ADVERTISEMENT

ಹನಿ ಟ್ರ್ಯಾಪ್‌ ಗ್ಯಾಂಗಿನ ‘ಸಂಹಾರ’!

ವಿಜಯ್ ಜೋಷಿ
Published 9 ಫೆಬ್ರುವರಿ 2018, 11:59 IST
Last Updated 9 ಫೆಬ್ರುವರಿ 2018, 11:59 IST
‘ಸಂಹಾರ’ ಚಿತ್ರದಲ್ಲಿ ಹರಿಪ್ರಿಯಾ
‘ಸಂಹಾರ’ ಚಿತ್ರದಲ್ಲಿ ಹರಿಪ್ರಿಯಾ   

ಚಿತ್ರ: ಸಂಹಾರ
ನಿರ್ದೇಶನ: ಗುರು ದೇಶಪಾಂಡೆ
ನಿರ್ಮಾಣ: ಎ. ವೆಂಕಟೇಶ್, ಆರ್. ಸುಂದರ ಕಾಮರಾಜು
ಸಂಗೀತ: ರವಿ ಬಸ್ರೂರು
ತಾರಾಗಣ: ಚಿರಂಜೀವಿ ಸರ್ಜಾ, ಕಾವ್ಯಾ ಶೆಟ್ಟಿ, ಹರಿಪ್ರಿಯಾ, ಚಿಕ್ಕಣ್ಣ

ನಿರ್ದೇಶಕ ಗುರು ದೇಶಪಾಂಡೆ ಅವರು ತಮ್ಮ ಚಿತ್ರಕ್ಕೆ ‘ಸಂಹಾರ’ ಎಂಬ ಹೆಸರಿಟ್ಟರು. ನಾಯಕ ನಟ ಚಿರಂಜೀವಿ ಸರ್ಜಾ ಅವರು ದೊಡ್ಡ ಸುತ್ತಿಗೆಯೊಂದನ್ನು ಹಿಡಿದುಕೊಂಡು, ಯಾರನ್ನೋ ಸದೆಬಡಿಯಲು ಸಿದ್ಧವಾಗಿ ನಿಂತಂತೆ ಕಾಣಿಸುವ ಚಿತ್ರವನ್ನು ಸಿನಿಮಾದ ‍‍ಪೋಸ್ಟರ್‌ಗಳಲ್ಲಿ ಬಳಸಿದರು.

ಪೋಸ್ಟರ್‌ ಗಮನಿಸಿ ಸಿನಿಮಾ ನೋಡುವವರಿಗೆ ಇದೊಂದು ಹೊಡಿಬಡಿ ಸಿನಿಮಾ ಅನಿಸಬಹುದೇನೋ. ಒಂದಿಷ್ಟು ಫೈಟ್‌ ದೃಶ್ಯಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಚಿತ್ರಮಂದಿರಕ್ಕೆ ಹೋಗಿ, ಸಿನಿಮಾ ನೋಡಲು ಕುಳಿತರೆ ತೆರೆಯ ಮೇಲೆ ಬೇರೆಯದೇ ದೃಶ್ಯಗಳು ಕಾಣಿಸಿಕೊಳ್ಳುತ್ತವೆ!

ADVERTISEMENT

ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಶ್ರೀಶೈಲ ಎಂಬ ಅಂಧ ಯುವಕನ ಪಾತ್ರ ನಿಭಾಯಿಸಿದ್ದಾರೆ. ಈತ ಒಂದು ರೆಸ್ಟೊರೆಂಟ್‌ನ ಮಾಲೀಕನೂ ಹೌದು, ಉತ್ತಮ ಸಂಪಾದನೆ ಇರುವ ಸ್ಥಿತಿವಂತ ಕುಟುಂಬದ ಕುಡಿಯೂ ಹೌದು. ಶ್ರೀಶೈಲನ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಆರಂಭದ ಕೆಲವು ದೃಶ್ಯಗಳಲ್ಲೇ ಕಟ್ಟಿಕೊಡುವ ನಿರ್ದೇಶಕರು, ಶ್ರೀಶೈಲನಿಗೆ ನಂದಿನಿ ಎನ್ನುವವಳ (ಹರಿಪ್ರಿಯಾ) ಜೊತೆ ಪ್ರೇಮಾಂಕುರವಾಗುವಂತೆ ಮಾಡುತ್ತಾರೆ.

