ADVERTISEMENT

ಪ್ರೀತಿ ರಂಗೋಲಿ; ಕಥೆ ಸವಕಳಿ (ಚಿತ್ರ: ಅದ್ದೂರಿ)

ಅಮಿತ್ ಎಂ.ಎಸ್.
Published 16 ಜೂನ್ 2012, 19:30 IST
Last Updated 16 ಜೂನ್ 2012, 19:30 IST

ನಿರ್ಮಾಪಕರು :  ಸಿ.ಎಂ.ಆರ್. ಶಂಕರ್ ರೆಡ್ಡಿ,  ಕೀರ್ತಿ ಸ್ವಾಮಿ
ನಿರ್ದೇಶಕ : ಎ.ಪಿ. ಅರ್ಜುನ್
ತಾರಾಗಣ : ಧ್ರುವ ಸರ್ಜಾ, ರಾಧಿಕಾ ಪಂಡಿತ್, ತರುಣ್, ಅನುಶ್ರೀ, ಬುಲ್ಲೆಟ್ ಪ್ರಕಾಶ್, ರಾಜು ತಾಳಿಕೋಟೆ, ತಬಲಾ ನಾಣಿ, ಮತ್ತಿತರರು.

ಪ್ರೀತಿಯ ಚುಂಗನ್ನು ಹಿಡಿದ ಪ್ರಾಂಜಲ ಪ್ರೇಮದ ನವಿರು ನಿರೂಪಣೆಯ ಚಿತ್ರ `ಅದ್ದೂರಿ~. ಯುವ ಮನಸುಗಳ ತವಕ ತಲ್ಲಣ, ಪ್ರೀತಿಯ ಚಿಲುಮೆ, ಕೋಪ, ನೂರಾರು ಭಾವನೆಗಳ ದ್ರಾಕ್ಷಿ ಗೊಂಚಲನ್ನು ತೂಗುಬಿಟ್ಟಿದ್ದಾರೆ ನಿರ್ದೇಶಕ ಎ.ಪಿ.ಅರ್ಜುನ್. ಅವರ ಹಿಂದಿನ ಚಿತ್ರ `ಅಂಬಾರಿ~ಯಲ್ಲಿ ಇದ್ದಂತೆಯೇ ಮಧುರ ಪ್ರೇಮವೊಂದು ಇಲ್ಲಿದೆ. ತಾವೇ ನಿರ್ಮಿಸಿಕೊಂಡ ಅಂಗೈಯಗಲ ಜಾಗದಲ್ಲಿ ಉತ್ತು ಬಿತ್ತುವ ಪ್ರಯತ್ನ ಅವರದ್ದು. ಫಸಲೂ ಬಂದಿದೆ. ಆದರೂ ಅದು ಕೈಗೆಟುಕದ ಹುಳಿ ದ್ರಾಕ್ಷಿ. ಸಂಪೂರ್ಣ `ಸಾವಯವ~ ಆದರೂ ಸತ್ವ ಹುಡುಕುವುದು ಕಷ್ಟ.

ಸಂಭಾಷಣೆ, ಸಂಗೀತ, ಚಿತ್ರ ನಿರ್ಮಾಣ ಎಲ್ಲವೂ ಭರ್ಜರಿ ಫಸಲಿನ ನಿರೀಕ್ಷೆ ಮೂಡಿಸುತ್ತದೆ. ಅತಿರೇಕಗಳಿಲ್ಲದ ಮಸಾಲೆ ರಹಿತ ನಿರೂಪಣೆ ಸಾವಯವದಷ್ಟೇ ಆರೋಗ್ಯಪೂರ್ಣ! ಆದರೆ ಕಥೆ ಎಂಬ ರುಚಿಯಲ್ಲಿ ಮರೀಚಿಕೆ.

