ADVERTISEMENT

ಬೆಟ್ಟಿಂಗ್‌ ವಿಷವರ್ತುಲದ 'ದುನಿಯಾ'

ನವೀನ ಕುಮಾರ್ ಜಿ.
Published 23 ಮಾರ್ಚ್ 2018, 16:52 IST
Last Updated 23 ಮಾರ್ಚ್ 2018, 16:52 IST
‘ಯೋಗಿ ದುನಿಯಾ’ ಚಿತ್ರದ ದೃಶ್ಯ
‘ಯೋಗಿ ದುನಿಯಾ’ ಚಿತ್ರದ ದೃಶ್ಯ   

ಚಿತ್ರ: ಯೋಗಿ ದುನಿಯಾ
ನಿರ್ಮಾಪಕರು: ಮಹೇಶ್‌ ಸಿದ್ಧರಾಜು, ಎನ್. ವೆಂಕಟೇಶ್‌ ಬಾಬು
ನಿರ್ದೇಶನ: ಹರಿ
ತಾರಾಗಣ: ಯೋಗೇಶ್, ಹಿತಾ ಚಂದ್ರಶೇಖರ್, ವಸಿಷ್ಠ ಸಿಂಹ, ನೀನಾಸಂ ಅಶ್ವತ್ಥ್

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ಹೊರಬರುವುದು ಸುಲಭವಲ್ಲ ಎಂಬ ಸಂದೇಶ ಸಾರುವ 'ಯೋಗಿ ದುನಿಯಾ' ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳಮುಖವನ್ನು ಅನಾವರಣಗೊಳಿಸುತ್ತದೆ.

ಈ ಸಿನಿಮಾದ ಪ್ರಥಮಾರ್ಧದಲ್ಲಿ ಬರೀ ಕುಡಿತ, ನಶೆ, ಅಕ್ರಮ ದಂಧೆಗಳ ಚಿತ್ರಣವೇ ವೈಭವೀಕರಿಸಲ್ಪಟ್ಟಿದೆ. ಮದ್ಯದ ಅಮಲಿನಲ್ಲೇ ಮುಳುಗೇಳುವ ನಾಯಕನ ಪಾತ್ರದಲ್ಲಿ ಯೋಗಿ ಕಾಣಿಸಿಕೊಂಡಿದ್ದಾರೆ. ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಕೆಲಸಕ್ಕೆ ಸೇರುವ ನಾಯಕ ಒಮ್ಮೆ ಅನಿರೀಕ್ಷಿತವಾಗಿ ಬಸ್ಸಿನಲ್ಲಿ ನಾಯಕಿಯನ್ನು ನೋಡುತ್ತಾನೆ. ಅಲ್ಲಿಂದಲೇ ಅವನಿಗೆ ಆಕೆಯ ಮೇಲೆ ಪ್ರೀತಿ ಹುಟ್ಟುತ್ತದೆ. ಆಕೆ ವೇಶ್ಯೆ ಎಂಬ ಸತ್ಯ ಗೊತ್ತಾದ ಬಳಿಕವೂ ಆತನ ಪ್ರೀತಿ ಕೊನೆಗೊಳ್ಳುವುದಿಲ್ಲ.

ADVERTISEMENT

ವೇಶ್ಯಾವಾಟಿಕೆಯ ಕೂಪದಿಂದ ಆಕೆಯನ್ನು ಮುಕ್ತಗೊಳಿಸಲು ಆತ ಪ್ರಯತ್ನಿಸುತ್ತಾನೆ. ಆದರೆ, ಅದಕ್ಕೆ ಹಣ ಬೇಕಾಗುತ್ತದೆ. ಹಣ ಮಾಡುವ ಸಲುವಾಗಿ ನಾಯಕ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಮುಂದೆ ಆ ದಂಧೆಯಲ್ಲಿ ಸಿಲುಕಿ ಹಾಕಿಕೊಳ್ಳುವುದು ಮತ್ತು ತನ್ನ ಪ್ರೇಯಸಿಯನ್ನು ಪಾರು ಮಾಡಲು ಹಂಬಲಿಸುವುದೇ ಈ ಚಿತ್ರದ ಕಥಾಹಂದರ.

