ADVERTISEMENT

ಕತ್ತಲೆಯೊಳಗೆ ಕರಗಿಹೋದ ಆಶಯ

ಚಿತ್ರ: ಬೆಳಕಿನೆಡೆಗೆ

ಅಮಿತ್ ಎಂ.ಎಸ್.
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ನಿರ್ಮಾಪಕ: ರಮೇಶ್‌ಕುಮಾರ್ ಜೈನ್, ನಿರ್ದೇಶಕರು: ಅಜಯ್‌ಕುಮಾರ್ ಮತ್ತು ರಮೇಶ್‌ಕುಮಾರ್ ಜೈನ್, ತಾರಾಗಣ: ಮಾ. ಅಭಿಜಿತ್, ಮಾ. ಮಂಜುನಾಥ್, ಕರಿಬಸವಯ್ಯ, ರಾಮಕೃಷ್ಣ, ಸುಚಿತ್ರಾ, ಗುರುರಾಜ ಹೊಸಕೋಟೆ, ಮೋಹನ್ ಜುನೇಜಾ, ಕಾಶಿ, ಚಂಪಾ ಶೆಟ್ಟಿ, ಸಾನಿಯಾ ಅಯ್ಯರ್, ಮಾ. ಶ್ಯಾಮ್ ಮತ್ತಿತರರು.

ಕೊಳೆಗೇರಿಯಲ್ಲಿ ಚಿಂದಿ ಆಯುವ ಮಕ್ಕಳು, ಮುಗ್ಧತೆ ನಡುವೆ ಉಕ್ಕುವ ಒಳ್ಳೆತನ, ಕುಡುಕ ತಂದೆ, ಅವಿದ್ಯಾವಂತ ಮಕ್ಕಳಿಗೆ ಶಾಲೆಗೆ ಹೋಗುವ ಬಯಕೆ, ಅವರನ್ನು ಉದ್ಧರಿಸಲು ಬರುವ ಸರ್ಕಾರದ ಯೋಜನೆಗಳು... ಸರ್ಕಾರಿ ಪ್ರಾಯೋಜಿತ ಜಾಹೀರಾತುಗಳಂತೆ ಭಾಸವಾಗುವ ಇಂಥ ಚರ್ವಿತ ಚರ್ವಣ ಕಥಾವಸ್ತುಗಳುಳ್ಳ ಮಕ್ಕಳ ಸಿನಿಮಾಗಳು ಒಂದರ ಹಿಂದೊಂದು ತಯಾರಾಗುತ್ತಿವೆ.

ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಕ್ಕಳ ಚಿತ್ರಗಳು ಈಗ ಪೈಪೋಟಿಗೆ ಬಿದ್ದಿರುವಂತೆ ಸೃಷ್ಟಿಯಾಗುತ್ತಿರುವುದಕ್ಕೆ ಬೇರೆ ಕಾರಣಗಳಿರಬಹುದು. `ಮಕ್ಕಳ ಚಿತ್ರ' ಎಂಬ ಪ್ರಮಾಣಪತ್ರವಷ್ಟೇ ಇಲ್ಲಿ ಮುಖ್ಯವಾಗುತ್ತಿರುವುದು. ಅವುಗಳ ಗುಣಮಟ್ಟ, ವಸ್ತುಗಳು ಅಮುಖ್ಯ. ಹಳೆಯ ಪುರಾಣಗಳ ನಿಸ್ಸಾರ, ನೀರಸ ಚಿತ್ರಗಳ ಸಾಲಿಗೆ ಸೇರಿಕೊಳ್ಳುತ್ತದೆ `ಬೆಳಕಿನೆಡೆಗೆ' ಸಿನಿಮಾ.

