ADVERTISEMENT

ಹುಡುಗರ ಜಾಲಿತನವೂ ಪೋಲಿತನವೂ...

ಚಿತ್ರ : ಪರಾರಿ

ಸಂದೀಪ ನಾಯಕ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ನಿರ್ಮಾಪಕ: ಸುಮಿತ್ ಕೊಂಬ್ರಾ, ನಿರ್ದೇಶನ: ಕೆ.ಎಂ. ಚೈತನ್ಯ, ತಾರಾಗಣ: ರಂಗಾಯಣ ರಘು, ಶ್ರವಂತ್, ಶೃಂಗ, ಜಾಹ್ನವಿ, ಬುಲೆಟ್ ಪ್ರಕಾಶ್, ಅರುಣ್ ಸಾಗರ್, ಉಮಾಶ್ರೀ, ಶುಭಾ ಪೂಂಜಾ, ಶರತ್‌ಲೋಹಿತಾಶ್ವ, ಸಾಧುಕೋಕಿಲ.

ಬಹುದಿನಗಳ ಬಳಿಕ ಪಕ್ಕಾ ತಮಾಷೆಯ, ಜಾಲಿಯಾದ, ಪೋಲಿಯಾದ ಸಿನಿಮಾ ಒಂದು ಬಂದಿದೆ. ಹದಿಹರೆಯದ ಹುಡುಗರ ಪ್ರೇಮ, ಕಾಮದ ಕುರಿತ ತವಕ ತಲ್ಲಣಗಳನ್ನು ವಸ್ತುವಾಗುಳ್ಳ `ಪರಾರಿ'ಯನ್ನು ಕೆ.ಎಂ. ಚೈತನ್ಯ ಪ್ರೇಕ್ಷಕರ ಮುಖದ ನಗು ಮೊದಲಿಂದ ಕೊನೆಯವರೆಗೂ ಮಾಸದಂತೆ ನಿರ್ದೇಶಿಸಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುವುದು ಅದರ ತಾಜಾ ಆದ ನಿರೂಪಣೆಯಿಂದ, ಕನ್ನಡಕ್ಕೆ ಕೊಂಚ ಹೊಸದಾದ ಅದರ ಕಥೆಯಿಂದಾಗಿ.

ಕಾಮದ `ಮೊದಲ ಅನುಭವ'ವನ್ನು ಪಡೆಯಲು ಮೂವರು ಗೆಳೆಯರು ಆಂಧ್ರಪ್ರದೇಶದಲ್ಲಿರುವ ಸಿಂಗಾರಪೇಟೆ ಎಂಬ ಊರಿಗೆ ಹೋಗಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಇದರ ಕಥೆ. ಅವರಿಗೆ ಆ ಊರಲ್ಲಿ ಮೊದಲ ರಾತ್ರಿಯ ಅನುಭವ ಸಿಗುವುದಿಲ್ಲವಾದರೂ ಸುಂದರಿಯರಾದ ಹುಡುಗಿಯರು ಸಿಕ್ಕುತ್ತಾರೆ. ಜೊತೆಗೆ ತಾವಾಗಿ ಮೈಮೇಲೆ ಎಳೆದುಕೊಂಡ ಸಮಸ್ಯೆಯೊಂದು ಸಿಗುತ್ತದೆ.

ಹಾಗಾಗಿ ಹಾಸ್ಯದೊಂದಿಗೆ ಇದಕ್ಕೆ ಕುತೂಹಲದ ಎಳೆಯೂ ಸೇರಿಕೊಂಡಿದೆ. ಅದರಿಂದ ಹೇಗೆ ಹೊರಬರುತ್ತಾರೆ ಎಂಬುದು ಇದರ ಸ್ಥೂಲ ಹಂದರ. ಕಾಮಿಡಿ ಸಿನಿಮಾ ಒಂದಕ್ಕೆ ಬೇಕಾದ ವಿಶಿಷ್ಟ ಕಥೆಯೇ ಇದರ ಜೀವಾಳ. ಕಥೆಯನ್ನು ಆಯ್ದುಕೊಂಡಿರುವಲ್ಲೇ ಈ ಸಿನಿಮಾದ ಗೆಲುವಿದೆ. ಉಳಿದಂತೆ ಇದರ ಯಶಸ್ಸಿರುವುದು ಅದರ ಬಿಗಿಯಾದ ಹಾಗೂ ಉತ್ತಮವಾದ ಚಿತ್ರಕಥೆಯಲ್ಲಿ. ಮತ್ತು ಅದರ ನವಿರೇಳಿಸುವ, ಕಚಗುಳಿ ಇಡುವ, ಮರ್ಮಕ್ಕೆ ತಾಕುವ ಪೋಲಿಯಾದ ಸಂಭಾಷಣೆಗಳಲ್ಲಿ. ಪೋಲಿತನವೂ ಜೀವನದ ಒಂದು ಭಾಗವೇ ಆದ್ದರಿಂದ, ಒಂದು ಮಿತಿಯಲ್ಲೇ ಇರುವ ಎಸ್. ಮೋಹನ್ ಬರೆದ ಮಾತುಗಳು ನಗೆ ತರಿಸುತ್ತವೆ.