ಆರಂಭದಲ್ಲಿ ಯಾವುದೇ ಜವಾಬ್ದಾರಿಯಿಲ್ಲದೆ ಮಾದಕ ವ್ಯಸನಗಳಿಗೆ ದಾಸನಾಗಿರುವ ನಾಯಕ, ಮುಂದೆ ತ್ಯಾಗಮಯಿ ಪ್ರೇಮಿಯಾಗಿ ಮನ ಗೆಲ್ಲುತ್ತಾನೆ.
ವೇಶ್ಯೆಯಾಗಿ ಯಾತನಾಮಯ ಜೀವನ ನಡೆಸುತ್ತಿದ್ದರೂ ಅದರಿಂದ ಮುಕ್ತಳಾಗಿ ಹೊಸ ಬದುಕು ಕಟ್ಟಿಕೊಳ್ಳಲು ಕಾತರಿಸುವ ಹೆಣ್ಣುಮಗಳ ಪಾತ್ರದಲ್ಲಿ ನಟಿಸಿರುವ ಹಿತಾ ಚಂದ್ರಶೇಖರ್ ಅವರ ನಟನೆ ಮನೋಜ್ಞವಾಗಿದೆ. ಸಾಮಾಜಿಕ ಸಮಸ್ಯೆಯನ್ನು ಇಟ್ಟುಕೊಂಡು ಸಿನಿಮಾದ ಕಥೆ ಹೆಣೆದಿದ್ದರೂ ಅದನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವಂತೆ ನಿರೂಪಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ ಎನ್ನಬಹುದು.

ಆ್ಯಕ್ಷನ್ ಅಗತ್ಯವಿಲ್ಲದಿದ್ದರೂ ಕೆಲವೆಡೆ ಹೊಡೆದಾಟದ ದೃಶ್ಯವನ್ನು ಬಳಸಿಕೊಳ್ಳಲಾಗಿದೆ. ಖಳನಟನ ಪಾತ್ರದಲ್ಲಿ ಅಭಿನಯಿಸಿರುವ ವಸಿಷ್ಠ ಸಿಂಹ ಅವರದ್ದು ಕ್ರೌರ್ಯ ತುಂಬಿದ ಪಾತ್ರ. ಅದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಬೆಟ್ಟಿಂಗ್ ಏಜೆಂಟ್ ಪಾತ್ರದಲ್ಲಿ ನಟಿಸಿರುವ ನೀನಾಸಂ ಅಶ್ವತ್ಥ್ ಅವರ ಅಭಿನಯವೂ ಚಿತ್ರಕ್ಕೆ ತೂಕ ತಂದುಕೊಟ್ಟಿದೆ.

ಬೆಂಗಳೂರಿನ ಮೆಜೆಸ್ಟಿಕ್ ರಾತ್ರಿ ಹೊತ್ತು ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಸುಂದರವಾಗಿ ಚಿತ್ರೀಕರಿಸಲಾಗಿದೆ. ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಕ್ರೌರ್ಯದ ಜೊತೆ ನವಿರಾದ ಪ್ರೇಮ ಕಥೆಯನ್ನು ಕಟ್ಟಿಕೊಡಲು  ಯತ್ನಿಸಿದ್ದಾರೆ. ಆದರೆ, ನಾಯಕ– ನಾಯಕಿ ಬದುಕು ಕಟ್ಟಿಕೊಳ್ಳಲು ಹೆಣಗಾಡುವುದರ ಮಧ್ಯೆ ಅವರ ನಡುವಿನ ಪ್ರೇಮಕಥೆ ಪೇಲವವಾಗಿ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.