ADVERTISEMENT

ಪ್ರೀತಿಯ ಪುಳಕ ಸಮರ ಕಥಾನಕ

ಚಿತ್ರ : ಬಾಹುಬಲಿ (ತೆಲುಗು)

ವಿಶಾಖ ಎನ್.
Published 10 ಜುಲೈ 2015, 19:30 IST
Last Updated 10 ಜುಲೈ 2015, 19:30 IST
ಪ್ರಭಾಸ್‌
ಪ್ರಭಾಸ್‌   

ನಿರ್ಮಾಪಕ:  ಅರ್ಕಾ ಮೀಡಿಯಾ ವರ್ಕ್ಸ್‌
ನಿರ್ದೇಶಕ: ಎಸ್‌.ಎಸ್‌ ರಾಜಮೌಳಿ
ತಾರಾಗಣ: ಪ್ರಭಾಸ್‌, ರಾಣಾ ದಗ್ಗುಬಾಟಿ, ಸತ್ಯರಾಜ್‌, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಮ್ಯಕೃಷ್ಣ ಮತ್ತಿತರರು.


ಹರಿವ ನೀರಿನೊಳಗೆ ಕೈ ಇಳಿಬಿಟ್ಟ ಸುಂದರಿ. ಮೀನು ಮುತ್ತಿಕ್ಕುವ ಹೊತ್ತಿಗೇ ಆ ಮುಂಗೈ ಮೇಲೆ ಅವಳಿಗೆ ಕಾಣದಂತೆ ಚಿತ್ರ ಬಿಡಿಸಿ ಹೋಗುವ ನಾಯಕ. ನೀರಿನಲ್ಲಿ ಚಿತ್ರವೇಕೆ ಅಳಿಸಿಹೋಗಲಿಲ್ಲ ಎಂದು ಕೇಳಕೂಡದು. ಯಾಕೆಂದರೆ, ನಿರ್ದೇಶಕ ರಾಜಮೌಳಿ ಅವರ ವರಸೆಯೇ ಮೈಮರೆಸುವುದು.

ಹೆಬ್ಬಂಡೆಗಳ ಸಾಲಿನ ನಡುವೆ ನದಿ. ಒಂದು ತುದಿಯ ಬಂಡೆಯಿಂದ ಇನ್ನೊಂದು ತುದಿಗೆ ಚಂಗನೆ ಜಿಗಿಯುವ ನಾಯಕ ರೆಂಬೆಯೊಂದನ್ನು ಆಸರೆಗೆ ಹಿಡಿದಾಗ ಅದೇಕೆ ಮುರಿಯುವುದಿಲ್ಲ ಎಂದು ಪ್ರಶ್ನಿಸಕೂಡದು. ಯಾಕೆಂದರೆ, ಇದು ರಾಜಮೌಳಿ ಧಾಟಿಯ ಸಾಹಸ ಪ್ರದರ್ಶನ.

ಕಾಡೆಮ್ಮೆಯ ಜೊತೆ ಕಾದಾಡುವ ದೈತ್ಯ ರಾಣಾ ದಗ್ಗುಬಾಟಿಯ ಕಾಲುಗಳಿಗೇಕೆ ಪೈಲ್ವಾನನ ಕಸುವಿಲ್ಲ ಎಂದು ಗುಸುಗುಸು ಹೊಮ್ಮಲು ಮುಂದಿನ ದೃಶ್ಯ ಅನುವು ಮಾಡಿಕೊಡುವುದಿಲ್ಲ. ಇದು ಕೂಡ ರಾಜಮೌಳಿ ಶೈಲಿಯೇ.

