ್ಟೇ ಚೆಂದ. ನಾವು ದೊಡ್ಡ ತಾರಾ ದಂಪತಿಯ ಕುಡಿಗಳೆಂಬ ಹಬ್ಬು–ಬಿಮ್ಮು ಅವರಿಗಿಲ್ಲ. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರ ಬರುವಾಗ ಪ್ರತಿಯೊಬ್ಬ ಯುವತಿಯೂ ನಾನು ಮಾಯಾ, ನಾನು ಅಂಜಲಿ, ನಾನು ನಂದಿನಿ ಎಂದು ಭಾವಿಸಿಕೊಂಡು ಪಾಸಿಟಿವ್‌ ಎನರ್ಜಿಯನ್ನು ರೂಢಿಸಿಕೊಳ್ಳುವುದು ಖಚಿತವೆಂಬ ಆತ್ಮವಿಶ್ವಾಸದಿಂದ ಸಿನಿಮಾ ಪುರವಣಿಯೊಂದಿಗೆ ಮಾತಿಗಿಳಿದರು ವಿಜಯಲಕ್ಷ್ಮಿ ಸಿಂಗ್‌ ಮತ್ತು ಜೈಗದೀಶ್‌ ದಂಪತಿಯ ಈ ಮೂವರು ಸುಂದರಿಪುತ್ರಿಯರು.

ವಿಜಯಲಕ್ಷ್ಮಿ ಸಿಂಗ್‌ ಕಥೆ–ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಯಾನ’ ಸಿನಿಮಾದಲ್ಲಿ ಅವರ ಮಕ್ಕಳಾದ ವೈಭವಿ, ವೈನಿಧಿ ಹಾಗೂ ವೈಸಿರಿ ಮೂವರು ಲೀಡ್‌ ರೋಲ್‌ ಮಾಡಿದ್ದಾರೆ. ಇದೇ ಶುಕ್ರವಾರ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ‘ಯಾನ’ ಶುರುವಾಗಲಿದೆ.

‌‘ನಾನು ವೈನಿಧಿ. ವೈಸಿರಿ ಮತ್ತು ನಾನು ಇಬ್ಬರೂ ಟ್ವಿನ್ಸ್‌. ನಾನು ವೈಸಿರಿಗಿಂತಎರಡು ನಿಮಿಷ ಮುಂಚಿತವಾಗಿ ಹುಟ್ಟಿದವಳು. ನಮ್ಮಿಬ್ಬರಿಗೂ ವೈಭವಿ ದೊಡ್ಡಕ್ಕ. ಆದರೆ, ನಾವು ಮೂವರ ನಡುವೆ ದೊಡ್ಡವರು– ಚಿಕ್ಕವರು ಯಾವ ಭೇದಭಾವವೂ ಇಲ್ಲ. ನಾವು ಮೂವರು ಸಮಾನ ಮನಸ್ಕ ಗೆಳತಿಯರಿದ್ದಂತೆ. ಯಾನ ಸಿನಿಮಾದಲ್ಲಿ ನನ್ನದು ಕಾಲೇಜು ವಿದ್ಯಾರ್ಥಿನಿ ನಂದಿನಿಯ ಪಾತ್ರ. ಆಟಂ ಬಾಂಬ್‌ ಪಟಾಕಿಯಂತೆ, ತುಂಬಾ ಬಿಂದಾಸ್‌ ಆಗಿರುವಂತಹ ಹುಡುಗಿ. ಕಾಲೇಜಿನ ನಿಯಮಗಳನ್ನೂ ಮುರಿದರೂ ಎಲ್ಲೇ ತಪ್ಪು ನಡೆದರೂ ಅದನ್ನು ಪ್ರಶ್ನಿಸುವ ಮನೋಭಾವದ ಪಾತ್ರ. ಸಿನಿಮಾ ಎಂದರೆ ತುಂಬಾ ಇಷ್ಟ, ಅದರಲ್ಲೂ ಹೀರೊಗಳ ಡೈಲಾಗ್‌ ಅನುಕರಿಸುವುದೆಂದರೆ ಬಹಳ ಇಷ್ಟ. ಆ ರೀತಿಬಬ್ಲಿ ಮತ್ತು ಫನ್ನಿ ಹುಡುಗಿಯ ಪಾತ್ರ. ಅದು ನನ್ನ ವ್ಯಕ್ತಿತ್ವಕ್ಕೂ ತುಂಬಾ ಹೋಲುತ್ತಿತ್ತು. ಈ ಪಾತ್ರದಲ್ಲಿ ಅಭಿನಯಿಸಲು ತುಂಬಾ ಇಷ್ಟವಾಯಿತು. ಯಾನ ಎಂದರೆ ಪ್ರವಾಸ, ಇದು ಬರೀ ಒಂದು ಟ್ರಿಪ್‌ ಅಲ್ಲ. ನಮ್ಮ ಬದುಕಿನಲ್ಲಿ ನಡೆಯುವ ಪಯಣವನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ’ ಎನ್ನುವುದು ವೈನಿಧಿಯವರ ಮಾತು.

