ADVERTISEMENT

ವರ್ತಮಾನದ ಬಿಕ್ಕಟ್ಟಿಗೆ ಹಿಡಿದ ಕನ್ನಡಿ

ಕೆ.ಎಚ್.ಓಬಳೇಶ್
Published 27 ಏಪ್ರಿಲ್ 2018, 9:51 IST
Last Updated 27 ಏಪ್ರಿಲ್ 2018, 9:51 IST
ವರ್ತಮಾನದ ಬಿಕ್ಕಟ್ಟಿಗೆ ಹಿಡಿದ ಕನ್ನಡಿ
ವರ್ತಮಾನದ ಬಿಕ್ಕಟ್ಟಿಗೆ ಹಿಡಿದ ಕನ್ನಡಿ   

ಚಿತ್ರ: ಹೆಬ್ಬೆಟ್‌ ರಾಮಕ್ಕ

ನಿರ್ಮಾಣ: ಎಸ್‌.ಎ. ಪುಟ್ಟರಾಜು, ಕವಿತಾರಾಜ್‌

ನಿರ್ದೇಶನ: ಎನ್‌.ಆರ್‌. ನಂಜುಂಡೇಗೌಡ

ADVERTISEMENT

ತಾರಾಬಳಗ: ತಾರಾ, ದೇವರಾಜ್‌, ಹನುಮಂತೇಗೌಡ್ರು, ನಾಗರಾಜಮೂರ್ತಿ, ಜಗದೀಶ್‌ ಜಾಲ, ಮೈಮ್‌ ನಂಜುಂಡ, ಸಿಂಧು ಕಾನೇನಹಳ್ಳಿ

**

ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಮಹಿಳೆಯರಿಗೂ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿದೆ. ಆದರೆ, ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಅನಕ್ಷರಸ್ಥ ಮಹಿಳಾ ಜನಪ್ರತಿನಿಧಿಗಳ ಅಧಿಕಾರ ಅವರ ಗಂಡ, ಕುಟುಂಬದ ಸದಸ್ಯರ ಹಿಡಿತಕ್ಕೆ ಸಿಲುಕಿದೆ. ಅಂತಹ ಮಹಿಳೆಯರ ಮೂಕವೇದನೆ, ಅವರ ಒಡಲಾಳದ ಬೇಗೆ ಅವ್ಯಕ್ತ ಚರಿತ್ರೆಯಾಗಿಯೇ ಉಳಿದುಬಿಟ್ಟಿದೆ. ಅಧಿಕಾರದಲ್ಲಿ ಮಹಿಳಾ ಮೀಸಲಾತಿಯ ದುರುಪಯೋಗವನ್ನು ‘ಹೆಬ್ಬೆಟ್‌ ರಾಮಕ್ಕ’ ಚಿತ್ರದ ಮೂಲಕ ವಿಡಂಬನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಎನ್.ಆರ್‌. ನಂಜುಂಡೇಗೌಡ.

ಪುರುಷರ ಅಧಿಕಾರಲಾಲಸೆಯಿಂದ ಮಹಿಳೆಯರು ಅನುಭವಿಸಬೇಕಾದ ಎಣೆಯಿಲ್ಲದ ಸಂಕಟಗಳ ಕಥೆಯನ್ನು ರಾಮಕ್ಕ ಕಟ್ಟಿಕೊಡುತ್ತಾಳೆ. ಅಧಿಕಾರದಲ್ಲಿದ್ದೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವ ಹಲವು ಅಸಹಾಯಕ ಮಹಿಳೆಯರ ಪ್ರತಿನಿಧಿಯಾಗಿಯೂ ಅವಳು ಕಾಡುತ್ತಾಳೆ.

ಈ ಚಿತ್ರದಲ್ಲೊಂದು ದೃಶ್ಯವಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಆಯ್ಕೆಗೆ ಆಡಳಿತಾರೂಢ ಪಕ್ಷದ ಮುಖಂಡರ ಸಮಾಲೋಚನಾ ಸಭೆ ನಡೆಯುತ್ತಿರುತ್ತದೆ. ಅಧ್ಯಕ್ಷ ಗಾದಿ ಮಹಿಳೆಗೆ ಮೀಸಲು. ಪಕ್ಷದಿಂದ ಮೂವರು ಸ್ತ್ರೀಯರು ಜಯ ಗಳಿಸಿರುತ್ತಾರೆ. ರಾಮಕ್ಕನನ್ನು ಹೊರತುಪಡಿಸಿದರೆ ಉಳಿದಿಬ್ಬರು ಅಕ್ಷರಸ್ಥೆಯರು. ಆದರೆ, ತನ್ನ ರಾಜಕೀಯ ಲಾಭಕ್ಕಾಗಿ ಪಕ್ಷದ ಶಾಸಕನೇ ರಾಮಕ್ಕಳನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುತ್ತಾನೆ. ಆ ಮೂಲಕ ಅಧಿಕಾರ ವಿಕೇಂದ್ರೀಕರಣದ ಬೇರುಗಳು ಸಡಿಲಗೊಳ್ಳಲು ಕಾರಣವಾಗುತ್ತಿರುವ ಬಗೆಯನ್ನು ನಿರ್ದೇಶಕರು ಸೂಚ್ಯವಾಗಿ ಹೇಳಿದ್ದಾರೆ.