ಜಾನಪದವನ್ನೂ ಫ್ಯಾಂಟಸಿಯನ್ನೂ ಶ್ರದ್ಧೆಯಿಂದ ಕಲಸಿ ಮಾಡಿರುವ ಸಿನಿಮಾ ‘ಬಾಹುಬಲಿ’. ಹಾಲಿವುಡ್‌ನ ಸಮರ ಚಿತ್ರಗಳಲ್ಲಿ ಇರುವ ತೀವ್ರತೆ, ‘ಮೋಗ್ಲಿ’ಯಂಥ ಕಾರ್ಟೂನ್‌ ಕಥೆಗಳಲ್ಲಿ ಇರುವ ಕಂಪ್ಯೂಟರ್‌ ಕುಶಲದ ಚಳಕ ಎರಡು ಪ್ರಕಾರಕ್ಕೂ ಈ ಸಿನಿಮಾದಲ್ಲಿ ಗಮನಾರ್ಹ ಉದಾಹರಣೆಗಳು ಸಿಗುತ್ತವೆ. ಅದ್ದೂರಿ ಸೆಟ್‌ಗಳ ದರ್ಶನ ಭಾಗ್ಯವೂ ಇದೆಯೆನ್ನಿ.

ವಿ. ವಿಜಯೇಂದ್ರ ಪ್ರಸಾದ್‌ ಜೊತೆಯಲ್ಲಿ ರಾಜಮೌಳಿ ಚಿತ್ರಕಥೆ ರೂಪಿಸುವಾಗಲೇ ಕಂತು ಕಂತಾಗಿ ದೃಶ್ಯಗಳನ್ನು ಪೋಣಿಸುವ ಅನುಕೂಲಕ್ಕೆ ಕಟ್ಟುಬಿದ್ದಿದ್ದಾರೆ. ಹೀರೊಯಿಸಂ, ಪ್ರೇಮಾಂಕುರ, ಜನ್ಮ ರಹಸ್ಯ, ಯುದ್ಧ ಹೀಗೆ ಕಂತುಗಳನ್ನು ವಿಂಗಡಿಸಬಹುದು. ಇವೆಲ್ಲಾ ಆಗಬೇಕಾದರೆ ಒಳಿತು, ಕೆಡಕಿನ  ಕಪ್ಪು–ಬಿಳುಪಿನ ಸೂತ್ರವನ್ನು ಉಜ್ಜಲೇಬೇಕಲ್ಲವೇ? ಅದನ್ನು ರಾಜಮೌಳಿ ತಮ್ಮದೇ ಶೈಲಿಯಲ್ಲಿ ಉಜ್ಜಿದ್ದಾರೆ.

ನಾಯಕ ಪ್ರಭಾಸ್‌, ರಾಣಾ ದಗ್ಗುಬಾಟಿ ಎತ್ತರದ ನಿಲುವು ಹಾಗೂ ಭುಜಬಲ ಪರಾಕ್ರಮ ದಕ್ಷಿಣ ಭಾರತದ ‘ಸೂಪರ್‌ ಹೀರೊ’ ಮಾದರಿಯ ಸೃಷ್ಟಿಗೆ ಅನುವು ಮಾಡಿಕೊಟ್ಟಿವೆ. ನಾಯಕ, ಖಳ ನಾಯಕ ಎನ್ನುವ ಭೇದವನ್ನು ತುಸು ಮಂಕಾಗಿಸಿ, ಸಂದರ್ಭವನ್ನೇ ‘ಖಳ’ ಆಗಿಸುವ ತಂತ್ರವನ್ನೂ ರಾಜಮೌಳಿ ಮುದ್ದಿಸಿದ್ದಾರೆ.

ಉಪಕಥೆಗಳ ಕೊಂಡಿ ಹಾಕುವುದರಲ್ಲೂ ಅವರು ನಿಸ್ಸೀಮರು. ಇಷ್ಟಾಗಿ, ಕಂತು ಕಂತಾದ ಈ ದೃಶ್ಯಗಳ ‘ಬಂಧ’ ಎಷ್ಟು ಗಟ್ಟಿ ಎನ್ನುವ ಪ್ರಶ್ನೆ ಉಳಿಯುತ್ತದೆ. ಅದಕ್ಕೆ ಉತ್ತರ ಕೊಡಲು ಹೋಗದ ರಾಜಮೌಳಿ, ‘ಸಿನಿಮಾದ ಅಂತ್ಯಕ್ಕೆ ಮುಂದಿನ ವರ್ಷದವರೆಗೆ ಕಾಯಿರಿ’ ಎನ್ನುವ ಕರೆ ಕೊಟ್ಟು ಪೂರ್ಣವಿರಾಮವನ್ನು ಅಲ್ಪ ವಿರಾಮವಾಗಿಸಿದ್ದಾರೆ. ಯಶಸ್ಸಿನ ರುಚಿ ಉಂಡ ನಂತರ ಸಿನಿಮಾದ ಮುಂದುವರಿದ ಭಾಗಗಳು ಬರುವುದನ್ನು ನೋಡಿದ್ದೇವೆ. ಆದರೆ, ಇದು ಜನಪ್ರಿಯತೆ ಹಾಗೂ ಪ್ರಚಾರದ ಇನ್ನೊಂದು ತಂತ್ರವಾಗಿ ಕಾಣುತ್ತದೆ.

