ADVERTISEMENT

ಕಲಸುಮೇಲೋಗರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST
ಕಲಸುಮೇಲೋಗರ
ಕಲಸುಮೇಲೋಗರ   

ಚಿತ್ರ: ಏಕ್ ದೀವಾನಾ ಥಾ

ಕೆಲವು ವರ್ಷಗಳ ಹಿಂದೆ ತಾವೇ ಹೆಣೆದ ಹಳೆಯ ಕುಲಾವಿಗೆ ಹೊಸದೆರಡು ಬಣ್ಣದ ದಾರಗಳನ್ನು ಪೋಣಿಸಿ ಗೌತಮ್ ಮೆನನ್ ತಯಾರಿಸಿದ ಚಿತ್ರ `ಏಕ್ ದೀವಾನಾ ಥಾ~.
ತಮ್ಮದೇ ನಿರ್ದೇಶನದ ತಮಿಳಿನ `ವಿನ್ನೈತಾಂಡಿ ವೆರುವಾಯಾ~ ಚಿತ್ರವನ್ನು ಬಾಲಿವುಡ್‌ಗೆ ಇಳಿಸುವಾಗ ಒಂದಷ್ಟು ಬದಲಾವಣೆ ಮಾಡಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಗೆದ್ದಿದ್ದ ಈ ಚಿತ್ರವನ್ನು ಹಿಂದಿಯ ಸಿನಿಮಾಸಕ್ತರ  ಮನೋಭಾವಕ್ಕೆ ಒಗ್ಗಿಸುವ ಒತ್ತಡದಲ್ಲಿ ಚಿತ್ರ ತನ್ನ ಮೂಲ ನವಿರುತನವನ್ನು ಕಳೆದುಕೊಂಡಿದೆ. ಆರಂಭದಲ್ಲಿ ನಿರೀಕ್ಷೆ ಹುಟ್ಟಿಸುವ ಕಥೆಗೆ ತಾರ್ಕಿಕ ಅಂತ್ಯ ನೀಡುವಲ್ಲಿ ಚಿತ್ರ ವಿಫಲವಾಗುತ್ತದೆ. ಪ್ರೀತಿ ಪ್ರೇಮದ ಸುತ್ತ ಗಿರಕಿ ಹೊಡೆಯುವ ಚಿತ್ರಕಥೆ (ಜಾವೇದ್ ಅಕ್ತರ್) ಅಲ್ಲಲ್ಲಿ ಲಯ ಕಳೆದುಕೊಳ್ಳುತ್ತಲೇ ಸಾಗುತ್ತದೆ. ಆದರೆ ಪ್ರೇಮದ ಭಾವಪೂರ್ಣ ಮತ್ತು ಮನಸ್ಸಿನ ದ್ವಂದ್ವಗಳನ್ನು ಬಿಂಬಿಸುವ ಸನ್ನಿವೇಶಗಳು ಸ್ವಲ್ಪ ಮಟ್ಟಿನ ಆಸಕ್ತಿಯನ್ನು ಉಳಿಸುತ್ತವೆ.

ಪ್ರೀತಿ ಪ್ರೇಮದ ಹೊರತಾಗಿ ಬೇರೊಂದು ಕಥೆಯ ಎಳೆ ಸೇರಿಸದೆ ಚಿತ್ರವನ್ನು ಹದವಾಗಿ ನಿರೂಪಿಸುವಲ್ಲಿ ಮೆನನ್ ಯಶಸ್ವಿಯಾದರೂ ಕೆಲವು ದೃಶ್ಯಗಳನ್ನು ಅನಗತ್ಯವಾಗಿ ಹಿಂಜಿದ್ದಾರೆ. ಇದು ಎರಡು ವಿಭಿನ್ನ ಧರ್ಮೀಯರ ಪ್ರೇಮಕಥೆ. ಸಚಿನ್ (ಪ್ರತೀಕ್ ಬಬ್ಬರ್) ಹಿಂದೂ ಯುವಕ. ಮುಂಬೈಗೆ ಬರುವ ಜೆಸ್ಸಿ (ಅಮಿ ಜಾಕ್ಸನ್) ಕೇರಳ ಮೂಲದ ಕ್ರಿಶ್ಚಿಯನ್. ನಾಯಕನಿಗಿಂತ ಒಂದು ವರ್ಷ ದೊಡ್ಡವಳು. ಇಬ್ಬರ ಪ್ರೇಮಕ್ಕೆ ಅಡ್ಡಿ ಇವೆರಡೇ ಕಾರಣಗಳಲ್ಲ. ನಾಯಕನಿಗೆ ಸಿನಿಮಾ ನಿರ್ದೇಶಕನಾಗುವ ಆಸೆ. ನಾಯಕಿಯ ಸಂಪ್ರದಾಯಸ್ಥ ಕುಟುಂಬಕ್ಕೆ ಸಿನಿಮಾ ಎಂದರೆ ಕೆಟ್ಟ ಸಂಸ್ಕೃತಿ.