ಧ್ರುವ ಸರ್ಜಾ ಚಿತ್ರರಂಗದ ಪ್ರವೇಶಕ್ಕಾಗಿಯೇ ಹಾಕಿಕೊಟ್ಟ ಅಡಿಗಲ್ಲು ಎಂಬುದು ಸ್ಪಷ್ಟವಾಗುತ್ತದೆ. ತಮ್ಮ ಪ್ರೀತಿಯೇ ಅದ್ದೂರಿ ಎಂದು ಸಂಭಾಷಣೆಯಲ್ಲಿ ಸಾರುತ್ತಾರೆ. ಆ ಅದ್ದೂರಿತನ ಚಿತ್ರದ ಹಲವೆಡೆ ಇಣುಕುತ್ತದೆ. ಆದರಿಲ್ಲಿ ಮಿಂಚು ಹರಿಸುವುದು ರಾಧಿಕಾ ಪಂಡಿತ್. ಅವರಿಲ್ಲಿ ಮುಂಗಾರು ಮಳೆಯಷ್ಟೇ ಸೊಬಗು. ನಗು, ಅಳು, ಸಿಟ್ಟು ಎಲ್ಲದರಲ್ಲೂ ರಾಧಿಕಾ ಮಾತ್ರ ಕಾಡುತ್ತಾರೆ, ಕಾಡಿಸುತ್ತಾರೆ. ಕಥೆಯೇ ಇಲ್ಲ ಎಂಬ ಬೇಸರವನ್ನು ದೂರ ಮಾಡಲು ಅವರಿಂದ ಸಾಧ್ಯವಾಗಿದೆ.

ತಮ್ಮನ್ನು ಪ್ರತಿನಿಧಿಸಿಕೊಳ್ಳುವ ಬಯಕೆಯನ್ನು ಅನುಷ್ಠಾನಗೊಳಿಸಿರುವ ಅರ್ಜುನ್, ತಮ್ಮ ಹೆಸರನ್ನೇ ನಾಯಕನಿಗೆ ನಾಮಕರಣ ಮಾಡಿದ್ದಾರೆ. ಹಾಡೊಂದರಲ್ಲೂ ಅದು ಮತ್ತೆ ಧ್ವನಿಸುತ್ತದೆ. ಪಾತ್ರ ಪೋಷಣೆಯಲ್ಲಾಗಲೀ, ಕಥೆಯ ವಿಸ್ತರಣೆಯಲ್ಲಾಗಲೀ `ಅಂಬಾರಿ~ಯ ಆಸ್ಥೆಯನ್ನು ಅದ್ದೂರಿಯಲ್ಲಿ ತೋರಿಲ್ಲ. ಮೊದಲರ್ಧದ ಲವಲವಿಕೆ ದ್ವಿತೀಯಾರ್ಧಕ್ಕೆ ಬಂದಂತೆ ಮರೆಯಾಗುತ್ತದೆ. ಕಥೆಯ ಬಡತನದ ಕಾರಣಕ್ಕಾಗಿಯೇ ಚಿತ್ರಕಥೆಯನ್ನು ಫ್ಲ್ಯಾಶ್‌ಬ್ಯಾಕ್‌ನೊಳಗೆ ಅಲ್ಲಲ್ಲಿ ಮುಳುಗಿಸಿ ಮೇಲೆತ್ತುವ ಇತ್ತೀಚಿನ ಜನಪ್ರಿಯ ಮಾದರಿಗೆ ಜೋತು ಬಿದ್ದಿದ್ದಾರೆ.

ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಕಾರಣ ಅವರು ಹಿಡಿದ ಸೂತ್ರ ಪ್ರೀತಿ. ಕಥೆಯೇ ಎನಿಸದ ಕಥೆಯನ್ನು ನವಿರಾಗಿ ಬಿಂಬಿಸುವ ಕುಶಲಗಾರಿಕೆಯನ್ನು ಮೆರೆದಿದ್ದಾರೆ. ಎಲ್ಲೂ ಸಂಕೀರ್ಣಗೊಳಿಸುವ ಸಾಹಸಕ್ಕೆ ಕೈಹಾಕದೆ ಆದಿಯಿಂದ ಅಂತ್ಯದವರೆಗೂ ಒಂದೇ ಹದವನ್ನು ಕಾಯ್ದುಕೊಂಡಿರುವುದು ಚಿತ್ರದ ಅಗ್ಗಳಿಕೆ. ಸಂಭಾಷಣೆಯ ತಾಜಾತನ ಚಿತ್ರದ ಜೀವಾಮೃತ. ಹಾಡು, ಹೊಡೆದಾಟಗಳ ಆಮ್ಲಜನಕ ಪೂರೈಕೆಯಿದೆ. ಆದರೆ ಈ ಎರಡು ಪಾತ್ರಗಳ ಮೇಲೆಯೇ ಎಲ್ಲಾ ಭಾರ ಹೊರಿಸಿ ಉಸಿರುಗಟ್ಟಿಸಿದ್ದಾರೆ. ಪ್ರೀತಿಯೆಂದರೆ ಅದ್ದೂರಿ. ಅದ್ದೂರಿತನವೆಂದರೆ ಪ್ರೀತಿ. ಬದುಕಿನ ಬೇರೆ ಆಯಾಮಗಳ ಪ್ರಸ್ತಾಪವಿಲ್ಲಿ ಅನಗತ್ಯ.

ಧ್ರುವ ನಟನೆ ವಿಚಾರದಲ್ಲಿ ಎಳೆ ಕೂಸು. ನೃತ್ಯ, ಹೊಡೆದಾಟದಲ್ಲಿ ಪ್ರಬುದ್ಧ. ರಾಧಿಕಾ ಪಂಡಿತ್ ಎದುರಿರುವ ಕಾರಣಕ್ಕೆ ಅವರ ನಟನೆ ಮಂಕಾಗಿ ಕಂಡಿರಲೂ ಸಾಕು. ಈ ಎರಡು ಪಾತ್ರದ ಹೊರತಾಗಿ ನೆನಪಿನಲ್ಲಿ ಉಳಿಯುವುದು ತರುಣ್‌ಚಂದ್ರ ಮಾತ್ರ.

ಹರಿಕೃಷ್ಣ ಸಂಗೀತದಲ್ಲಿ ಎರಡು ಹಾಡುಗಳಲ್ಲಿ `ಜಾಕಿ~ಯ ಛಾಯೆಯಿದೆ. `ಅಮ್ಮಾಟೆ...~ ಹಾಡು ಪಡ್ಡೆ ಹುಡುಗರ ಪಾಲಿನ ಸದ್ಯದ ಪ್ರೇಮಗೀತೆ. ಮೆಲುಕು ಹಾಕುವ ಸಾಹಿತ್ಯವಿರುವ ಹಾಡುಗಳಿಗೆ ಜಾಗ ಸಿಕ್ಕಿಲ್ಲ. ಸೂರ್ಯ ಎಸ್. ಕಿರಣ್ ಛಾಯಾಗ್ರಹಣಕ್ಕೆ ಹೆಚ್ಚಿನ ಅಂಕ.
ಪ್ರೀತಿ ಪ್ರೇಮದ ಸುತ್ತ ಗಿರಕಿ ಹೊಡೆಯುವ ಮನಸುಗಳಿಗೆ ಅರ್ಜುನ್ ನಿರಾಸೆ ಮಾಡಿಲ್ಲ. ಆದರೆ ಪೇಲವ ಕಥೆಯನ್ನಿಟ್ಟುಕೊಂಡು ಹೆಣೆದ ಚಿತ್ರಕಥೆ ಕಾಡುವ ಗುಣವನ್ನೂ ತಾಳದೆ ಹತ್ತರೊಳಗೆ ಒಂದಾಗಿ ಸೇರಿಕೊಳ್ಳುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.