ADVERTISEMENT

ಕಾನನದ ‘ಕಿಚ್ಚು’; ಸಂಘರ್ಷವೇ ಹೆಚ್ಚು

ಕೆ.ಎಚ್.ಓಬಳೇಶ್
Published 4 ಮೇ 2018, 10:43 IST
Last Updated 4 ಮೇ 2018, 10:43 IST
‘ಕಿಚ್ಚು’ ಚಿತ್ರದ ದೃಶ್ಯ
‘ಕಿಚ್ಚು’ ಚಿತ್ರದ ದೃಶ್ಯ   

ಚಿತ್ರ: ಕಿಚ್ಚು
ನಿರ್ಮಾಣ: ರೂಬಿ ಶರ್ಮ, ಪ್ರದೀಪ್‌ ರಾಜ್
ನಿರ್ದೇಶನ: ಪ್ರದೀಪ್ ರಾಜ್
ತಾರಾಗಣ: ರಾಗಿಣಿ ದ್ವಿವೇದಿ, ಧ್ರುವ ಶರ್ಮ, ಅಭಿನಯ, ಸಾಯಿಕುಮಾರ್, ಸುಚೇಂದ್ರಪ್ರಸಾದ್

ಅರಣ್ಯದೊಳಗೆ ಮತ್ತು ಅದರ ಸುತ್ತಮುತ್ತ ರೆಸಾರ್ಟ್‌ ಹಾವಳಿ ಉಲ್ಬಣಿಸಿದೆ. ಇದು ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷಕ್ಕೂ ಮುನ್ನುಡಿ ಬರೆದಿದೆ. ಇನ್ನೊಂದೆಡೆ ಅರಣ್ಯವಾಸಿಗಳ ಆರ್ತನಾದ ಅಧಿಕಾರಸ್ಥರ ದರ್ಪದ ಮುಂದೆ ಕ್ಷೀಣವಾಗುತ್ತಿದೆ. ಕಾಡಿನ ಉಳಿವಿಗೆ ಶ್ರಮಿಸುತ್ತಿರುವ ಗಿರಿಜನರ ಅರಣ್ಯರೋದನೆಯನ್ನು ‘ಕಿಚ್ಚು’ ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪ್ರದೀಪ್‌ ರಾಜ್.

ಈ ಸಿನಿಮಾ ಗಿರಿಜನರ ಬದುಕು ಮತ್ತು ಕಾಡನ್ನು ಉಳಿಸುವ ಬಗ್ಗೆ ಮಾತನಾಡುತ್ತದೆ. ಆದರೆ, ಆ ಕಾಳಜಿಯನ್ನು ದಾಟಿಸುವ ಮಾರ್ಗ ಮಾತ್ರ ನೇರವಾಗಿಲ್ಲ. ಕಾನನ ಉಳಿಸುವ ಹೋರಾಟದಲ್ಲಿ ನಾಯಕನ ಶಕ್ತಿ ಮತ್ತು ಅದಕ್ಕೆ ಗಿರಿಜನರ ಬೆಂಬಲ ಒಂದೆಡೆಗಿದ್ದರೆ, ಮತ್ತೊಂದೆಡೆ ನಕ್ಸಲರು ಮತ್ತು ಪೊಲೀಸರ ನಡುವಿನ ಘೋರ ಘರ್ಷಣೆಯಿದೆ. ಈ ಸಂಘರ್ಷದ ವಿಜೃಂಬಣೆಯಲ್ಲಿ ಕಥನದ ಆಶಯವೇ ಮಸುಕಾಗಿದೆ.

ADVERTISEMENT

ಸೂರಿಯ (ಧ್ರುವ ಶರ್ಮ) ಅ‍ಪ್ಪನಿಗೆ ಅರಣ್ಯವೇ ಸರ್ವಸ್ವ. ಅರಣ್ಯದೊಳಗೆ ರೆಸಾರ್ಟ್‌ ನಿರ್ಮಾಣ ವಿರೋಧಿಸಿ ಹೋರಾಟ ಆರಂಭಿಸುತ್ತಾರೆ. ಕೊನೆಗೆ, ಉದ್ಯಮಿಯ ಷಡ್ಯಂತ್ರದಿಂದ ಕೊಲೆಯಾಗುತ್ತಾರೆ. ಸೂರಿಗೆ ಕಿವಿ ಕೇಳುವುದಿಲ್ಲ; ಮಾತು ಬಾರದು. ಚಿಕ್ಕಪ್ಪನೇ ಅವನ ಬದುಕಿಗೆ ಆಸರೆ. ಬಾಲ್ಯದಲ್ಲಿಯೇ ನಂದಿನಿ ಸ್ನೇಹಿತೆಯಾಗುತ್ತಾಳೆ. ಆಕೆಯೂ ವಾಕ್‌ ಮತ್ತು ಶ್ರವಣದೋಷವುಳ್ಳವಳು.