ಇತ್ತೀಚಿನ ಬಹುತೇಕ ಮಕ್ಕಳ ಚಿತ್ರಕಥೆಗಳು ಹುಟ್ಟಿಕೊಳ್ಳುವುದೇ ಸ್ಲಂಗಳಲ್ಲಿ. ತಥಾಗಥಿತ ಸ್ಲಂ ಕಥಾನಕಗಳು ಸಿನಿಮಾ ಮಂದಿಯ ಪಾಲಿಗೆ ಎಂದಿಗೂ ಬದಲಾಗುವುದಿಲ್ಲ. ಮಾ. ಕಿಶನ್ ನಿರ್ದೇಶಿಸಿ, ನಟಿಸಿದ್ದ `ಕೇರ್ ಆಫ್ ಫುಟ್‌ಪಾತ್' ಚಿತ್ರದ ನೆರಳಲ್ಲಿ ನಾಯಿಕೊಡೆಗಳಂತೆ ಹಲವು ಕಥೆಗಳು ತಲೆಎತ್ತಿದವು. `ಬೆಳಕಿನೆಡೆಗೆ'ಯ ಕಥೆಯೂ ಬೇರೆಯಲ್ಲ. ಅದೇ ಕಥನವನ್ನು ಮತ್ತೊಂದು ಮಗ್ಗುಲಲ್ಲಿ ಒಂದಷ್ಟು ಉಪಕಥೆಗಳನ್ನು ಬೆರೆಸಿ ಪುನರ್‌ಸೃಷ್ಟಿಸಿದ್ದಾರೆ ನಿರ್ದೇಶಕದ್ವಯರು.

ಸ್ಲಂನಲ್ಲಿ ಚಿಂದಿ ಆಯುವ ಅವಿದ್ಯಾವಂತ ಮಕ್ಕಳು ಅಕ್ಷರ ಕಲಿಯುವ ಬಯಕೆ ಈಡೇರಿಸಿಕೊಳ್ಳುವ ಕಥನವಿದು. ಹಳತರೊಳಗೆ ಸೇರಿಕೊಳ್ಳುವ ಉಪಕಥೆಗಳಲ್ಲಿಯೂ ಹೊಸತನವಿಲ್ಲ. ಕಥೆಯಷ್ಟೇ ದುರ್ಬಲ ನಿರೂಪಣೆ ಮಕ್ಕಳ ಸಿನಿಮಾಗಳ ಗುಣಮಟ್ಟದ ಕುರಿತ ಪ್ರಶ್ನೆಗಳನ್ನು ಮತ್ತೆ ಕೆದಕುತ್ತದೆ. ಇಂಥ ಸಿನಿಮಾಗಳ ಸೃಷ್ಟಿಯ ಅಗತ್ಯದ ಪ್ರಶ್ನೆಯೂ ಉದ್ಭವಿಸುತ್ತದೆ. ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ, ಶಿಕ್ಷಣ, ರಾಜಕೀಯ ಇವುಗಳ ಸುತ್ತಲೇ ಗಿರಕಿ ಹೊಡೆಯುವ ಚಿತ್ರಗಳಲ್ಲಿ ಹೊಸತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ನಿರ್ದೇಶನದ ಹೊಣೆಯನ್ನು ಇಬ್ಬರು ನಿರ್ವಹಿಸಿದ್ದರೂ ಫಲಿತಾಂಶ ಶೂನ್ಯ.

ಚಿರಂಜೀವಿ, ವರುಣ್, ಶ್ಯಾಮ್ ಮತ್ತಿತರ ಬಾಲ ಕಲಾವಿದರ ಅಭಿನಯ ಹಾಗೂ ಚಿತ್ರದ ಒಟ್ಟಾರೆ ಆಶಯ ಚಿತ್ರದಲ್ಲಿ ಮೆಚ್ಚಲು ಅರ್ಹವಾದ ಅಂಶಗಳು. ಶಾಸಕ ಅಶ್ವತ್ಥನಾರಾಯಣ ಅವರ ಪ್ರವೇಶ `ಮಕ್ಕಳ ಚಿತ್ರ'ವನ್ನು ರಾಜಕೀಯ ಸಾಕ್ಷ್ಯಚಿತ್ರವಾಗಿ ಪರಿವರ್ತಿಸಿದೆ. ಅಂಧಕಾರದಲ್ಲಿರುವ ಮಕ್ಕಳ ಸಿನಿಮಾಗಳ ಗುಣಮಟ್ಟವನ್ನು `ಬೆಳಕಿನೆಡೆಗೆ' ತರಬೇಕಾದ ಅಗತ್ಯವನ್ನು ಈ ಚಿತ್ರ ನೆನಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT