ಪ್ರತಿಷ್ಠಿತ ಫ್ಯಾಷನ್ ಶೋಗಳಲ್ಲಿ ಕೆಲವೊಮ್ಮೆ ಎಡವಟ್ಟುಗಳಾಗಿ ಎಲ್ಲರಿಗೂ ಉಚಿತ ಮನರಂಜನೆ ಸಿಗುವುದಿದೆ. ರೂಪದರ್ಶಿಯರು ತಪ್ಪು ಹೆಜ್ಜೆ ಹಾಕಿ, ಹೈಹೀಲ್ಡ್ ಪಾದರಕ್ಷೆ ಮುರಿದು, ನಡೆಯುವಾಗ ಎಡವಿ ಬಿದ್ದು ಸುದ್ದಿಯಾಗುವುದಿದೆ. ಆಗ ಪ್ರೇಕ್ಷಕರು ನಕ್ಕು ಗೇಲಿ ಮಾಡುತ್ತಾರೆ. ಆದರೆ ಮೊನ್ನೆ ಮುಂಬೈನಲ್ಲಿ ನಡೆದ ಶೋ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದ್ದು ಒಂದು ಬೀದಿ ನಾಯಿ!
ಅಂತರರಾಷ್ಟ್ರೀಯ ಖ್ಯಾತಿಯ ವಸ್ತ್ರ ವಿನ್ಯಾಸಕ ರೋಹಿತ್ ಬಾಲ್ ಸಾಂಪ್ರದಾಯಿಕ ವಿನ್ಯಾಸದ ಉಡುಪುಗಳ ಪ್ರದರ್ಶನಕ್ಕೆಂದು ಆ ಶೋ ಏರ್ಪಾಡು ಮಾಡಿದ್ದರು. ಹೆಸರಾಂತ ರೂಪದರ್ಶಿಯರ ಜೊತೆಗೆ ನಟಿ ಡಯಾನಾ ಪೆಂಟಿ ಕೂಡಾ ಕ್ಯಾಟ್‌ವಾಕ್ ಮಾಡಿ ರ‍್ಯಾಂಪ್‌ನ ಮಧ್ಯಭಾಗದಲ್ಲಿ ಸಾಲಾಗಿ ನಿಂತು ನಡು ಬಳುಕಿಸಿದರು. ಆ ನಾಯಿ, ಬಿಡುಬೀಸಾಗಿ ರ‍್ಯಾಂಪ್ ಮೇಲೆ ಬಂತು. ರೂಪದರ್ಶಿಯರಿಗೆ ಒಂದೆಡೆ ಭಯ ಮತ್ತೊಂದೆಡೆ ತಡೆದುಕೊಳ್ಳಲಾರದಷ್ಟು ನಗು. ಸಭಿಕರಿಗೂ ನಗುವುದೋ, ಬೀದಿ ನಾಯಿಯನ್ನು ಓಡಿಸುವುದೋ ತಿಳಿಯದಾಯಿತು.
ಇಷ್ಟಾದರೂ ಆ ನಾಯಿ ಕ್ಯಾರೇ ಅನ್ನದೇ ರೂಪದರ್ಶಿಯರ ಮುಂದೆಯೇ ಕ್ಯಾಮೆರಾಗೆ ಪೋಸ್ ನೀಡಿತು!
ಸಾಲದು ಎಂಬಂತೆ,ಕೆಲವು ಸುತ್ತಿನ ಡಾಗ್‌ವಾಕ್‌ನ್ನೂ ಮುಗಿಸಿತು. ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಅದನ್ನು ಹೊರಗಟ್ಟುವಲ್ಲಿ ಯಶಸ್ವಿಯಾದರು. ರೂಪದರ್ಶಿಯರು ಮತ್ತು ರೋಹಿತ್ ಬಾಲ್ ನಿರಾಳವಾಗಿ ಕೊನೆಯ ಸುತ್ತಿನ ಕ್ಯಾಟ್‌ವಾಕ್ ಮುಗಿಸಿ ನಿಟ್ಟುಸಿರುಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.