ADVERTISEMENT

ಸಿನಿ ಸಂಗೀತದ ‘ಪ್ರಸನ್ನ’ವದನ

ಗುರು ಪಿ.ಎಸ್‌
Published 4 ಮಾರ್ಚ್ 2019, 20:00 IST
Last Updated 4 ಮಾರ್ಚ್ 2019, 20:00 IST
ಪ್ರಸನ್ನ ಭೋಜಶೆಟ್ಟರ
ಪ್ರಸನ್ನ ಭೋಜಶೆಟ್ಟರ   

ಸಂಗೀತ –ಸಾಹಿತ್ಯ–ಚಿತ್ರಕಲೆಯಲ್ಲಿ ಮೂರು ವಿಶ್ವದಾಖಲೆ ನಿರ್ಮಿಸಿ ಗಮನ ಸೆಳೆದಿದ್ದ ಹುಬ್ಬಳ್ಳಿಯ ಪ್ರಸನ್ನ ಭೋಜಶೆಟ್ಟರ ಸದ್ಯ ಪೂರ್ಣಾವಧಿ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಮೂರು ಚಿತ್ರಗಳಿಗೆ ಅವರು ಸಂಗೀತ ಸಂಯೋಜಿಸಿದ್ದು, ದೊಡ್ಡ ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ.

ಚೆನ್ನೈನ ಎ.ಆರ್.ರೆಹಮಾನ್‌ ಮ್ಯೂಸಿಕ್‌ ಕಾಲೇಜಿನಲ್ಲಿ ವೆಸ್ಟರ್ನ್‌ ವೋಕಲ್‌ ಮತ್ತು ಎಲೆಕ್ಟ್ರಾನಿಕ್‌ ಮ್ಯೂಸಿಕ್‌ ಪ್ರೊಡಕ್ಷನ್‌ ಕೋರ್ಸ್‌ ಪಡೆದಿರುವ ಪ್ರಸನ್ನ ಗೀತರಚನೆಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ‘ರತ್ನಮಂಜರಿ’ ಚಿತ್ರಕ್ಕೆ ಅವರು ಬರೆದಿರುವ ಗೀತೆಯೊಂದನ್ನು ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಹಾಡಿದ್ದಾರೆ. ಪ್ರಸನ್ನರ ಪ್ರತಿಭೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.‌

ಬರಲಿದ್ದಾನೆ ‘ಎಮ್ಮೆತಿಮ್ಮ’
ತಾವೇ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ ವಿಡಿಯೊಗಳನ್ನು ಪ್ರಸನ್ನ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುತ್ತಿದ್ದರು. ಯೂಟ್ಯೂಬ್‌ನಲ್ಲಿ ತಮ್ಮದೇ ಆದ ಚಾನೆಲ್‌ ಒಂದನ್ನು ಸೃಷ್ಟಿಸಿಕೊಂಡಿರುವ ಅವರು, ಆ ಮಾಧ್ಯಮದ ಮೂಲಕವೇ ಹೆಚ್ಚು ಜನರನ್ನು ತಲುಪಿದ್ದಾರೆ.

ADVERTISEMENT

ಯೂಟ್ಯೂಬ್‌ನಲ್ಲಿ ಪ್ರಸನ್ನ ಅವರ ವಿಡಿಯೊ ನೋಡಿದ ಸಿನಿಮಾ ನಿರ್ಮಾಪಕ, ನಿರ್ದೇಶಕರು ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ.
ಕೆ. ಅನ್ಬು ಅರಸ್‌ ನಿರ್ದೇಶನದ ‘ಅಣ್‌ತಮ್ಮ’, ರಾಜಚರಣ್‌ ನಿರ್ದೇಶನದ ‘ಎಮ್ಮೆತಿಮ್ಮ’ ಮತ್ತು ಪ್ರವೀಣ್‌ ಸುತಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಅನಾಮಿಕ’ ಚಿತ್ರಕ್ಕೆ ಪ್ರಸನ್ನ ಸಂಗೀತ ಸಂಯೋಜಿಸಿದ್ದಾರೆ. ಈ ಎಲ್ಲ ಚಿತ್ರಗಳಿಗೆ ಹೊಸಬರೇ ನಾಯಕರಾಗಿದ್ದಾರೆ.

ಇದರಲ್ಲಿ ‘ಎಮ್ಮೆತಿಮ್ಮ’ ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

ಹಿಂದಿ ಗೀತೆಗೆ ಕನ್ನಡ ಸಾಹಿತ್ಯ
‘ಮಜಾ ಟಾಕೀಸ್‌’ ಹಾಸ್ಯ ಸರಣಿಯಲ್ಲಿ ಪ್ರದರ್ಶನ ನೀಡಿದ್ದ ಪ್ರಸನ್ನ, ಹಿಂದಿ ಗೀತೆಗಳಿಗೆ ಸ್ಪಾಟ್‌ನಲ್ಲಿಯೇ ಕನ್ನಡ ಸಾಹಿತ್ಯ ಹೇಳಿ ಗಮನ ಸೆಳೆದಿದ್ದರು.