ಶ್ರೀಶೈಲ ಮತ್ತು ನಂದಿನಿ ಒಟ್ಟಿಗೆ ಖುಷಿಯಿಂದ ಇರುವುದನ್ನು ಕಂಡು ಜಾನಕಿಗೆ (ಕಾವ್ಯಾ ಶೆಟ್ಟಿ) ಕಣ್ಣುರಿ ಬರುವಂತೆ ಮಾಡುವ ನಿರ್ದೇಶಕರು, ಇದೊಂದು ತ್ರಿಕೋನ ಪ್ರೇಮಕಥೆ ಆಗಿರಬಹುದು ಎಂಬ ಭಾವನೆ ಮೂಡಿಸುತ್ತಾರೆ. ಈ ವೇಳೆಗೆ ಕಥೆಗೊಂದು ಟ್ವಿಸ್ಟ್‌ ದೊರೆಯುತ್ತದೆ. ಶ್ರೀಶೈಲ ದೃಷ್ಟಿಯನ್ನು ಪಡೆಯುತ್ತಾನೆ. ಆದರೆ, ಈತ ಪ್ರೀತಿಸಿದ್ದ ನಂದಿನಿ ಕಾಣೆಯಾಗಿರುತ್ತಾಳೆ. ‘ನಾನು ನಂದಿನಿಯ ಅಪ್ಪ. ನಮಗೆ ಸಹಾಯ ಮಾಡಿ’ ಎಂದು ಹೇಳಿಕೊಂಡು ಬಂದ ಆಗಂತುಕನಿಗೆ ನೆರವಾಗಲು ಹೋಗುವ ಶ್ರೀಶೈಲ ವಂಚನೆಗೆ ಗುರಿಯಾಗುತ್ತಾನೆ. ಇಲ್ಲಿಂದ ಮುಂದೆ ಸಿನಿಮಾದ ಹಾದಿಯೇ ಬೇರೆಯಾಗುತ್ತದೆ...

ಅಲ್ಲಿಯವರೆಗೂ ಪ್ರೇಮಕಥೆಯಂತೆ ಕಾಣಿಸುವ ‘ಸಂಹಾರ’, ಅನಂತರ ಪಕ್ಕಾ ಸಸ್ಪೆನ್ಸ್ ಸಿನಿಮಾ ಆಗಿ ರೂಪಾಂತರ ಹೊಂದುತ್ತದೆ. ಬಿಗಿಯಾದ ನಿರೂಪಣೆ ವೀಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸುತ್ತದೆ. ಮೈಸೂರಿನಲ್ಲಿ ಆರಂಭವಾಗುವ ಸಿನಿಮಾದ ಕಥೆ ವೀಕ್ಷಕರನ್ನು ಮಂಗಳೂರು, ಉಡುಪಿ ಮತ್ತು ಕುಂದಾಪುರಕ್ಕೆ ಕರೆದೊಯ್ಯುತ್ತದೆ.

‘ಸಂಹಾರ’ ಹೇಳುವುದು ಹನಿ ಟ್ರ್ಯಾಪ್‌ ಕಥೆಯನ್ನು. ಪ್ರೀತಿಸುವ ನಾಟಕ ಆಡಿ, ಯುವಕರಿಂದ ಹಣ ಕಿತ್ತು, ಅನಂತರ ಅವರ ಕೈಬಿಟ್ಟು ಇನ್ನೊಬ್ಬನ ಕಿಸೆಗೆ ಕೈಹಾಕುವ ಯುವತಿಯ ಕಥೆ ಈ ಸಿನಿಮಾದ ಕೇಂದ್ರಬಿಂದು. ಇದನ್ನು ಒಂದರ್ಥದಲ್ಲಿ ನಾಯಕಿ ಕೇಂದ್ರಿತ ಸಿನಿಮಾ ಅಂತಲೂ ಹೇಳಬಹುದು. ಹರಿಪ್ರಿಯಾ ಅವರ ಅಭಿನಯವನ್ನು ಗಮನಿಸಿದರೆ, ಅವರು ನಾಯಕನಿಗೆ ಎದುರಾಗಿ ನಿಲ್ಲುವ ಬಗೆಯನ್ನು ಕಂಡರೆ ‘ವಾವ್‌’ ಅನ್ನದಿರಲು ಆಗದು! ಹಾಗೆಯೇ, ಕಾವ್ಯಾ ಶೆಟ್ಟಿ ಅವರು ಮನಸ್ಸಿಗೆ ಇಡುವ ಕಚಗುಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ.

ರಾಜಾ ಹುಲಿ ಎನ್ನುವ ಹೆಸರಿನ ಪೊಲೀಸ್ ಕಾನ್‌ಸ್ಟೆಬಲ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಚಿಕ್ಕಣ್ಣ ನೆನಪಿನಲ್ಲಿ ಉಳಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.