ADVERTISEMENT

ಕಣ್ಮುಚ್ಚಿ ಹಾಡು ಕೇಳಿ

ಪ್ರಜಾವಾಣಿ ವಿಶೇಷ
Published 26 ಫೆಬ್ರುವರಿ 2011, 15:55 IST
Last Updated 26 ಫೆಬ್ರುವರಿ 2011, 15:55 IST

ಈ ಚಿತ್ರವನ್ನು ವಿಂಗಡಿಸಿಕೊಂಡು ನೋಡುವ ಅಗತ್ಯವಿದೆ. ಯಾಕೆಂದರೆ, ಇದರ ಸಂಗೀತ ನಿರ್ದೇಶಕರು ಪಂಡಿತ್ ಪರಮೇಶ್ವರ ಹೆಗಡೆ. ಸಾಹಿತ್ಯ ಬರೆದಿರುವವರಲ್ಲಿ ಜಯಂತ ಕಾಯ್ಕಿಣಿ, ಕವಿರಾಜ್, ನಾಗೇಂದ್ರ ಪ್ರಸಾದ್, ಹೃದಯಶಿವ ಇದ್ದಾರೆ. ವಸುಂಧರಾ ದಾಸ್ ಎರಡು ಹಾಡುಗಳನ್ನು ಹಾಡಿದ್ದಾರೆ. ಎಲ್ಲಾ ಹಾಡುಗಳೂ ಭಾವಗೀತಾತ್ಮಕವಾಗಿವೆ. ಸಂಗೀತ ರಚನೆಯನ್ನು ಪ್ರತ್ಯೇಕ ಮಾಡಿ ನೋಡಿದರೆ, ‘ಸಾಚಾ’ ಚಿತ್ರವು ಅತಿ ದುರ್ಬಲ ಎನ್ನಿಸುತ್ತದೆ.

ನಿರ್ದೇಶಕ ಇಷಾಕ್ ಖಾಜಿ ಹೊಸತೇನನ್ನೋ ಹೇಳಲು ಹವಣಿಸಿದ್ದಾರೆ. ಚಿತ್ರದ ಮೊದಲರ್ಧದಲ್ಲಿ ಅವರ ಈ ಉದ್ದೇಶಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ರಸ್ತೆ ಮೇಲೆ ಬಣ್ಣದ ದೇವರ ಬಿಡಿಸಿ ಮಲಗುವ ಮುಗ್ಧ ನಾಯಕ, ಕಟುಕರ ಕೊಡಲಿಗೆ ಇನ್ನೇನು ಸಿಲುಕಲಿರುವ ಮರವನ್ನು ದೇವರಮರವನ್ನಾಗಿ ಮಾಡುವ ಮಕ್ಕಳು, ಬೆಂಗಳೂರಿನಲ್ಲಿ ಬದುಕಲು ರೌಡಿಯೇ ಆಗಬೇಕಿಲ್ಲವೆಂಬ ಸತ್ಯ- ಎಲ್ಲವನ್ನೂ ಬಿಡಿಬಿಡಿಯಾಗಿ ಇಷಾಕ್ ಮೂಡಿಸಿದ್ದಾರೆ. ಆದರೆ, ಚಿತ್ರದ ಮೂಲ ವಸ್ತುವಾದ ಪ್ರೀತಿ, ದ್ವೇಷ, ನಾಟಕೀಯತೆಯನ್ನು ಹೊಸತನದಲ್ಲಿ ಅದ್ದಲು ಅವರಿಗೆ ಸಾಧ್ಯವಾಗಿಲ್ಲ. ಚೆನ್ನಾಗಿ ಹೋಂವರ್ಕ್ ಮಾಡಿಕೊಂಡು, ಪರೀಕ್ಷೆಗೆ ಕೂತಾಗ ಪೆಚ್ಚಾಗುವ ವಿದ್ಯಾರ್ಥಿಯ ಮನಸ್ಥಿತಿಯಲ್ಲಿ ಅವರು ಕೆಲಸ ಮಾಡಿರಬಹುದು.

ನಾಯಕ ವಿಕ್ರಮ್‌ಗೆ ತಮ್ಮ ಮಿತಿಯ ಅರಿವೇನೋ ಇದೆ. ಆದರೆ, ದೇಹಭಾಷೆಯೇ ಇಲ್ಲದೆ ನಟಿಸುವುದು ಕಷ್ಟ ಅಲ್ಲವೇ? ಹಾಗಾಗಿಯೇ ಮುಗ್ಧತೆಯ ಪಾತ್ರದಲ್ಲಿ ಅವರು ತೀರಾ ಅಸಹಜವಾಗಿ ಕಾಣುತ್ತಾರೆ. ನಾಯಕಿ ದಿವ್ಯಾ ಶ್ರೀಧರ್ ತರಾತುರಿಯಲ್ಲಿ ನಟಿಸಿದ್ದರೆ, ಇನ್ನೊಬ್ಬ ನಾಯಕಿ ಲಿಖಿತಾ ಮೇಕಪ್ ಭಂಗವಾದರೆ ಕಷ್ಟವೆಂಬ ಪ್ರಜ್ಞೆಯನ್ನು ಮೆರೆದ್ದಾರೆ. ಕರಿಬಸವಯ್ಯ, ಶೋಭರಾಜ್ ನೀನಾಸಂ ಅಶ್ವತ್ಥ್- ಯಾರೂ ನೆನಪಿನಲ್ಲಿ ಉಳಿಯುವುದಿಲ್ಲ.

ಪರಮೇಶ್ವರ ಹೆಗಡೆಯವರ ಸಂಗೀತ ಹಾಗೂ ಅರ್ಥಗರ್ಭಿತ ಸಾಹಿತ್ಯವಿರುವ ಹಾಡುಗಳನ್ನು ಕೂಡ ಸಶಕ್ತವಾಗಿ ದೃಶ್ಯಕ್ಕೆ ಅಳವಡಿಸಲು ನಿರ್ದೇಶಕರಿಗೆ ಆಗಿಲ್ಲ. ಸಿನಿಮಾ ಮಾಧ್ಯಮದ ಸಿದ್ಧಿ ನಿರ್ದೇಶಕರಿಗೆ ಆಗಿದ್ದಿದ್ದರೆ ಇರುವ ಕಥೆಯೇ ಇನ್ನೂ ಹಸನಾಗಿ ಮೂಡುತ್ತಿತ್ತೇನೋ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.