ADVERTISEMENT

ನಗಿಸುವುದು ಸುಲಭವಲ್ಲ

ವಿಶಾಖ ಎನ್.
Published 19 ಫೆಬ್ರುವರಿ 2011, 16:15 IST
Last Updated 19 ಫೆಬ್ರುವರಿ 2011, 16:15 IST

ಚಿತ್ರ: 5 ಈಡಿಯಟ್ಸ್
ಸುಖಾಸುಮ್ಮನೆ ನಗಿಸಲು ಅತಾರ್ಕಿಕ ಪ್ರಸಂಗಗಳನ್ನು ಹೊಸೆಯುವ ಉದ್ಯಮಕ್ಕೀಗ ಬಹುಬೇಡಿಕೆ. ಕಿರು ತೆರೆಯಲ್ಲಿ ಸಂಜೆ ನಗಿಸುವ ಕೆಲಸ ಮಾಡುತ್ತಿದ್ದ ಧಾರಾವಾಹಿಗಳ ಸ್ಲಾಟ್‌ಗಳಿಗೀಗ ರಾತ್ರಿಗೆ ಬಡ್ತಿ. ಮಲಗುವ ಮುನ್ನ ನಕ್ಕು ಹಗುರಾಗುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಹಿನಿಗಳ ಟಿಆರ್‌ಪಿ ಗ್ರಾಫ್ ಏರುತ್ತಿದೆ. ಕಿರುತೆರೆಗೆ ಹೊಂದುವಂಥ ಚೌಕಟ್ಟನ್ನು ಇಟ್ಟುಕೊಂಡೇ ‘5 ಈಡಿಯಟ್ಸ್’ ಸಿದ್ಧಗೊಂಡಿದೆ. ಇದು ಟಿವಿ ಧಾರಾವಾಹಿಯೂ ಆಗಬಹುದಾಗಿದ್ದ ಸಿನಿಮಾ.

ಬಾಲನಟನಾಗಿ ಹಾಸ್ಯ ರಸಾಯನ ಉಣಬಡಿಸಿ ಅನುಭವವಿರುವ ಮಾಸ್ಟರ್ ಆನಂದ್ ಮೊದಲ ಬಾರಿಗೆ ನಿರ್ದೇಶಕರ ಕುರ್ಚಿಯಲ್ಲಿ ಕೂತಿರುವ ಚಿತ್ರವಿದು. ಕಥೆ, ಚಿತ್ರಕಥೆಯೂ ಅವರದ್ದೇ. ಮಾತಿನ ಮಂಟಪದ ಮೇಲೆ ನಗೆಯ ಕಲಶ ಇಡುವುದು ಅವರ ಉಮೇದು. ಕಲಶವನ್ನೇನೋ ಅವರು ಇಟ್ಟಿದ್ದಾರೆ. ಆದರೆ, ಅದು ಸ್ವಲ್ಪ ವಾಲಿಕೊಂಡಂತಾಗಿದೆ.

ಸಣ್ಣ ಬಜೆಟ್‌ನಲ್ಲೇ ಸಿನಿಮಾ ಮಾಡಿಕೊಡುವುದು ನಿರ್ದೇಶಕರ ಉದ್ದೇಶ. ಹಾಗಾಗಿ ಅವರಿಗೆ ದೃಶ್ಯತಂತ್ರವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳಲು ಆಗಿಲ್ಲ. ಪಾತ್ರಗಳ ಮಾತನ್ನೇ ಚಿತ್ರವತ್ತಾಗಿ ಹೇಳಿಸುವ ಅನಿವಾರ್ಯತೆಗೆ ಅವರು ಸಿಲುಕಿದ್ದಾರೆ. ಈ ಕಾರಣಕ್ಕೆ ಚಿತ್ರವು ಅಗತ್ಯಕ್ಕಿಂತ ಹೆಚ್ಚು ವಾಚ್ಯವಾಗಿದೆ. ಎಷ್ಟೋ ‘ಪಂಚ್’ ಸಂಭಾಷಣೆಗಳು ಉಡುಗಿಹೋದಂತೆ ಭಾಸವಾಗುತ್ತವೆ.

ಚಿತ್ರದ ಶಿಲ್ಪವೇ ಪೊಳ್ಳಾಗಿದೆ. ಕೆಲಸ ಸಿಗದೆ ಹತಾಶರಾಗುವ ಹುಡುಗರು ಅಪರಾಧ ಮಾಡಲು ಏಕಾಏಕಿ ನಿರ್ಧರಿಸುವ ಅಸಹಜತೆಯ ಮೇಲೆ ಇಡೀ ಚಿತ್ರವನ್ನು ನಿಲ್ಲಿಸಿರುವುದರಿಂದ ಉಳಿದೆಲ್ಲವೂ ಔಚಿತ್ಯವಿಲ್ಲದ ಪ್ರಹಸನಗಳಂತೆ ಕಾಣುತ್ತವೆ. ಹೇಗಾದರೂ ಮಾಡಿ ನಗಿಸಬೇಕು ಎಂಬುದು ಗುರಿ. ಈ ಹಾದಿಯಲ್ಲಿ ವೆಂಕಟ್ ಬರೆದಿರುವ ಸಂಭಾಷಣೆ ಅನೇಕ ಸಂದರ್ಭಗಳಲ್ಲಿ ನೆರವಿಗೆ ಬಂದಿದೆ.