ಇದರ ನಡುವೆಯೂ ಇಬ್ಬರ ನಡುವೆ ಪ್ರೀತಿ ಮೂಡುತ್ತದೆ. ಅಲ್ಲಲ್ಲಿ ಒಡೆಯುತ್ತದೆ. ಮತ್ತೆ ಬೆಸೆಯುತ್ತದೆ. ಪ್ರೇಯಸಿಗಾಗಿ ನಾಯಕ ಕೇರಳಕ್ಕೂ ಬರುತ್ತಾನೆ. ಮನೆಯವರ ಒತ್ತಡಕ್ಕೆ ಮಣಿದು ಒಪ್ಪಿಕೊಂಡಿದ್ದ ಬೇರೆ ಮದುವೆಯನ್ನು ನಾಯಕಿ ತಿರಸ್ಕರಿಸುತ್ತಾಳೆ.
ಅಯೋಮಯವಾಗಿ ಸಾಗುವ ಚಿತ್ರಕಥೆ ಕೊನೆಗೂ ಒಂದು ಹಂತಕ್ಕೆ ಬಂತು ಎಂದು ಮೂಡುವ ನೆಮ್ಮದಿ ಮತ್ತೆ ಕದಡುತ್ತದೆ. ಸಚಿನ್‌ನಿಂದ ದೂರಸರಿಯುವ ಜೆಸ್ಸಿ ಅಪ್ಪ ನೋಡಿದ ಹುಡುಗನನ್ನೇ ಮದುವೆಯಾಗುತ್ತಾಳೆ. ಸಚಿನ್ ಚಿತ್ರ ನಿರ್ದೇಶಕನಾಗುತ್ತಾನೆ. ತನ್ನದೇ ಕಥೆಯನ್ನು ಸಿನಿಮಾ ಮಾಡುತ್ತಾನೆ. ಮತ್ತೆ ಜೆಸ್ಸಿ ಎದುರಾಗುತ್ತಾಳೆ. ಇದು ಪ್ರೇಕ್ಷಕನನ್ನು ಗೊಂದಲದಲ್ಲಿ ನೂಕುವ ಉದ್ದೇಶವುಳ್ಳ ಸಿನಿಮಾ ಕಥೆ ಮತ್ತು ಅದರೊಳಗಿನ ಸಿನಿಮಾ ಕಥೆಗಳ ಕಲಸು ಮೇಲೋಗರ.

ಪ್ರತೀಕ್ ಬಬ್ಬರ್ ಮತ್ತು ಅಮಿ ಜಾಕ್ಸನ್ ಅಭಿನಯ ಹಲವು ಸನ್ನಿವೇಶಗಳಲ್ಲಿ ಕಾಡುತ್ತದೆ. ಕೆಲವೆಡೆ ಪ್ರತೀಕ್ ಇನ್ನೂ ಮಾಗಬೇಕು ಎನಿಸುತ್ತದೆ. ಅಮಿ ಜಾಕ್ಸನ್ ನಟನೆ ಗಮನಾರ್ಹವಾದರೂ ಕೇರಳ ಪರಿಸರದ ಮುಖಚರ್ಯೆ, ಉಡುಗೆ ತೊಡುಗೆಗಳು ಅವರಲ್ಲಿ ಕಾಣುವುದಿಲ್ಲ. ಮನು ರಿಷಿ, ಸಚಿನ್ ಖೇಡೇಕರ್, ಬಾಬು ಆಂಟೋನಿ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಪ್ರಯೋಗಗಳು ಕಂಡುಬಂದರೂ ಎ.ಆರ್. ರೆಹಮಾನ್ ಸಂಗೀತ ಅಷ್ಟಾಗಿ ಪ್ರಭಾವಿಸುವುದಿಲ್ಲ. ಕೇರಳದ ಸುಂದರ ದೃಶ್ಯಾವಳಿಗಳನ್ನು ಎಂ.ಎಸ್.ಪ್ರಭು ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ರೀತಿ ಇಷ್ಟವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT