ADVERTISEMENT

ರಂಗಭೂಮಿಯ ಅಪರೂಪದ ಸಾಧಕ ಎಚ್‌.ಎಚ್‌.ಲೋಕೇಶ್‌ಬಾಬು

300ಕ್ಕೂ ಹೆಚ್ಚು ನಾಟಕಗಳಲ್ಲಿ ಎಚ್‌.ಎಚ್‌.ಲೋಕೇಶ್‌ಬಾಬು ಅಭಿನಯ

ಎಚ್.ಎಸ್.ಸಚ್ಚಿತ್
Published 4 ಜೂನ್ 2019, 20:05 IST
Last Updated 4 ಜೂನ್ 2019, 20:05 IST
ಲೋಕೇಶ್‌ ಬಾಬು
ಲೋಕೇಶ್‌ ಬಾಬು   

ಹುಣಸೂರು: ತಾಲ್ಲೂಕಿನ ರಂಗಭೂಮಿ ಹಿರಿಯ ಕಲಾವಿದರ ಪೈಕಿ ಎಚ್‌.ಎಚ್‌.ಲೋಕೇಶ್‌ಬಾಬು ಒಬ್ಬರು. ಸುದೀರ್ಘ 48 ವರ್ಷಗಳಿಂದ ರಂಗಭೂಮಿ ನಂಟು ಹೊಂದಿರುವ ಅವರು, 300ಕ್ಕೂ ಹೆಚ್ಚಿನ ನಾಟಕಗಳಲ್ಲಿ ಅಭಿನಯಿಸಿ ಜನಮಾನಸದಲ್ಲಿ ನೆಲೆಸಿದ್ದಾರೆ.

‘ನಗರದ ಸರ್ಕಾರಿ ಶಾಲೆಯಲ್ಲಿ ಪ್ರೌಢಶಾಲೆ ಓದುತ್ತಿದ್ದಾಗ ಸಿಕ್ಕಿದ ಅವಕಾಶ ಬಳಸಿಕೊಂಡು ‘ಧರ್ಮರತ್ನಾಕರ’ ನಾಟಕದ ಮೂಲಕ ರಂಗಭೂಮಿಗೆ ಅಡಿ ಇಟ್ಟೆ. ಹಿರಿಯ ಕಲಾವಿದರಾದ ನಾರಾಯಣ ರೈ, ಕುಮಾರ ಅರಸೇಗೌಡ, ಡಿ.ಟಿ.ಜವರೇಗೌಡ ಅವರ ತಂಡಗಳಲ್ಲಿ ಬಣ್ಣ ಹಚ್ಚಿ ಸಣ್ಣಪುಟ್ಟ ಪಾತ್ರಗಳನ್ನು ಮಾಡ ತೊಡಗಿದೆ. ಬಳಿಕ, ದೊಡ್ಡ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡೆ’ ಎಂದರು.

‘ರಂಗಭೂಮಿಯಿಂದ ಆರ್ಥಿಕವಾಗಿ ಗಳಿಸಿದ್ದಕ್ಕಿಂತಲೂ ಮಾನಸಿಕ ನೆಮ್ಮದಿ ಪಡೆದಿದ್ದೇನೆ. ಜೀವನಾಧಾರಕ್ಕೆ ವಿವಿಧ ವ್ಯವಹಾರಗಳನ್ನು ನಡೆಸುತ್ತಿದ್ದೇನೆ. ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದು, ಇಬ್ಬರು ಗಂಡು ಮಕ್ಕಳೊಂದಿಗೆ ಸುಖ ಜೀವನ ನಡೆಸಿದ್ದೇನೆ’ ಎಂದು ಅವರು ತಿಳಿಸಿದರು.

ADVERTISEMENT

‘ಕುಮಾರ ಅರಸೇಗೌಡ ಮಿತ್ರ ಮಂಡಳಿ ತಂಡದೊಟ್ಟಿಗೆ ಅಭಿನಯಿಸಿದ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿತ್ತು. 2019ರಲ್ಲಿ ಗುಬ್ಬಿವೀರಣ್ಣ ಪ್ರಶಸ್ತಿ, ಸುವರ್ಣಶ್ರೀ ಪ್ರಶಸ್ತಿಗಳು ಸಂದಿದೆ. ಡಾ.ರಾಜಕುಮಾರ್‌ ಅವರ 59ನೇ ಜನ್ಮದಿನದ ಪ್ರಯುಕ್ತ ಮಂಡ್ಯ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ನಾಟಕ ಸ್ಪರ್ಧೆಯಲ್ಲಿ ಅಭಿನಯಿಸಿದ ಕ್ಷಣ ನೆನಪಿನಲ್ಲಿ ಉಳಿದಿದೆ’ ಎಂದು ಸ್ಮರಿಸಿದರು.

ಲೋಕೇಶ್‌ಬಾಬು ಕೇವಲ ರಂಗಭೂಮಿಗೆ ಮಾತ್ರ ಸೀಮಿತಗೊಳ್ಳದೆ ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ನಡೆಸಿದ್ದಾರೆ. ಈವರೆಗೆ 13 ಕೃತಿಗಳನ್ನು ಹೊರ ತಂದಿದ್ದು, 2008ರಲ್ಲಿ ದಸರಾ ಕವಿಗೋಷ್ಠಿಯಲ್ಲಿ ಕವನ ವಾಚಿಸಿ ‘ದಸರಾ ಕವಿ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇವರು ರಂಗಭೂಮಿಯ ನಂಟಿನೊಂದಿಗೆ ಚಲನಚಿತ್ರದ ನಂಟನ್ನು ಹೊಂದಿದ್ದಾರೆ. 12 ಕಿರುಚಿತ್ರಗಳು ಹಾಗೂ 3 ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.

ರಂಗಭೂಮಿಗೆ ಯುವಕರನ್ನು ಕರೆತರುವ ತವಕದಲ್ಲಿರುವ 60 ಹರೆಯದ ಲೋಕೇಶ್‌ಬಾಬು ಸ್ಥಳೀಯ ಮಕ್ಕಳಿಗೆ ನಾಟಕ ತರಬೇತಿ ಶಿಬಿರ ನಡೆಸುವ ಆಲೋಚನೆ ಹೊಂದಿದ್ದಾರೆ. ಗ್ರಾಮೀಣ ಪ್ರತಿಭೆಯನ್ನು ಗುರುತಿಸುವ ಹಂಬಲ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.