‘ಆ ಸಂಚಿಕೆ ನೋಡಿದ್ದ ಡೆನ್ಮಾರ್ಕ್‌ನಲ್ಲಿನ ಅನಿವಾಸಿ ಭಾರತೀಯ ಪ್ರಸಿದ್ಧ, ಫೇಸ್‌ಬುಕ್‌ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ‘ರತ್ನಮಂಜರಿ’ ಚಿತ್ರಕ್ಕೆ ಸಾಹಿತ್ಯ ಬರೆಯಲು ಹೇಳಿದರು. ಆ ಚಿತ್ರದ ಗೀತೆಯನ್ನೇ ವಿಜಯ ಪ್ರಕಾಶ್ ಹಾಡಿದ್ದಾರೆ’ ಎಂದು ಪ್ರಸನ್ನ ಹೇಳುತ್ತಾರೆ.

‘ನನಗೆಹಿಂದೂಸ್ತಾನಿ ಸಂಗೀತದ ಬಗ್ಗೆ ಜ್ಞಾನ ಇತ್ತು. ಹಾಡು ಬರೆದು, ಸಂಗೀತ ಸಂಯೋಜಿಸುತ್ತಿದ್ದೆ. ಆದರೆ, ಅದನ್ನು ಸಿನಿಮಾಗೆ ಒಗ್ಗಿಸುವುದು ಮತ್ತು ಸನ್ನಿವೇಶಕ್ಕೆ ತಕ್ಕಂತೆ ಸಂಗೀತ ಸಂಯೋಜಿಸುವುದು ತಿಳಿದಿರಲಿಲ್ಲ. ಚೆನ್ನೈನಲ್ಲಿ ಈ ಬಗ್ಗೆ ಕೋರ್ಸ್‌ ಮಾಡಿದ ನಂತರ ವಿಶ್ವಾಸ ಮೂಡಿತು. ಹೀಗಾಗಿ, ಸಂಗೀತ ನಿರ್ದೇಶನವನ್ನೇ ಪೂರ್ಣಾವಧಿ ವೃತ್ತಿಯನ್ನಾಗಿ ತೆಗೆದುಕೊಂಡಿದ್ದೇನೆ’ ಎನ್ನುವ ಪ್ರಸನ್ನ, ಬೆಂಗಳೂರಿನಲ್ಲಿಯೇ ಸ್ಟುಡಿಯೊ ಮಾಡಿಕೊಂಡಿದ್ದಾರೆ. ಸಂಗೀತ ಸಂಯೋಜನೆಗೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನೂ ಈ ಸ್ಟುಡಿಯೊ ಹೊಂದಿದೆ.

ಬಹುಸಂಗೀತ ಸಾಧನಗಳನ್ನು ನುಡಿಸುವ ಕಲೆಯನ್ನು ಸಿದ್ಧಿಸಿಕೊಂಡಿರುವ ಪ್ರಸನ್ನ ಬಹುಮುಖ ಪ್ರತಿಭೆ. ಹಾಡು ಹಾಡುತ್ತಲೇ ಚಿತ್ರವನ್ನು ಉಲ್ಟಾ ಬಿಡಿಸುವುದು, ಅದೇ ಕ್ಷಣದಲ್ಲೇ ಬಾಲ್‌ಗಳ ಮೂಲಕ ಜಗ್ಲಿಂಗ್ ಮಾಡುತ್ತ, ಹಾಡುತ್ತಲೇ ಕರಾಟೆ ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ ಪ್ರಸನ್ನ. ‘ಹುಬ್ಬಳ್ಳಿ ರಾಕ್‌ ಸ್ಟಾರ್‌’ ತಂಡ ಕಟ್ಟಿಕೊಂಡು ಕಾರ್ಯಕ್ರಮವನ್ನೂ ಅವರು ನೀಡುತ್ತಾರೆ.

ಮೂರು ಕಲೆಗಳನ್ನೂ ಒಟ್ಟಿಗೆ ಪ್ರದರ್ಶಿಸುವ ಮೂಲಕ 2016ರಲ್ಲಿ ಅವರು ವಿಶ್ವದಾಖಲೆ ಮಾಡಿದ್ದಾರೆ. ಯುನಿವರ್ಸಲ್‌ ವರ್ಲ್ಡ್‌ ರೆಕಾರ್ಡ್‌ ಫೋರಂ ಎಂಬ ಸಂಸ್ಥೆ ಹುಬ್ಬಳ್ಳಿಗೆ ಬಂದು ಈ ಪ್ರದರ್ಶನಕ್ಕೆ ಸಾಕ್ಷಿಯಾಗಿ ಪ್ರಮಾಣ ಪತ್ರ ನೀಡಿದೆ.

29 ವರ್ಷದ ಪ್ರಸನ್ನ,ಹುಬ್ಬಳ್ಳಿಯ ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ‘ಕಂಪ್ಲೀಟ್‌ ಎಂಟರ್‌ಟೇನರ್‌’ ಎನಿಸಿಕೊಂಡಿರುವ ಅವರನ್ನು ಸಂಗೀತ ಸರಸ್ವತಿ ಈಗ ಚಿತ್ರರಂಗಕ್ಕೆ ಕರೆತಂದಿದ್ದಾಳೆ. ದೊಡ್ಡ ಬ್ಯಾನರ್‌ಗಳಿಂದ ಅವಕಾಶ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ
ಪ್ರಸನ್ನ ಭೋಜಶೆಟ್ಟರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.