ADVERTISEMENT

ಈ ಪೀಳಿಗೆಯ ಯುವಜನರಿಗೆ ನೀವು ಈ ರೀತಿ, ಆ ರೀತಿ ಇರಬೇಕೆಂದು ಹೇಳಿದರೆ ಕೇಳುವುದಿಲ್ಲ. ಅವರಿಗೆ ಏನನ್ನು ಹೇಳಬೇಕೋ ಅದನ್ನು ಎಂಟರ್‌ಟೈನ್‌ಮೆಂಟ್‌, ಫನ್‌ ಮೂಲಕ ಹೇಳಲಾಗಿದೆ.ಪ್ರತಿ ಪಾತ್ರಕ್ಕೂ ಪ್ರೇಕ್ಷಕರು ಕನೆಕ್ಟ್‌ ಆಗಲಿದ್ದಾರೆ ಎನ್ನುವ ಮಾತನ್ನೂ ವೈನಿಧಿ ಸೇರಿಸಿದರು.

‘ಈ ಸಿನಿಮಾ ನಮ್ಮ ತಂದೆ–ತಾಯಿಗೆ ದೊಡ್ಡ ಯಶಸ್ಸು ತಂದುಕೊಡಲೆಂದು ಆಶಿಸುತ್ತೇವೆ. ನಮ್ಮ ತಂದೆ–ತಾಯಿ ಈ ಸಿನಿಮಾ ಮೂಲಕ ನಾವು ಮೂವರಿಗೂ ದೊಡ್ಡ ಪ್ಲಾಟ್‌ಫಾರಂ ಕೊಟ್ಟಿದ್ದಾರೆ. ಬೇರೆ ಯಾರದೇ ಸಿನಿಮಾದಲ್ಲಿ ಇಂತಹ ದೊಡ್ಡ ವೇದಿಕೆ ನಮಗಂತೂಸಿಗುತ್ತಿರಲಿಲ್ಲ. ಯುವಜನರನ್ನು ಗಮನದಲ್ಲಿಟ್ಟುಕೊಂಡು, ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ಮಾಡಿದ್ದಾರೆ. ಮೂವರೂ ಇಷ್ಟೊಂದು ಚೆನ್ನಾಗಿ ನಟನೆ, ಡಾನ್ಸ್‌ ಮಾಡುತ್ತಾರೆ, ನೋಡಲು ಎಷ್ಟು ಚೆಂದ ಇದ್ದಾರೆ ಎಂದು ಹುಬ್ಬೇರಿಸಿ ನೋಡುವಂತೆ ನಮ್ಮನ್ನು ತೋರಿಸಿದ್ದಾರೆ. ಈ ಬಂಧನದ ನಂತರ ಅಮ್ಮ ಯಾವುದೇ ಸಿನಿಮಾ ಮಾಡಿರಲಿಲ್ಲ. ಯಂಗ್‌ ಕಾನ್ಸೆಪ್ಟ್‌ ಇಟ್ಟುಕೊಂಡು ತುಂಬಾ ಫಾರ್ವರ್ಡ್‌ ಮತ್ತು ಬೋಲ್ಡಾಗಿರುವಂತಹ ಸಿನಿಮಾ ಮಾಡಿದ್ದಾರೆ. ಯಂಗ್‌ ಜನರೇಷನ್‌ಗೆ ಏನೇನು ಬೇಕೋ ಅದೆಲ್ಲವೂ ಈ ಸಿನಿಮಾದಲ್ಲಿ ಇದೆ’ ಎನ್ನುತ್ತಾರೆ ಅವರು.

‘ಇದು ತುಂಬಾ ದೊಡ್ಡ ‘ಯಾನ’. ನಮ್ಮಜೀವನದಲ್ಲಿಯೂ ಅತ್ಯುತ್ತಮ ‘ಯಾನ’ವೆಂದು ಹೇಳಬಹುದು. ತುಂಬಾ ಕಷ್ಟಪಟ್ಟು, ಇಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದ ಟ್ರೇಲರ್‌ ನೋಡಿದವರಿಂದ ಬಹಳಷ್ಟು ಪ್ರಶಂಸೆ ಬರುತ್ತಿದೆ. ನಾವು ಹೊಸ ಪ್ರಯತ್ನ ಮಾಡಿದ್ದೇವೆ. ಪ್ರೇಕ್ಷಕರು ಸಿನಿಮಾ ನೋಡಿ, ನಮ್ಮ ಬೆನ್ನುತಟ್ಟುತ್ತಾರೆ ಎನ್ನುವ ನಿರೀಕ್ಷೆಯೂ ಇದೆ’ ಎನ್ನುವುದು ವೈಸಿರಿಯ ಮಾತು.

ಸಿನಿಮಾದಲ್ಲಿ ನನ್ನದು ತೀರ್ಥಹಳ್ಳಿ ಕಡೆಯಿಂದ ಬೆಂಗಳೂರಿಗೆ ಓದಲು ಬರುವ ಹುಡುಗಿಅಂಜಲಿಯ ಪಾತ್ರ. ಒಂದು ಸಣ್ಣ ಪ್ರೇಮಕಥೆಯೂ ಈ ಪಾತ್ರಕ್ಕೆ ಇದೆ ಎನ್ನುವ ಮಾಹಿತಿ ತೆರೆದಿಟ್ಟರು ವೈಸಿರಿ.

‘ತಾಯಿ ನಿರ್ದೇಶನ ಮಾಡುತ್ತಿದ್ದು, ತಂದೆ ಅರ್ಪಿಸುತ್ತಿರುವ ಸಿನಿಮಾದಲ್ಲಿ ಮೂವರೂ ಮಕ್ಕಳು ಅಭಿನಯಿಸುತ್ತಿರುವ ಕಾರಣಕ್ಕೆ ‘ಯಾನ’ ಬುಕ್‌ ಆಫ್‌ ಇಂಡಿಯಾದಲ್ಲಿ ದಾಖಲಾಗಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.‘ಯಾನ’ ಲಾಂಗ್‌ ಜರ್ನಿ.ತುಂಬಾ ಎಕ್ಸೈಟ್‌ಮೆಂಟ್‌ ಮತ್ತು ನರ್ವಸ್‌ ಆಗಿದ್ದೀನಿ. ದೊಡ್ಡ ಸಂಗೀತಗಾರ್ತಿ ಆಗಬೇಕೆನ್ನುವ ನಗರದಹುಡುಗಿ ಮಾಯಾ ಎನ್ನುವ ಪಾತ್ರ ನನ್ನದು’ ಎಂದರು ನಟಿ ವೈಭವಿ.

ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್‌, ‘ಒಮ್ಮೆ ಮಾಲ್‌ನಲ್ಲಿ ಸಿನಿಮಾ ನೋಡಲು ಹೋದಾಗ ಚಿತ್ರಮಂದಿರದಲ್ಲಿ ತುಂಬಿದ್ದ ಯುವಜನರನ್ನು ನೋಡಿದ ಮೇಲೆ ಅವರಿಗೆ ನಾವು ಕೊಡಬೇಕಾಗಿರುವುದು ಏನೆನ್ನುವುದು ತಲೆಯಲ್ಲಿ ಹೊಳೆಯಿತು. ಆಗಲೇ ಶುರುವಾದದ್ದು ಯಾನ’ ಎಂದರು.

ನಮ್ಮ ಮಕ್ಕಳನ್ನೇ ಹಾಕಿಕೊಂಡು ಸಣ್ಣ ಬಜೆಟ್‌ ಚಿತ್ರ ಮಾಡೋಣ ಎಂದು ಪತಿ ಜೈಗದೀಶ್‌ ಬಳಿ ಹೇಳಿದಾಗ, ಅದು ಸಣ್ಣ ಬಜೆಟ್‌ ಆಗಲ್ಲ ಬಿಡು, ಏಕೆಂದರೆ ನೀನು ರಾಜೇಂದ್ರ ಸಿಂಗ್‌ಬಾಬು ಸಹೋದರಿ ಅಲ್ವೆ ಎಂದರು. 40 ದಿನದ ಶೂಟಿಂಗ್‌ ಶೆಡ್ಯೂಲ್‌ ಕೊನೆಗೆ ಮುಟ್ಟಿದ್ದು 80 ದಿನಗಳಿಗೆ. ಕೊಡಗು, ಚಿಕ್ಕಮಗಳೂರು, ಬೆಂಗಳೂರು, ಬೆಳಗಾವಿ, ಗೋವಾದಲ್ಲಿ ಚಿತ್ರೀಕರಿಸಲಾಗಿದೆ. ಇದು ನನ್ನ ನಿರ್ದೇಶನದ ಐದನೇ ಸಿನಿಮಾ. ನನ್ನ ಪುತ್ರಿಯರು ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿಕೊಳ್ಳದೆ ನಟಿಸಿದ್ದಾರೆ. ನಾನೂ ಕಠಿಣ ಪ್ರಯತ್ನ ಹಾಕಿದ್ದೇನೆ. ಉದ್ಯಮಿ ಹರೀಶ್‌ ಶೇರಿಗಾರ್‌ ಈ ಸಿನಿಮಾ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಕೆಜಿಎಫ್‌ ಸಿನಿಮಾ ಡಬ್‌ ಮಾಡಿದ ತಾಂತ್ರಿಕ ತಂಡವೇ ‘ಯಾನ’ವನ್ನು ಮಲೆಯಾಳಂಗೆ ಡಬ್‌ ಮಾಡಿದ್ದು, ಇದೇ ತಿಂಗಳುಮಲೆಯಾಳಂನಲ್ಲೂಸಿನಿಮಾ ಬಿಡುಗಡೆಯಾಗುತ್ತಿದೆ ಎಂದರು ವಿಜಯಲಕ್ಷ್ಮಿ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.