ADVERTISEMENT

ಸಮಸ್ಯೆಯೆಂಬ ಎಡರುಗಳ ಕಣ್ಣೀರ ಕಥನ

ವಿಶಾಖ ಎನ್.
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ರಾಣಿ ಮುಖರ್ಜಿ
ರಾಣಿ ಮುಖರ್ಜಿ   

ಚಿತ್ರ: ಹಿಚ್ಕಿ (ಹಿಂದಿ)
ನಿರ್ಮಾಣ: ಆದಿತ್ಯ ಚೋಪ್ರಾ, ಮನಿಷ್ ಶರ್ಮ
ನಿರ್ದೇಶನ: ಸಿದ್ಧಾರ್ಥ್‌ ಪಿ. ಮಲ್ಹೋತ್ರ
ತಾರಾಗಣ: ರಾಣಿ ಮುಖರ್ಜಿ, ಹರ್ಷ್ ಮಾಯರ್, ನೀರಜ್ ಕಾಬೀ, ಸುಪ್ರಿಯಾ ಪಿಲ್‌ಗಾಂವ್ಕರ್, ಶಿವಕುಮಾರ್ ಸುಬ್ರಮಣಿಯಮ್, ಸಚಿನ್ ಪಿಲ್‌ಗಾಂವ್ಕರ್.

ಕೆಲವು ಜಾಹೀರಾತುಗಳಲ್ಲಿ ದಕ್ಷಿಣ ಭಾರತದವರನ್ನು ದಡ್ಡರೆಂದೋ, ಅನಾಗರಿಕರೆಂದೋ ಬಿಂಬಿಸುವ ತಣ್ಣನೆಯ ಪರಿಪಾಠವಿದೆ ಎಂದು ಹಿಂದೊಮ್ಮೆ ಕನ್ನಡ ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಗುರುತಿಸಿದ್ದರು. ‘ಹಿಚ್ಕಿ’ ಹಿಂದಿ ಸಿನಿಮಾ ಈ ಮಾತನ್ನು ನೆನಪಿಸಿಯೂ ಕೆಲವು ಭಾವುಕ ದೃಶ್ಯಗಳ ಮೂಲಕ ಕಣ್ಣೀರು ತರಿಸುತ್ತದೆ.

‘ಫ್ರಂಟ್ ಆಫ್ ದಿ ಕ್ಲಾಸ್’ ಎಂಬ ಅಮೆರಿಕದ ಡ್ರಾಮಾ ಸಿನಿಮಾದ ರೀಮೇಕ್ ಇದು. ಹತ್ತು ವರ್ಷಗಳ ಹಿಂದೆ ತೆರೆಕಂಡಿದ್ದ ಮೂಲಚಿತ್ರವು ಬ್ರಾಡ್ ಕೊಹೆನ್ ಬರೆದಿದ್ದ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿತ್ತು. ‘ಟೌರೆಟ್ ಸಿಂಡ್ರೋಮ್’ ಎಂಬ ನರದ ಸಮಸ್ಯೆಯಿಂದ ನಿಯಂತ್ರಣಕ್ಕೇ ಸಿಗದೆ ಬಿಕ್ಕಳಿಕೆಯ ರೂಪದಲ್ಲಿ ಮಾತೊಂದು ಪದೇ ಪದೇ ಮೂಡುವ ಜನ್ಮಜಾತ ಸಮಸ್ಯೆ ಇರುವ ಕಥಾನಾಯಕ ಅದರಲ್ಲಿ ಇದ್ದ. ಅವನು ಪ್ರಶಸ್ತಿ ಪಡೆಯುವ ಶಿಕ್ಷಕನಾಗುವುದು, ಹೋರಾಡಿ ಪ್ರೇಮಿಯನ್ನೂ ಒಲಿಸಿಕೊಳ್ಳುವುದು ಮೂಲ ಸಿನಿಮಾದ ವಸ್ತು.

ADVERTISEMENT

ಅದನ್ನು ಕಡತಂದಿರುವ ನಿರ್ದೇಶಕ ಸಿದ್ಧಾರ್ಥ್ ಪಿ. ಮಲ್ಹೋತ್ರ, ಇಲ್ಲಿ ನಾಯಕನ ಸ್ಥಾನವನ್ನು ರಾಣಿ ಮುಖರ್ಜಿ ಅವರಿಗೆ ಕೊಟ್ಟಿದ್ದಾರೆ. ಬಿಡದ ಬಿಕ್ಕಳಿಕೆಯ ಸಮಸ್ಯೆ ಒಂದು ಕಡೆ. ಕೊಳೆಗೇರಿ ಮಕ್ಕಳಿಂದಲೇ ತುಂಬಿದ ತರಗತಿಯ ಭಂಡ ಮಕ್ಕಳನ್ನು ಉದ್ಧರಿಸಬೇಕಾದ ಸಮಸ್ಯೆ ಇನ್ನೊಂದು ಕಡೆ. ಇವೆರಡನ್ನೂ ಬೆರೆಸಲು ಹೋಗಿ ನಿರ್ದೇಶಕರು ಆಗೀಗ ದಿಕ್ಕುತಪ್ಪಿದಂತಾಗಿದ್ದಾರೆ. ಇವೆರಡರಲ್ಲಿ ಒಂದು ಸಮಸ್ಯೆಯನ್ನೇ ಮುಖ್ಯವಾಗಿ ಇಟ್ಟುಕೊಂಡಿದ್ದರೆ ಚಿತ್ರ ಇನ್ನಷ್ಟು ಬಿಗಿಯಾಗುತ್ತಿತ್ತು.