ಅಭಿನಯದಲ್ಲಿ ಸತ್ಯರಾಜ್‌ ಹುರಿಯಾಳಿನಂತೆ ಕಾಣುತ್ತಾರೆ. ರಮ್ಯಕೃಷ್ಣ ಅವರ ಗತ್ತು ಹಾಗೆಯೇ ಇದೆ. ಪ್ರಭಾಸ್‌ ಹಾಗೂ ರಾಣಾ ಭುಜಬಲದಿಂದ ಗಮನ ಸೆಳೆಯುವಂತೆ ಆಗೀಗ ನಗೆಯ ಪ್ರತಿಕ್ರಿಯೆಗೂ ಪಕ್ಕಾಗುತ್ತಾರೆ. ತಮನ್ನಾ ಭಾಟಿಯಾ ಸೌಂದರ್ಯ ಸಮಯ ಸಿನಿಮಾದ ‘ರಿಲೀಫ್‌’ಗಳಲ್ಲಿ ಒಂದು. ಕನ್ನಡದ ನಟ ಸುದೀಪ್‌ ಒಂದೇ ದೃಶ್ಯದಲ್ಲಿ ಬಂದು ಹೋಗುತ್ತಾರೆ.

ಪಾತ್ರಗಳಿಗಿಂತ ಕ್ಯಾಮೆರಾವನ್ನು  ಹೆಚ್ಚೇ ಚಲನಶೀಲವಾಗಿಸಿರುವ ಕೆ.ಕೆ. ಸೆಂಥಿಲ್‌ ಕುಮಾರ್‌, ದೊಡ್ಡ ಸರಕನ್ನು ಸಂಕಲನ ಮಾಡಿ ಸಿನಿಮಾ ಆಗಿಸಿರುವ ಕೋಟಗಿರಿ ವೆಂಕಟೇಶ್ವರ ರಾವ್‌, ಕಂಪ್ಯೂಟರ್‌ ಕುಶಲಕರ್ಮದ ಮೂಲಕ ಗಮನ ಸೆಳೆದಿರುವ ವಿ. ಶ್ರೀನಿವಾಸ ಮೋಹನ್‌ ಇವರೆಲ್ಲರ ಶ್ರಮ, ಶ್ರದ್ಧೆಗೆ ಸಿನಿಮಾದಲ್ಲಿ ಹೇರಳವಾದ ಉದಾಹರಣೆಗಳು ಸಿಗುತ್ತವೆ.

ಎಂ.ಎಂ. ಕೀರವಾಣಿ ಹಿನ್ನೆಲೆ ಸಂಗೀತವೂ ಔಚಿತ್ಯಪೂರ್ಣ. ಯುದ್ಧದ ಸನ್ನಿವೇಶ ಕಣ್ಣೆವೆ ಮುಚ್ಚದಂತೆ ತೋರಿಸಿಕೊಳ್ಳುವುದು ರಾಜಮೌಳಿ ದೃಶ್ಯಜಾಣ್ಮೆಗೆ ಸಾಕ್ಷಿ.  ಇಂಥ ದೊಡ್ಡ ಬಜೆಟ್ ಇಟ್ಟುಕೊಂಡು, ನಿರ್ದೇಶಕರಾಗಿ ರಾಜಮೌಳಿ ಜಿಗಿತ ಕಂಡಿದ್ದಾರೆಯೇ ಎಂಬ ಪ್ರಶ್ನೆಗೆ ಮಾತ್ರ ಸ್ಪಷ್ಟ ಉತ್ತರವನ್ನು ಸಿನಿಮಾ ಉಳಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.