ಅತಾರ್ಕಿಕ ಎಸ್‌ಎಂಎಸ್ ಜೋಕುಗಳಿಗಿರುವ ಆಯುಸ್ಸೇ ಈ ಹಾಸ್ಯಪ್ರಸಂಗಗಳಿಗೂ ಇದೆ. ಬಿಮ್ಮನೆ ಕೂತ ಮಗುವಿಗೆ ಕಚಗುಳಿ ಇಟ್ಟು ನಕ್ಕು ಸುಖಿಸುವ ಭರದಲ್ಲಿ ಮಗುವಿನ ಪಕ್ಕ ಕೂತ ದೊಡ್ಡವರಿಗೂ ಅದನ್ನೇ ಮಾಡಿ ಕೆಲವರು ಬೈಯಿಸಿಕೊಳ್ಳುವುದುಂಟು. ‘5 ಈಡಿಯಟ್ಸ್’ ಧೋರಣೆಯೂ ಇದೇ.

ಕಚಗುಳಿಯಲ್ಲಿ ಸಿಂಹಪಾಲು ಆನಂದ್ ಹಾಗೂ ನವೀನ್ ಕೃಷ್ಣ ಅಭಿನಯಕ್ಕೆ ಸಲ್ಲುತ್ತದೆ. ಸಾಹಿತ್ಯವೇ ಇಲ್ಲದ ಹಾಡು, ‘ಸುದೀಪ್ ಗ್ರಾಫಿಕ್ಸ್‌ನಲ್ಲಿ ಬಂದು ಹೊಡೆದ ಹಾಗೆ ಆಗುತ್ತೆ’ ಎಂಬ ಸಂಭಾಷಣೆ ಜನಪ್ರಿಯ ಚಿತ್ರಗಳ ಮಾದರಿಯನ್ನೇ ಆರೋಗ್ಯಕರ ರೀತಿಯಲ್ಲಿ ಅಣಕು ಮಾಡುವ ಸಂಗತಿಗಳಾಗಿ ಖುಷಿ ಕೊಡುತ್ತವೆ.

ವಾಹಿನಿಯಲ್ಲಿ ಭವಿಷ್ಯ ಹೇಳುವ ಬೃಹದಾಕಾರದ ವ್ಯಕ್ತಿಯ ಪಾತ್ರದ ಸೃಷ್ಟಿಯೇನೋ ಚೆನ್ನಾಗಿದೆ. ಆದರೆ, ಆ ಪಾತ್ರ ಪೋಷಣೆ ಇನ್ನಷ್ಟು ಸಶಕ್ತವಾಗಿ ಆಗಬೇಕಿತ್ತು. ಪೆಟ್ರೋಲ್ ಪ್ರಸನ್ನ, ಮಿಮಿಕ್ರಿ ದಯಾನಂದ, ಹರ್ಷಿಕಾ ಪೂಣಚ್ಚ, ತಾವರೆ, ನವ್ಯಾಶ್ರೀ, ಚಿದಾನಂದ, ಕರಿಬಸವಯ್ಯ ಎಲ್ಲರದ್ದೂ ಅಗತ್ಯಕ್ಕೆ ತಕ್ಕ ಅಭಿನಯ. 

‘ಆರ್ಯ 2’ ಚಿತ್ರದ ‘ರಿಂಗ ರಿಂಗ’ ಹಾಡನ್ನು ಡ್ರಮ್ಸ್ ದೇವಾ ತಮ್ಮದಾಗಿಸಿಕೊಂಡಿದ್ದಾರೆ. ಅಂತೆಯೇ ಹಿನ್ನೆಲೆ ಸಂಗೀತದಲ್ಲಿ ‘ಕಾಂಟೆ’ ಹಿಂದಿ ಚಿತ್ರದ ಹಮಿಂಗ್‌ಗೆ ಶ್ರೀಧರ್ ವಿ.ಸಂಭ್ರಮ್ ಋಣಿಯಾಗಿದ್ದಾರೆ. ಹದವಾದ ಶಿಲ್ಪವಿಲ್ಲದ ಹಾಸ್ಯ ಧಾರಾವಾಹಿಗಳನ್ನು ಇಷ್ಟಪಡುವ ಮನಸ್ಸುಗಳನ್ನಷ್ಟೇ ‘5 ಈಡಿಯಟ್ಸ್’ ಗುರಿಮಾಡಿಕೊಂಡಿರುವುದಂತೂ ಸ್ಪಷ್ಟ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.