ರೆಸಾರ್ಟ್‌ ನಿರ್ಮಾಣಕ್ಕೆ ಮುಂದಾದ ಉದ್ಯಮಿಯ ಕೊಲೆಯಾಗುತ್ತದೆ. ಇದರ ಆರೋಪ ಹೊತ್ತ ಸೂರಿ ಮತ್ತು ಸ್ನೇಹಿತರು ಕಾಡಿನೊಳಗೆ ತಲೆಮರೆಸಿಕೊಳ್ಳುತ್ತಾರೆ. ಅಲ್ಲಿ ಅವರಿಗೆ ನಕ್ಸಲರ ಸಂಪರ್ಕ ಬೆಸೆಯುತ್ತದೆ. ನಂದಿನಿಯ ಅಕ್ಕ ಪದ್ಮಿನಿ (ರಾಗಿಣಿ ದ್ವಿವೇದಿ) ತನ್ನಪ್ಪನ ಸಾಲ ತೀರಿಸಲು ಕಾಫಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಾಳೆ. ಎಸ್ಟೇಟ್‌ ಮಾಲೀಕನ ಮಗ ಆಕೆಯ ಮೇಲೆ ವಕ್ರನೋಟ ಬೀರುತ್ತಾನೆ. ಆತನೇ ಆಕೆಯ ತಂದೆ, ತಾಯಿಯ ಸಾವಿಗೂ ಕಾರಣನಾಗುತ್ತಾನೆ.

ವಾಕ್‌ ಮತ್ತು ಶ್ರವಣದೋಷವುಳ್ಳ ಧ್ರುವ ಶರ್ಮ ಮತ್ತು ಅಭಿನಯ ನಟಿಸಿರುವುದು ಈ ಚಿತ್ರದ ವಿಶೇಷಗಳಲ್ಲೊಂದು. ಇಬ್ಬರೂ ತಮಗೆ ದೊರೆತ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಉಳಿದಂತೆ ಸಾಯಿಕುಮಾರ್‌ ಮತ್ತು ಸುಚೇಂದ್ರಪ್ರಸಾದ್‌ ಪಾತ್ರ ಪೋಷಣೆ ಚೆನ್ನಾಗಿದೆ. ರಾಗಿಣಿ ದ್ವಿವೇದಿ ಮೊದಲ ಬಾರಿಗೆ ಡಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವೈದ್ಯನಾಗಿ ಅತಿಥಿ ಪಾತ್ರದಲ್ಲಿ ನಟ ಸುದೀಪ್ ನಟಿಸಿದ್ದಾರೆ. 

ರೆಸಾರ್ಟ್‌ಗಳ ಹಾವಳಿಯಿಂದ ವನ್ಯಜೀವಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜೊತೆಗೆ, ಮೂಲ ಸೌಕರ್ಯ ಇಲ್ಲದೆ ಗಿರಿಜನರ ಬದುಕು ಕುಲುಮೆಯಲ್ಲಿ ಬೇಯುತ್ತಿದೆ.‌ ಇದನ್ನು ಪರಿಣಾಮಕಾರಿಯಾಗಿ ಹೇಳುವ ಅವಕಾಶವಿದ್ದರೂ ನಿರ್ದೇಶಕರು ಈ ಬಗ್ಗೆ ಒತ್ತುಕೊಟ್ಟಿಲ್ಲ. ಕಾನನದ ಛಾಯೆಯನ್ನು ಸೆರೆ ಹಿಡಿಯುವಲ್ಲಿ ಚಿದಂಬರ ಎಸ್‌.ಎನ್‌. ಫಾಜಿಲ್ ದಣಿದಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ ಎರಡು ಹಾಡುಗಳು ಗುನುಗುವಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.