ADVERTISEMENT

ಪುರಾಣ, ವಾಸ್ತವದ ಮುಖಾಮುಖಿ

ಮಂಜುಶ್ರೀ ಎಂ.ಕಡಕೋಳ
Published 29 ಡಿಸೆಂಬರ್ 2018, 19:30 IST
Last Updated 29 ಡಿಸೆಂಬರ್ 2018, 19:30 IST
‘ಪತಂಗ ಪ್ರಭಾವ’ ನಾಟಕದ ದೃಶ್ಯ
‘ಪತಂಗ ಪ್ರಭಾವ’ ನಾಟಕದ ದೃಶ್ಯ   

‘ಋತುಮತಿಯಾಗಿದ್ದ ನನ್ನನ್ನು ತುಂಬಿದ ಸಭೆಗೆ ಕರೆದು ಎಲ್ಲರೆದುರು ಸೀರೆ ಸೆಳೆದಾಗ ಕೃಷ್ಣ ನನಗೆ ಅಕ್ಷಯ ವಸ್ತ್ರ ನೀಡಿದ್ದೇನೋ ಸರಿ. ಆದರೆ, ನನಗೆ ವಸ್ತ್ರ ನೀಡುವ ಬದಲು ಕೃಷ್ಣ ದುರ್ಯೋಧನನ ಕೈ ಕತ್ತರಿಸಲಿಲ್ಲವೇಕೆ?...’

ಹಾಗೆಂದು ದ್ರೌಪದಿ ತನ್ನಣ್ಣ ಶಿಖಂಡಿ ಎದುರು ಕೃಷ್ಣನ ಪುರುಷ ರಾಜಕಾರಣವನ್ನು ಪ್ರಶ್ನಿಸುತ್ತಾಳೆ. ಅವಳಷ್ಟೇ ನೋವಿನಲ್ಲಿರುವ ಶಿಖಂಡಿಯದ್ದೂ ಒಂದೇ ಪ್ರಶ್ನೆ ‘ಗಂಡಸ್ತನ ಅನ್ನೋದು ಇವರ ಮನೆ ಆಸ್ತಿಯೇನು?’ ಹೀಗೆ ಪುರಾಣದ ಪಾತ್ರಗಳನ್ನು ವಾಸ್ತವಕ್ಕೆ ಮುಖಾಮುಖಿಯಾಗಿಸುತ್ತದೆ ‘ಪತಂಗ ಪ್ರಭಾವ’ ನಾಟಕ.

ಒಂದಿಷ್ಟು ಪ್ರೀತಿ, ಘನತೆಯ ಬದುಕು... ಇಂದಿಗೂ ಈ ಅಸ್ಮಿತೆಗಾಗಿ ಹೋರಾಡುತ್ತಿರುವ ಮಹಿಳೆಯರು ಮತ್ತು ತೃತೀಯ ಲಿಂಗಿಗಳ ಬದುಕಿಗೆ ಬೆಳಕು ಚೆಲ್ಲುವ ‘ಪತಂಗ ಪ್ರಭಾವ’ ನಾಟಕ ಪ್ರದರ್ಶನ ಈಚೆಗೆ ಬೆಂಗಳೂರಿನ ಕೆ.ಎಚ್. ಕಲಾಸೌಧದಲ್ಲಿ ರಂಗಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.

ADVERTISEMENT

ಯುವ ನಿರ್ದೇಶಕ ಕಾರ್ತಿಕ್ ಹೆಬ್ಬಾರ್ ರಚಿಸಿ, ನಿರ್ದೇಶಿಸಿರುವ ಈ ನಾಟಕ ಪುರಾಣ ಮತ್ತು ವರ್ತಮಾನ ಕಾಲದ ಹೆಣ್ಣಿನ ಅಂತರಂಗದ ತುಮುಲಗಳನ್ನು ಎಳೆಎಳೆಯಾಗಿ ಚಿತ್ರಿಸುತ್ತದೆ. ಪಿತೃ ಪ್ರಧಾನ ಸಮಾಜದಲ್ಲಿ ಇಂದಿಗೂ ದ್ವಿತೀಯ ದರ್ಜೆ ಪ್ರಜೆಯಾಗಿರುವ ಹೆಣ್ಣಿನ ಭಾವುಕ ನೆಲೆಗಳನ್ನು ದ್ರೌಪದಿ ಮತ್ತು ಲೇಖಕಿ ಕೃಷ್ಣಾ ಪಾತ್ರಗಳು ಸಮರ್ಥವಾಗಿ ಕಟ್ಟಿಕೊಟ್ಟರೆ, ತೃತೀಯ ಲಿಂಗಿಗಳಿಗೆ ಘನತೆಯ ಬದುಕೆಂಬುದು ಇನ್ನೂ ಕೈಗೆಟುಕದ ಚಂದ್ರನಂತೆ ಎಂಬ ವಾಸ್ತವಕ್ಕೆ ನಾಟಕ ಕನ್ನಡಿ ಹಿಡಿಯುತ್ತದೆ.

ಮಹಾಭಾರತದ ಯುದ್ಧದ ಕರಾಳ ರಾತ್ರಿಯಲ್ಲಿ ತನ್ನೈದು ಮಕ್ಕಳನ್ನೂ ಕಳೆದುಕೊಂಡ ದ್ರೌಪದಿ, ಶಿಖಂಡಿ ಜೊತೆಗೆ ತನ್ನ ಬದುಕಿನ ಅವಲೋಕನ ನಡೆಸುತ್ತಾಳೆ. ಬೆಂಕಿಯಲ್ಲಿ ಅರಳಿದ ಹೂವಾಗಿರುವ ಆಕೆಯನ್ನು ಹಣ್ಣಿನಂತೆ ಪಾಂಡವರು, ಅವಳ ದೇಹವನ್ನು ಒಬ್ಬರಾದ ಮೇಲೆ ಒಬ್ಬರು ಮುಕ್ಕಿದರೂ ಅವಳಂತರಂಗಕ್ಕೆ ಪ್ರವೇಶ ಪಡೆಯುವ ಪ್ರಯತ್ನವನ್ನೂ ಮಾಡುವುದಿಲ್ಲ. ಹಾಗಾಗಿ, ದ್ರೌಪದಿ ತಾನು ಪಾಂಚಾಲಿಯಾದರೂ ಅವರಿಗೆ ನಾನೊಬ್ಬಳೇ ಹೆಂಡತಿಯಲ್ಲವಲ್ಲ ಅನ್ನುತ್ತಾಳೆ. ದುರ್ಯೋಧನನ ಸಾವಿನ ನಂತರವೂ ಅವಳಂತರಂಗದ ನಿಗಿನಿಗಿ ಕೆಂಡ ಮಾತ್ರ ಆರುವುದೇ ಇಲ್ಲ. ಹೆಣ್ಣು ಮತ್ತು ಗಂಡು ಲಿಂಗಗಳ ನಡುವಿನ ಗೊಂದಲದಲ್ಲಿಯೇ ಜೀವನ ಸಾಗಿಸುವ ಶಿಖಂಡಿಯೂ ದ್ರೌಪದಿಯಂತೆ ನ್ಯಾಯ ವಂಚಿತ. ಇದು ಪುರಾಣದ ದ್ರೌಪದಿ, ಶಿಖಂಡಿಯ ಕಥೆಯಾದರೆ, ಇತ್ತ ವರ್ತಮಾನದಲ್ಲಿ ಲೇಖಕಿ ಕೃಷ್ಣಾ ಮತ್ತು ತೃತೀಯ ಲಿಂಗಿ ಮೋ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಆಧುನಿಕ ಕಾಲದ ಕೋರ್ಟುಗಳು ಸಂವಿಧಾನ, ಕಾನೂನು ಮೂಲಕ ಸಮಾನತೆಯ ತೀರ್ಪುಗಳನ್ನು ಕೊಟ್ಟರೂ ಈ ಸಮುದಾಯಕ್ಕೆ ಅಂಟಿರುವ ಸಾಮಾಜಿಕ ಅಸ್ಪೃಶ್ಯತೆಯ ಶಾಪವಿನ್ನೂ ವಿಮೋಚನೆಯಾಗಿಲ್ಲ. ಗಲಭೆಯ ರಾತ್ರಿಯೊಂದರಲ್ಲಿ ಲೇಖಕಿ ಕೃಷ್ಣಾಳ ಮನೆಗೆ ಆಕಸ್ಮಿಕವಾಗಿ ಬರುವ ಮೋ, ತನ್ನ ಬದುಕಿನ ಪುಟಗಳನ್ನು ತೆರೆದಿಡುವಾಗ ಕೃಷ್ಣಾ ಕಣ್ಣೀರಾಗುತ್ತಾಳೆ. ಗಂಡನ ಹಿಡಿ ಪ್ರೀತಿಗಾಗಿ ಹಂಬಲಿಸುವ ಕೃಷ್ಣಾಳ ಈಡೇರದ ಹಂಬಲಕ್ಕೆ ಮೋ ಸಾಥಿಯಾಗುತ್ತಾಳೆ. ಪರಿಪೂರ್ಣ ಹೆಣ್ಣು, ಲಿಂಗ ಪರಿವರ್ತಿತ ಹೆಣ್ಣು ಒಟ್ಟಿನಲ್ಲಿ ಹೆಣ್ಣಿಗೆ ಅವನಿಲ್ಲದ ಅಸ್ತಿತ್ವವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಸಮಾಜ ಹೇರಿರುವ ಬಂಧನಗಳಾಚೆಗೆ ಮೋ ಮತ್ತು ಕೃಷ್ಣಾ ಹೊಸ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಾರೆ.

ದ್ರೌಪದಿ ಮತ್ತು ಕೃಷ್ಣಾ ಪಾತ್ರಗಳನ್ನು ಆ ಕ್ಷಣಕ್ಕೆ ತೀವ್ರವಾಗಿ ಬದುಕುವ ನಟಿ ಸೀತಾ ಕೋಟೆ ಹೆಣ್ಣಿನ ಅಂತರಂಗದ ಅಲೆಗಳನ್ನು ಸೂಕ್ಷ್ಮವಾಗಿ ಮೀಟುತ್ತಾರೆ. ಒಂದರ ಛಾಯೆ ಮತ್ತೊಂದರ ಮೇಲೆ ಬೀಳದಂತೆ ಎಚ್ಚರ ವಹಿಸಿರುವ ಅವರ ಮುಖದ ಮೇಲೆ ಹೊರಡುವ ಭಾವಮುದ್ರೆಗಳು ದೀರ್ಘಕಾಲ ಕಾಡುತ್ತವೆ. ಮಾನಸಿಕವಾಗಿ ಆ ಪಾತ್ರವೇ ತಾವಾಗಿರುವ ಚಂದ್ರಕೀರ್ತಿ ಮೋ ಅನ್ನು ಆವಾಹಿಸಿಕೊಂಡಂತೆ ನಟಿಸಿದ್ದಾರೆ. ರಂಗದ ಮೇಲೆ ಎರಡೇ ಪಾತ್ರಗಳು ದೀರ್ಘಕಾಲ ಸಂಭಾಷಣೆ ಮತ್ತು ನಟನೆಯ ಮೂಲಕ ಪ್ರೇಕ್ಷಕರ ಮನಸ್ಸನ್ನಾವರಿಸುತ್ತವೆ. ಸರಳ ರಂಗಪರಿಕರ, ಬೆಳಕಿನ ವಿನ್ಯಾಸ ಕಣ್ಸೆಳೆಯುತ್ತದೆ.

ಜಾತಿ, ಧರ್ಮಕ್ಕಿಂತ ಮೀರಿ ಇರುವುದು ಮನುಷ್ಯತ್ವ ಮತ್ತು ಪ್ರೀತಿ. ಅಸ್ಮಿತೆಯ ಪ್ರಶ್ನೆ ಬರೀ ಹೆಣ್ಣು–ಗಂಡಿಗಷ್ಟೇ ಅಲ್ಲ, ಅದು ತೃತೀಯ ಲಿಂಗಿಗಳಿಗೂ ಅವಶ್ಯಕ. ತುಸು ಪ್ರೀತಿ, ತುಸು ಗೌರವ ಕೊಟ್ಟರೆ ಸಾಕು ಅವರೂ ಸ್ವತಂತ್ರ ಬದುಕು ಕಟ್ಟಿಕೊಳ್ಳಬಲ್ಲರು ಎಂಬುದನ್ನು ನಾಟಕ ಸೂಚಿಸುತ್ತದೆ. ‘ತೃತೀಯ ಲಿಂಗಿಗಳನ್ನು ನಾವು ಬೇರೆ ಸಮುದಾಯವೆಂತಲೇ ಪ್ರತ್ಯೇಕಿಸಿಬಿಟ್ಟಿದ್ದೇವೆ. ದೊಡ್ಡ ಬದಲಾವಣೆ ಮಾಡಲಾಗದಿದ್ದರೂ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಚಿಟ್ಟೆಯೊಂದು ತನ್ನ ರೆಕ್ಕೆ ಬಡಿದರೆ, ಅದರಿಂದಾಗಿ ಇನ್ನೆಲ್ಲೋ ಚಂಡಮಾರುತವಾಗುವ ಸಾಧ್ಯತೆ ಇರುತ್ತದೆಯಂತೆ. ಇದು ಕ್ವಾಂಟಮ್ ಫಿಜಿಕ್ಸ್‌ನ ಒಂದು ಥಿಯರಿ. ಅಂಥದೊಂದ್ದು ಆಶಯವನ್ನು ಹೊತ್ತು ‘ಧೀ ಮಹಿ’ ತಂಡ ಮಾಡಲು ಯತ್ನಿಸಿದೆ’ ಎನ್ನುತ್ತಾರೆ ನಿರ್ದೇಶಕ ಕಾರ್ತಿಕ್ ಹೆಬ್ಬಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.