ಚಿತ್ರಕಥೆ ಕಟ್ಟುವಿಕೆಯಲ್ಲಿ ಸಾವಧಾನವಿದೆ. ಭಾವುಕ ದೃಶ್ಯಗಳ ನೇಯ್ಗೆಯನ್ನೂ ಮೆಚ್ಚಬಹುದು. ರಾಣಿ ಮುಖರ್ಜಿ ಹಾಗೂ ಮಕ್ಕಳ (ವಿಶೇಷವಾಗಿ ಹರ್ಷ್ ಮಾಯರ್–ಅವರಿಗೆ ಈಗಾಗಲೇ ‘ಐ ಆ್ಯಮ್ ಕಲಾಂ’ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ಬಾಲನಟ ರಾಷ್ಟ್ರ ಪ್ರಶಸ್ತಿ ಸಂದಿದೆ) ಅಭಿನಯವೂ ಸಹಜವಾಗಿದೆ. ಅವಿನಾಶ್ ಅರುಣ್ ಸಿನಿಮಾಟೊಗ್ರಫಿ ಹಾಗೂ ಹಿತೇಶ್ ಸೋನಿಕ್ ಹಿನ್ನೆಲೆ ಸಂಗೀತದ ಜುಗಲ್‌ಬಂದಿಯನ್ನು ಮೆಚ್ಚಿಕೊಳ್ಳಲೂ ಕಾರಣಗಳು ಸಿಗುತ್ತವೆ. ಇವೆಲ್ಲ ಇದ್ದೂ ಎದ್ದುಕಾಣುವಂಥ ಕೊರತೆಗಳಿಗೆ ಚಿತ್ರಕಥೆಯನ್ನೇ ದೂರಬೇಕು.

ಸರ್ಕಾರದ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯನ್ನು ಚಿತ್ರದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಇದರನ್ವಯ ಪ್ರತಿಷ್ಠಿತ ಶಾಲೆಗೆ ಸೇರುವ ಮಕ್ಕಳೆಲ್ಲ ಕೊಳೆಗೇರಿಯವರೇ ಎನ್ನುವ ಸಂದೇಶ ರವಾನೆಯಾಗುವ ಅಪಾಯವಿದೆ. ಅವರೆಲ್ಲ ದಕ್ಷಿಣ ಭಾರತದ ಮಕ್ಕಳೇ ಎಂದು ಬಿಂಬಿಸುವ ಹಾಡೂ ಇದೆ. ಮೇಲಾಗಿ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮಕ್ಕಳು ಬೆಳ್ಳಗಿರುತ್ತಾರೆ. ಅವರ ಹೆಸರುಗಳೆಲ್ಲ ಮಿಶ್ರ, ಮಲ್ಹೋತ್ರ (ನಿರ್ದೇಶಕರ ಸರ್‌ ನೇಮ್ ಕೂಡ ಇದೇ), ಶರ್ಮ ಎಂದು ಕೊನೆಯಾಗುತ್ತವೆ. ಸಂದೇಶ ಕೊಡುವ, ಭಾಷಣ ಹರಿಬಿಡುವ ಸಿನಿಮಾ ಮಾಡುವಾಗ ನಿರ್ದೇಶಕರಿಗೆ ಇಂಥ ಸೂಕ್ಷ್ಮಗಳು ಇರಬೇಕಿತ್ತು.

ಇಂಥ ತಪ್ಪುಗಳನ್ನು ಸಹಿಸಿಕೊಂಡ ಮೇಲೂ ಕಣ್ಣಂಚಿನಲ್ಲಿ ನೀರಹನಿಗಳನ್ನು ಮೂಡಿಸುವ ಸಿನಿಮಾದಲ್ಲಿ ಅದಕ್ಕಿರುವ ಭಾವುಕತೆಯ ಉದ್ದೇಶ ಈಡೇರಿದೆ. ಹಾಗೆಂದು ಅದು ದೀರ್ಘ ಕಾಲ ಕಾಡುವುದಿಲ್ಲ. ಬೆಂಗಳೂರಿನ ಎಂ.ಜಿ. ರಸ್ತೆ ಮೇಲಿನ ವೇಗದ ಪ್ರಯಾಣದ ನಡುವೆ ಸ್ಪೀಡ್‌ಬ್ರೇಕರ್‌ಗಳು ಸಿಕ್ಕರೆ ಹೇಗಾಗುವುದೋ ಈ ಸಿನಿಮಾ ವಿಷಯದಲ್ಲೂ ಅದೇ ಅನುಭವ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.