ADVERTISEMENT

ಸದಭಿರುಚಿಗೆ ಬಂಧದ ಕೊರತೆ (ಚಿತ್ರ: ಮನಸಾಲಜಿ)

ವಿಶಾಖ ಎನ್.
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಹೊಸತನ್ನು ಹೇಳಹೊರಡುವವರು ಒಂದೋ ತಮ್ಮದೇ ದಾರಿಯಲ್ಲಿ ಸಾಗಬೇಕು. ಇಲ್ಲವೇ ಮಾದರಿಗಳನ್ನು ಒಪ್ಪಿಕೊಂಡು ಅದರಲ್ಲೇ ನಿರೂಪಣಾ ವೈವಿಧ್ಯ ತರಬೇಕು. ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ಎರಡನೇ ಹಾದಿಯಲ್ಲಿ ನಡೆಯುತ್ತಾ ಅನೇಕ ಕಡೆ ಎಡವಿದ್ದಾರೆ.

ಅಪ್ಪ-ಮಗಳ ಕಕ್ಕುಲತೆಯ ಕುರಿತು ಕೆಲವು ಯಶಸ್ವಿ ಸಿನಿಮಾ ಮಾದರಿಗಳು ನಮ್ಮ ಮುಂದಿವೆ. `ಲಾಲಿ~ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಮೋಹಿನಿ ನಡುವಿನ ಭಾವುಕ ದೃಶ್ಯಗಳನ್ನು ಕಾಡುವಂತೆ ಮಾಡಿದ್ದು ದಿನೇಶ್‌ಬಾಬು ಕಸುಬುದಾರಿಕೆ.
 
ಪ್ರಕಾಶ್ ರೈ ಜೊತೆ ಇದೇ ಅಮೂಲ್ಯ `ನಾನು ನನ್ನ ಕನಸು~ ಚಿತ್ರದಲ್ಲಿ ನಟಿಸಿದ ತಾಜಾ ಉದಾಹರಣೆ ಕಂಡಿದ್ದೇವೆ. ಅವುಗಳಿಂದ ಪ್ರೇರಿತವಾಗಿರಬಹುದಾದ `ಮನಸಾಲಜಿ~ಯಲ್ಲಿ  ಅವುಗಳಷ್ಟು ಗಟ್ಟಿಗುಣಗಳು ಇಲ್ಲ. ಫೋನಿನಲ್ಲಿ ಧ್ವನಿ ಕೇಳಿಸುವ ಮೂಲಕವೇ ಇಡೀ ಚಿತ್ರದಲ್ಲಿ ಕಾಡುವ ನಾಯಕಿಯ ಪರಿಕಲ್ಪನೆಯನ್ನು `ಬೆಳದಿಂಗಳ ಬಾಲೆ~ಯಲ್ಲಿ ಕಂಡಿದ್ದೆವು.

`ಮನಸಾಲಜಿ~ಯಲ್ಲೂ ಅಪ್ಪ-ಮಗಳ ಕಕ್ಕುಲತೆ ಇದೆ. ಮೊಬೈಲ್ ಸಂದೇಶದ ಮೂಲಕವೇ ಪ್ರೀತಿ ಹಂಚಿಕೊಳ್ಳುವ ನಾಯಕನಿದ್ದಾನೆ. ನಿರ್ದೇಶಕರು ಚಿತ್ರದಲ್ಲಿ ತಿರುವು ತರುವ ಹಟದಿಂದ ಆ ನಾಯಕನನ್ನು ಸಾಯಿಸಿದ್ದಾರೆ.

ಸಂಗತಿಗಳ ಪರಿಕಲ್ಪನೆಯಲ್ಲಿ ಹಾಗೂ ಅಭಿರುಚಿಯಲ್ಲಿ ನಿರ್ದೇಶಕರು ಹೊಸತಿಗಾಗಿ ಒದ್ದಾಡಿರುವುದು ನಿಜ. ಆದರೆ, ಅವನ್ನು ಕಥಾನಕಗಳಾಗಿ ರೂಪಿಸಲು ಅವರಿಗೆ ಸಾಧ್ಯವಾಗಿಲ್ಲ. `ಸ್ಕ್ರಿಪ್ಟ್~ ಹಂತದಲ್ಲೇ ನಡೆಯಬೇಕಿದ್ದ ಕೆಲಸ ಅದು.

ನಾಯಕಿ ಹಾಗೂ ಆಕೆಯ ತಂದೆಯ ನಡುವಿನ ಬಾಂಧವ್ಯ, ನಾಯಕಿಯ ಸಂಗೀತ ಕಲಿಕೆ, ಪ್ರೇಮ ನಿವೇದಿಸಿಕೊಳ್ಳುವುದೊಂದೇ ಕಾಯಕ ಎಂಬಂತೆ ಅಲೆದಾಡುವ ಜೋಬದ್ರಮುಖದ ನಾಯಕ, ಆತ ಮಾಮ ಎಂದು ಸಂಬೋಧಿಸುವ- ಸಾಧು ಕೋಕಿಲಾ ನಿರ್ವಹಿಸಿರುವ- ಪಾತ್ರ ಇವೆಲ್ಲವುಗಳ ನಡುವೆ ಭಾವುಕತೆಯ ಬಂಧವನ್ನು ಬಿಗಿಯಾಗಿ ಕಟ್ಟುವಲ್ಲಿ ದೀಪಕ್ ಅರಸ್ ಸೋತಿದ್ದಾರೆ.
 
ಒಂದು ಸಾಲಿನ ಕಥೆ ಹಾಗೂ ತಿರುವನ್ನಷ್ಟೇ ಇಟ್ಟುಕೊಂಡು ಅವರು ದೃಶ್ಯಗಳನ್ನು ಸೃಜಿಸಿದ್ದಾರೆಂಬುದು ಚಿತ್ರದುದ್ದಕ್ಕೂ ವ್ಯಕ್ತವಾಗುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಇರಬೇಕಾದ ಸಂಬಂಧ ಹಾಗೂ ಪರಿಣಾಮ ಮಾಯವಾಗಿದ್ದು, ಚಿತ್ರಕ್ಕೆ ಸಲೀಸಾಗಿ ನೋಡಿಸಿಕೊಳ್ಳುವ ಲಕ್ಷಣವೂ ಇಲ್ಲವಾಗಿದೆ.

ತಾಂತ್ರಿಕ ಅಚ್ಚುಕಟ್ಟುತನದ ವಿಷಯದಲ್ಲಿ ಒಂದಿಷ್ಟು ಅಂಕಗಳು ಚಿತ್ರಕ್ಕೆ ಪ್ರಾಪ್ತಿಯಾಗುತ್ತವೆ. ಅದಕ್ಕೆ  ಮುಖ್ಯ ಕಾರಣ ಸಂಗೀತ ಸಂಯೋಜಕ ಅನೂಪ್ ಸೀಳಿನ್. ಚಿತ್ರವನ್ನು ಸಂಗೀತಮಯವಾಗಿಸುವ ಮಟ್ಟುಗಳನ್ನು ಅವರು ಕೊಟ್ಟಿದ್ದಾರೆ.

`ಓ ಮಂಕುತಿಮ್ಮ~ ಹಾಗೂ `ಅಚ್ಚುಮೆಚ್ಚು~ ಹಾಡುಗಳು ಅದಕ್ಕೆ ಉದಾಹರಣೆ. ಅನೂಪ್ ರಾಗಗಳಿಗೆ ಬರೆದಿರುವ ಸಾಲುಗಳಲ್ಲಿ ತಿಣುಕಾಟವೇ ಹೆಚ್ಚು ಕಾಣುತ್ತದೆಯೇ ವಿನಾ ಸಹಜ ಲಯವಿಲ್ಲ. ಸುಜ್ಞಾನ್ ಕ್ಯಾಮೆರಾ ಕೆಲಸದ ಕಸುಬುದಾರಿಕೆ ಹೆಚ್ಚಾಗಿ ಕಾಣುವುದು ಹಾಡುಗಳಲ್ಲಿ.

ನಟಿಯಾಗಿ ಅಮೂಲ್ಯ ಅವರಿಗೆ ಆತ್ಮವಿಶ್ವಾಸವೇನೋ ಬಂದಿದೆ. ಆದರೆ, ಅವರ ಮುಖದಲ್ಲಿ ಸಂದರ್ಭಕ್ಕೆ ಅಗತ್ಯವಿರುವ ಭಾವವನ್ನು ಹೊಮ್ಮಿಸುವಲ್ಲಿ ನಿರ್ದೇಶಕರೇ ಸೋತಿದ್ದಾರೇನೋ? ಯಾಕೆಂದರೆ, ದೃಶ್ಯಗಳಲ್ಲೇ ಗಮನಾರ್ಹ ಪ್ರತಿಕ್ರಿಯೆ ಕೊಡುವ ಸಾಧ್ಯತೆ ಇಲ್ಲವಾದರೆ, ನಟಿ ತಾನೆ ಏನು ಮಾಡಲಾದೀತು.

ರಾಕೇಶ್ ಅಡಿಗ ಮಾತು ಸ್ಪಷ್ಟವಾಗಿದೆ. ನಟನೆಯಲ್ಲಿ ನಿರಾಸೆ ಮಾಡಿದ್ದಾರೆ. ನಾಯಕಿಯ ತಂದೆಯ ಪಾತ್ರದಲ್ಲಿ ಅಚ್ಯುತ ಕುಮಾರ ಎಂದಿನ `ಫಾರ್ಮ್~ನಲ್ಲಿ ಸೊಗಸಾಗಿ ನಟಿಸಿದ್ದಾರೆ.

ಅಭಿರುಚಿ ಮುಕ್ಕಾಗಬಾರದೆಂಬ ನಿರ್ದೇಶಕರ ಎಚ್ಚರಿಕೆ ಚಿತ್ರದ ಬಂಧ ಕಟ್ಟುವಲ್ಲಿಯೂ ಇದ್ದಿದ್ದರೆ `ಮನಸಾಲಜಿ~ಯನ್ನು ಬೇರೆ ರೀತಿಯಲ್ಲೇ ಅಭಿವ್ಯಕ್ತಗೊಳಿಸಬಹುದಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.