ಇಲ್ಲಿನ ಎಲ್ಲ ಪಾತ್ರಗಳು ವಿಭಿನ್ನ ಮತ್ತು ವಿಶಿಷ್ಟವಾಗಿವೆ. ಪ್ರತಿ ದೃಶ್ಯದಿಂದಲೂ ನಗುವನ್ನು ಹೊರಡಿಸಬೇಕು ಎಂಬ ನಿರ್ದೇಶಕರ ಪ್ರಯತ್ನದಿಂದಾಗಿ ಬಹುತೇಕ ಪಾತ್ರಗಳು ಪ್ಯಾದೆಗಳಂತೆ, ಪೆದ್ದರಂತೆ ವರ್ತಿಸುತ್ತವೆ. ಇಲ್ಲಿನ ಖಳನೂ ತನ್ನ ಖಳತನವನ್ನು ಬದಿಗಿಟ್ಟು ಜೋಕರ್‌ನಂತೆ ವರ್ತಿಸುತ್ತಾನೆ. ಈ ಖಳ ಪಾತ್ರವನ್ನು ಮಾಡಿದ ಅರುಣ್ ಸಾಗರ್ ಅವರ ಅಭಿನಯ ಕೊಂಚ ಅತಿ ಎನ್ನಿಸುವಂತಿದೆ. ತನ್ನ ಆಂಗಿಕ ಅಭಿನಯ, ಹಾವಭಾವಗಳಿಂದಾಗಿ ಕನ್ನಡ ಸಿನಿಮಾಗಳ ಒಂದೇ ಜಾಡಿನ ಖಳ ಪಾತ್ರಗಳಿಗಿಂತ ಈ ಪಾತ್ರ ಭಿನ್ನವಾಗಿದೆ; ಹೊಸದು ಎನ್ನಿಸುವಂತಿದೆ.

ಯಾವುದೇ ಸ್ಟಾರ್‌ಗಳ ಹಂಗಿಲ್ಲದೆ ಕೇವಲ ನಿರೂಪಣೆ, ಕಥೆಯನ್ನೇ ನೆಚ್ಚಿ ಸಿನಿಮಾ ಮಾಡಿದ ನಿರ್ದೇಶಕ ಚೈತನ್ಯ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಬೇಕು. ಖ್ಯಾತನಾಮರಲ್ಲದ ನಟರನ್ನು ಇಟ್ಟುಕೊಂಡು, ಈಗಿನ ಹುಡುಗರ ಕಾಮ, ಪ್ರೇಮದ ಕುರಿತಾದ ಗೊಂದಲ, ಅಜ್ಞಾನ, ಮುಗ್ಧತೆ, ಕುತೂಹಲಗಳನ್ನು ಹುಡುಗರ ಅದೇ ಪೋಲಿ ಭಾಷೆಯನ್ನು ಬಳಸಿ ಸಿನಿಮಾ ಮಾಡುವುದು ಸುಲಭವೇನಲ್ಲ. ಅಲ್ಲಲ್ಲಿ ನಿಧಾನವಾಗುತ್ತದೆ ಎಂಬುದನ್ನು ಹೊರತುಪಡಿಸಿದರೆ ಇದು ನೋಡಬಹುದಾದ ಸಿನಿಮಾ.

ಇದರೊಂದಿಗೆ ಗಂಡುಗಳ ಎದೆಯಲ್ಲಿ ಕಿಚ್ಚುಹಚ್ಚಬಲ್ಲ ಶುಭಾ ಪೂಂಜಾ ಗ್ಲಾಮರ್, ತಮ್ಮ ಅನನ್ಯ ದೃಶ್ಯ ಸಂಯೋಜನೆಗಳಿಂದಲೇ ಸಿನಿಮಾದ ಅಂದವನ್ನು ಹೆಚ್ಚಿಸಿದ ಎಚ್.ಸಿ. ವೇಣು ಅವರ ಛಾಯಾಗ್ರಹಣ ಸಿನಿಮಾದ ಪ್ರಮುಖ ಅಂಶಗಳೆನ್ನಬಹುದು. ವೇಣು ಎಂಥ ಪ್ರತಿಭಾವಂತ ಛಾಯಾಗ್ರಾಹಕ ಎನ್ನುವುದಕ್ಕೆ ಈ ಸಿನಿಮಾ ಒಂದು ಉದಾಹರಣೆ. ಅನೂಪ್ ಸೀಳಿನ್ ಸಂಯೋಜಿಸಿದ ಸಂಗೀತ, ಕವಿರಾಜ್, ನಾಗೇಂದ್ರಪ್ರಸಾದ್ ಗೀತೆಗಳು ಸಿನಿಮಾಕ್ಕೆ ಪೂರಕವಾಗಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT