ADVERTISEMENT

ಕನಸು ಹಂಚಿಕೊಂಡ ಜೀವದ ಗೆಳೆಯರು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 19:30 IST
Last Updated 25 ಫೆಬ್ರುವರಿ 2020, 19:30 IST
ಬಿಗ್‌ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ ಮತ್ತು ವಾಸುಕಿ ವೈಭವ್‌ಚಿತ್ರ: ಇರ್ಷಾದ್‌ ಮಹಮ್ಮದ್‌ 
ಬಿಗ್‌ಬಾಸ್‌ ಖ್ಯಾತಿಯ ಶೈನ್‌ ಶೆಟ್ಟಿ ಮತ್ತು ವಾಸುಕಿ ವೈಭವ್‌ಚಿತ್ರ: ಇರ್ಷಾದ್‌ ಮಹಮ್ಮದ್‌    

‘ಬಣ್ಣದಲೋಕದಲ್ಲಿ ಕೆಲಸ ಮಾಡಬೇಕೆಂಬುದು ನಮ್ಮ ಬಾಲ್ಯದ ಕನಸು. ಆ ಕನಸು ನನಸಾಗಲು ಕಠಿಣ ಪರಿಶ್ರಮ ಬೇಕು. ಅರ್ಧದಲ್ಲೇ ಪ್ರಯತ್ನ ಕೈಬಿಟ್ಟರೆ ಏಳಿಗೆ ಅಸಾಧ್ಯ’

ಹೀಗೆಂದು ಮಾತು ಆರಂಭಿಸಿದರು ‘ಬಿಗ್‌ ಬಾಸ್‌’ ಸೀಸನ್‌ 7ರ ವಿಜೇತ ಶೈನ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್. ಯುವಜನರು ಕೂಡ ಈ ಹಾದಿಯಲ್ಲಿ ಸಾಗಿದರಷ್ಟೇ ಯಶಸ್ಸು ಲಭಿಸುತ್ತದೆ ಎಂದು ಮಾತು ವಿಸ್ತರಿಸಿದರು.

ಬಿಗ್‌ ಬಾಸ್‌ನಲ್ಲಿ ಗೆಲುವಿನ ನಗೆ ಚೆಲ್ಲಿದ ಶೈನ್‌ ಶೆಟ್ಟಿಗೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ದುಡಿದ ಅನುಭವವಿದೆ. ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದ ಸ್ಪರ್ಧಿಗಳಲ್ಲಿ ಒಬ್ಬರಾದ ವಾಸುಕಿ ವೈಭವ್ ‘ರಾಮಾ ರಾಮಾ ರೇ...’ ಚಿತ್ರದ ಮೂಲಕ ಹೆಸರು ಮಾಡಿದ ಸಂಗೀತ ನಿರ್ದೇಶಕ. ಜೊತೆಗೆ ಅವರು ಗಾಯಕರೂ ಹೌದು.

ADVERTISEMENT

‘ಬಿಗ್ ಬಾಸ್’ ಖ್ಯಾತಿಯ ಉತ್ತುಂಗಕ್ಕೇರಿರುವ ಈ ಇಬ್ಬರೂ ಈಗ ಹಿಂದೆಯೇ ಒಪ್ಪಿಕೊಂಡಿದ್ದ ಚಿತ್ರರಂಗದ ಚಟುವಟಿಕೆಗಳನ್ನು ಮುಗಿಸುವಲ್ಲಿ ನಿರತರಾಗಿದ್ದಾರೆ. ಈ ನಡುವೆಯೇ ಹೊಸ ಅವಕಾಶಗಳಿಗೆ ಎದುರು ನೋಡುತ್ತಿದ್ದಾರೆ. ಹೆಚ್ಚುತ್ತಿರುವ ಅಭಿಮಾನಿಗಳು, ಸ್ನೇಹಿತರ ದಂಡು ಅವರ ಬದುಕಿಗೆ ಹೊಸ ಹುರುಪು ನೀಡಿದೆ. ಮತ್ತೊಂದೆಡೆ ಜವಾಬ್ದಾರಿಯನ್ನೂ ಹೆಚ್ಚಿಸಿದೆಯಂತೆ.

ಈ ನಡುವೆಯೇ prajavani.netಗೆ ಸಂದರ್ಶನ ನೀಡಿದ ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಸರಳತೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು. ಬಿಗ್‌ ಬಾಸ್‌ ಖ್ಯಾತಿಯು ಅವರಲ್ಲಿ ದರ್ಪ ತರಿಸಿಲ್ಲ. ಅವರ ಮಾತಿನಲ್ಲಿ ಪಕ್ವತೆ ಎದ್ದು ಕಾಣುತ್ತಿತ್ತು. ಬಾಲ್ಯದಲ್ಲಿ ಕಂಡ ಕನಸನ್ನು ಈಡೇರಿಸಿಕೊಳ್ಳುವ ಛಲವೂ ಅಲ್ಲಿ ಇಣುಕಿತು. ಸಿನಿಮಾವನ್ನು ಬದುಕಿನ ಉಸಿರಾಗಿ ಸ್ವೀಕರಿಸುವ ದೃಢ ನಿಲುವು ಆ ಮಾತುಗಳಲ್ಲಿತ್ತು.

113 ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗಿದ್ದಾಗ ಅವರು ಅಕ್ಷರಶಃ ಬಾಹ್ಯ ಜಗತ್ತಿನ ಸಂಪರ್ಕವನ್ನು ಕಡಿದುಕೊಂಡಿದ್ದರು. ಹೊರಗೆ ಬಂದಾಗ ಬದಲಾದ ಜಗತ್ತನ್ನು ಕಂಡು ಮಕ್ಕಳಂತೆ ಅಚ್ಚರಿಪಟ್ಟರಂತೆ. ‘ಅಳುಕಿನಿಂದಲೇ ಬಿಗ್‌ ಬಾಸ್‌ ಮನೆಯೊಳಗೆ ಹೋದೆವು. ‘ಮನಸ್ಸಿನಿಂದ ಯಾರೊಬ್ಬರೂ ಕೆಟ್ಟೋರಲ್ಲ...’ ಎಂಬ ಭಾವನೆಯೊಂದಿಗೆ ಹೆಜ್ಜೆ ಇಟ್ಟೆವು. ಅಲ್ಲಿನ ಕೂಡು ಕುಟುಂಬದಲ್ಲಿ ತುಂಬು ಜೀವನದ ಸವಿ ಉಂಡೆವು. ಹೊಸ ಸ್ನೇಹಿತರನ್ನು ಸಂಪಾದಿಸಿದೆವು’ ಎಂದು ಖುಷಿ ಹಂಚಿಕೊಂಡರು.

ಬಿಗ್‌ ಬಾಸ್‌ ಮನೆ ಪ್ರವೇಶಿಸಿ ಸಂಪಾದಿಸಿದ ಅಭಿಮಾನಿಗಳು, ಸ್ನೇಹಿತರು, ಅಲ್ಲಿನ ಬದುಕು, ವೃತ್ತಿಬದುಕಿನ ಬಗ್ಗೆ ಈ ಇಬ್ಬರೂ ವಿಡಿಯೊ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಗುರುವಾರ prajavani.net ನಲ್ಲಿ ಈ ಸಂದರ್ಶನ ಬಿತ್ತರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.