ADVERTISEMENT

ಹೃದಯ ಸ್ಪರ್ಶಿಸಿದ ಭೀಷ್ಮಪರ್ವ

​ಪ್ರಜಾವಾಣಿ ವಾರ್ತೆ
Published 29 ಜುಲೈ 2013, 19:59 IST
Last Updated 29 ಜುಲೈ 2013, 19:59 IST
ಹೃದಯ ಸ್ಪರ್ಶಿಸಿದ ಭೀಷ್ಮಪರ್ವ
ಹೃದಯ ಸ್ಪರ್ಶಿಸಿದ ಭೀಷ್ಮಪರ್ವ   

ಕಲಾಕದಂಬ ಸಂಸ್ಥೆ ಪ್ರತಿ ತಿಂಗಳು ನಡೆಸುವ `ಮಾಸದ ಮೆಲುಕು` ಸರಣಿಯ 28ನೇ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಯಕ್ಷಗಾನ ಪ್ರಸಂಗ `ಭೀಷ್ಮ ಪರ್ವ' ಪ್ರೇಕ್ಷಕರ ಮನ ಗೆದ್ದಿತು. 

ಶ್ರೀ ಸಿದ್ಧಿ ಗಣಪತಿ ದೇವಾಲಯದ ಮನೋರಂಜಿನಿ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಮನೋರಂಜಿನಿ ಸಭಾಂಗಣದಲ್ಲಿ (ಜುಲೈ 27) ನಡೆದ ಈ ಕಾರ್ಯಕ್ರಮಕ್ಕೆ ರಾಧಾಕೃಷ್ಣ ಉರಾಳ ಅವರ ಪರಿಕಲ್ಪನೆ ಮತ್ತು ನಿರ್ದೇಶನವಿತ್ತು.

ಪಾಂಡವರ ವಿರುದ್ಧದ ತನ್ನ ಛಲಸಾಧನೆಗಾಗಿ ಯುದ್ಧವನ್ನೇ ನಿರ್ಧರಿಸಿದ ಕೌರವ (ವಿನಯ ಭಟ್) ಭೀಷ್ಮರನ್ನು ಸೇನಾಧಿಪತಿಯಾಗುವುದಕ್ಕೆ ಮನವೊಲಿಸುವ ಸನ್ನಿವೇಶವನ್ನು ಉತ್ತಮವಾಗಿ ನಿರ್ವಹಿಸಿದರು. ಯುದ್ಧದ ನೇತಾರನಾದ ಭೀಷ್ಮನ ಹತಾಶೆಯನ್ನು ತೆರೆದಿಡುವ ಪ್ರಸಂಗದ ಪ್ರಮುಖ ಪಾತ್ರವನ್ನು ಸಾಫ್ಟ್‌ವೇರ್ ಎಂಜಿನಿಯರ್ ಸುಧೀಂದ್ರ ಹೊಳ್ಳ ಪೋಷಿಸಿದ ರೀತಿ ಚೆನ್ನಾಗಿತ್ತು.

`ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ದ್ವಂದ್ವ ನೀತಿ ನಿಮ್ಮದು' ಎಂದು ಜರೆಯುವ ಅರ್ಜುನನಾಗಿ ಸುರೇಶ್ ತಂತ್ರಾಡಿ ಗಮನ ಸೆಳೆದರು. ಹೀಗೆಯೇ ಯುದ್ಧ ಮುಂದುವರಿದರೆ ತಾವು ಗೆಲ್ಲುವ ಬಗೆ ಹೇಗೆ ಎಂಬ ಚಿಂತೆಯಲ್ಲಿರುವ ಪಾಂಡವರು ಕೃಷ್ಣನ ಒಡಗೂಡಿ ಭೀಷ್ಮನ ಶಿಬಿರಕ್ಕೆ ಹೋಗಿ ಮಾತುಕತೆ ನಡೆಸುತ್ತಾರೆ. ಭೀಷ್ಮನ ಯುದ್ಧ ವಿಮುಖತೆಯ ಗುಟ್ಟು ತಿಳಿಯುತ್ತಾರೆ. ಈ ಸಂದರ್ಭದಲ್ಲಿ ಅಂಬರೀಷ್ ಭಟ್ ಕೃಷ್ಣನಾಗಿ ಪ್ರಸಂಗಕ್ಕೆ ಪೂರಕವಾದ ವಿಷಯಗಳನ್ನು ಪ್ರಸ್ತಾಪಿಸಿ ಕಥೆಯನ್ನು ಸಮಾರೋಪಗೊಳಿಸುತ್ತಾರೆ. ಗಾಂಭೀರ್ಯದ ಪ್ರಸಂಗದಲ್ಲೂ ತೂಕಭರಿತ ಮಾತುಗಳೂ ಅಲ್ಲಲ್ಲಿ ಹಾಸ್ಯದ ಹೊನಲು ಹರಿಸುವುದು ವಿಶೇಷ.

ಶಂಕರ ಬಾಳಕುದ್ರು ಹಾಡುಗಾರಿಕೆ, ರಾಜೇಶ್ ಸಾಗರ್ ಮದ್ದಲೆ, ಕಾರ್ತಿಕ್ ಧಾರೇಶ್ವರ ಅವರ ಚೆಂಡೆ ಹಾಗೂ ಯಕ್ಷಗಾನದಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಜಮ್ಮಟಿಕೆ ನಾಗರಾಜ್ ಅವರ ಮೋರ್ಚಿಂಗ್ ಹಿಮ್ಮೇಳದ ವೈಭವ ಮುಮ್ಮೇಳದೊಂದಿಗೆ ಸಮನ್ವಯದಲ್ಲಿ ಮೂಡಿಬಂದ `ಭೀಷ್ಮ ಪರ್ವ' ಯಕ್ಷಮೋಡಿಗೆ ಪ್ರೇಕ್ಷಕರು ಬೆರಗಾದರು.  

ರಂಗ ನಿರ್ವಹಣೆ ಹೊಣೆ ಹೊತ್ತ ಹಾಗೂ ಪ್ರಸಾಧನದ ನೆರವಿತ್ತ ವಿಶ್ವನಾಥ ಉರಾಳ, ಮುರಳೀಧರ ನಾವಡ ಸತ್ಯನಾರಾಯಣ್, ದೇವರಾಜ ಕರಬ, ನಿತ್ಯಾನಂದ ನಾಯಕ್, ಚಿದಾನಂದ ಕುಲಕರ್ಣಿ, ಕೆ.ಎನ್.ಅಡಿಗ, ಮಮತ ಆರ್.ಕೆ. ಅವರ ಸಹಕಾರದೊಂದಿಗೆ ನಡೆದ ಪ್ರದರ್ಶನಕ್ಕೆ ತುಂಬಿದ ಸಭಾಂಗಣ ಸಾಕ್ಷಿಯಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.