ಕೃಷಿಕ ಮಹಿಳೆಯೊಬ್ಬಳು ಪುರುಷರ ಆಸೆಬುರುಕತನದ ಚಕ್ರವ್ಯೂಹದೊಳಗೆ ಮಿಕವಾಗುವ ಕಥೆ ‘ಹೆಬ್ಬೆಟ್‌ ರಾಮಕ್ಕ’ ಚಿತ್ರದಲ್ಲಿದೆ. ತಾನು ನಂಬಿದ ಪತಿಯ ಪಿತೂರಿಗೆ ಸಿಲುಕಿ ಬಂಧಿಯಾದ ಅಮಾಯಕ ಗೃಹಿಣಿ ಇಲ್ಲಿದ್ದಾಳೆ. ಹಗಲಿನಲ್ಲಿಯೇ ಭ್ರಷ್ಟ ರಾಜಕಾರಣಿಗಳ ಮುಖಗಳನ್ನು ಬಣ್ಣ, ರೇಖೆಗಳಲ್ಲಿ ಬಿಡಿಸುವ ಪ್ರಯತ್ನವೂ ಇಲ್ಲಿದೆ.

ಅಧಿಕಾರ ದುರುಪಯೋಗದ ಕೆಡುಕನ್ನು ನಿರ್ದೇಶಕರು ‘ಅನಕ್ಷರತೆ’ಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಸಾಕ್ಷರತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ರಾಮಕ್ಕ ಮದ್ಯವ್ಯಸನಿಯೊಬ್ಬನಿಂದ ಅವಮಾನಕ್ಕೀಡಾಗುತ್ತಾಳೆ. ‘ನೀನು ಮೊದಲು ಅಕ್ಷರ ಕಲಿತುಕೋ’ ಎನ್ನುವುದು ಅವನ ಮೂದಲಿಕೆಯ ಮಾತು. ವಿಚಲಿತಳಾಗುವ ಆಕೆಗೆ ಅಕ್ಷರ ಕಲಿಯಬೇಕೆಂಬ ಛಲ ಮೂಡುತ್ತದೆ. ಅದಕ್ಕೆ ಆಕೆಯ ಆಪ್ತ ಸಹಾಯಕ ಊರುಗೋಲಾಗುತ್ತಾನೆ. ಕೊನೆಗೆ ಅಕ್ಷರ ಕಲಿತು ಸಮರ್ಥವಾಗಿ ಜಿಲ್ಲಾ ಪಂಚಾಯಿತಿಯ ಆಡಳಿತ ನಿಭಾಯಿಸುತ್ತಾಳೆ. ಗಂಡ ಕಲ್ಲೇಶಿಯ ಹೆಸರು ಶಾಸಕನ ಕುತಂತ್ರದಿಂದ ಭೂ ಹಗರಣದಲ್ಲಿ ಸಿಲುಕಿದಾಗ ತನಿಖೆಗೂ ಆದೇಶಿಸಿ ದಿಟ್ಟತನ ಮೆರೆಯುತ್ತಾಳೆ.

ರಾಮಕ್ಕ ಅನಾವರಣಗೊಳಿಸುವ ಭ್ರಷ್ಟರ ಲೋಕ ಸಹೃದಯರನ್ನು ತಲ್ಲಣಗೊಳಿಸುವಂತಿದೆ. ಪಂಚಾಯತ್‌ರಾಜ್‌ ವ್ಯವಸ್ಥೆಯ ಮೂಲಬೇರುಗಳನ್ನು ಕಿತ್ತು ತಿನ್ನುತ್ತಿರುವ ಕ್ರಿಮಿಗಳ ಕುರಿತು ಈ ಸಿನಿಮಾ ಮಾತನಾಡುತ್ತದೆ. ಹಳ್ಳಿ ಸೊಗಡು ಮತ್ತು ಪಂಚಾಯಿತಿಯಲ್ಲಿ ನಡೆಯುವ ಅವಾಂತರಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೇಳುವ ಅವಕಾಶವಿದ್ದರೂ ನಿರ್ದೇಶಕರು ಈ ಬಗ್ಗೆ ಗಮನಹರಿಸಿಲ್ಲ!

ತಾರಾ ಮತ್ತು ದೇವರಾಜ್‌ ಅವರದ್ದು ಮನೋಜ್ಞ ಅಭಿನಯ. ಹನುಮಂತೇಗೌಡ್ರು, ನಾಗರಾಜಮೂರ್ತಿ ಅವರ ನಟನೆ ಪ್ರಖರವಾಗಿದೆ.‌ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯ ಹಾಡುಗಳು ಸಿನಿಮಾದ ಚೆಲುವನ್ನು ಹೆಚ್ಚಿಸಿವೆ. ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಅವರ ಸಂಭಾಷಣೆ ಚಿತ್ರಕ್ಕೆ ಗಟ್ಟಿತನ ಒದಗಿಸಿದೆ. ಸಾಕಷ್ಟು ಗಾದೆಮಾತುಗಳನ್ನು ಬಳಸಿಕೊಳ್ಳಲಾಗಿದೆ. ಹಾಗಾಗಿ, ಸಿನಿಮಾಕ್ಕೊಂದು ಕನ್ನಡತನವೂ ಒದಗಿದೆ.

‘ಹೆಬ್ಬೆಟ್‌ ರಾಮಕ್ಕ’ ಒಂದು ಕಥೆಯಾಗಿ ಉಳಿಯದೆ ವರ್ತಮಾನದ ವಿದ್ಯಮಾನಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ ನಡೆಸುತ್ತದೆ. ಮಹಿಳಾ ಮೀಸಲಾತಿಯ ದುರ್ಬಳಕೆ ಬಗ್ಗೆ ಹೇಳುವ ನಿರ್ದೇಶಕರ ಹಂಬಲಕ್ಕೆ ಬಿ. ಸತೀಶ್‌ ಅವರ ಛಾಯಾಗ್ರಹಣ ಸಮರ್ಥವಾಗಿ ಸ್ಪಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.