ADVERTISEMENT

ಕನಸಿನ ಹಾದಿಯಲ್ಲಿ ‘ರಂಗಾಸ್ಥೆ’

ಮಾನಸ ಬಿ.ಆರ್‌
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
ಹನುಮಂತನಗರದ ಕೆ.ಎಚ್ ಕಲಾಸೌಧದಲ್ಲಿ ರಂಗಾಸ್ಥೆ ತಂಡ ಆಯೋಜಿಸಿದ್ದ ‘ಕಾದು ಕತೆಯಾದವರು’ ನಾಟಕದ ಒಂದು ದೃಶ್ಯ
ಹನುಮಂತನಗರದ ಕೆ.ಎಚ್ ಕಲಾಸೌಧದಲ್ಲಿ ರಂಗಾಸ್ಥೆ ತಂಡ ಆಯೋಜಿಸಿದ್ದ ‘ಕಾದು ಕತೆಯಾದವರು’ ನಾಟಕದ ಒಂದು ದೃಶ್ಯ   

ನಗರದಲ್ಲಿ ಬೆಳೆದ ಕಾಲೇಜು ಹುಡುಗರನ್ನು ಕಟ್ಟಿಕೊಂಡು ಇನ್ನೆಂಥಾ ತಂಡ ಕಟ್ಟಬಲ್ಲರು ಎಂಬ ಉಡಾಫೆಯ ಮಾತುಗಳಿಗೆ ದಿಟ್ಟ ಉತ್ತರಕೊಡುವಂತೆ ಬೆಳೆದದ್ದು ‘ರಂಗಾಸ್ಥೆ’ ರಂಗ ತಂಡ.

ಹೊಸ ರಚನೆಕಾರರು, ನಿರ್ದೇಶಕರನ್ನು ಬೆಳೆಸುವ ಮಹಾತ್ವಾಕಾಂಕ್ಷೆ ಈ ತಂಡದ ಹುಡುಗರ ಕಣ್ಣುಗಳಲ್ಲಿದೆ. ಈಗಷ್ಟೇ ಕಾಲೇಜು ಮುಗಿಸಿ ತರಹೇವಾರಿ ಕನಸುಗಳನ್ನು ಕಟ್ಟಿಕೊಂಡಿರುವ 30 ಹುಡುಗರು, 12 ಹಡುಗಿಯರ ಕನಸಿನ ತಂಡ ಇದು. ಎಂಜಿನಿಯರಿಂಗ್‌ನಿಂದ ಹಿಡಿದು ಬಿಎ ಪದವಿ ಪಡೆದವರೂ ಈ ತಂಡದಲ್ಲಿ ಇದ್ದಾರೆ.

ನೀನಾಸಂ ರಂಗ ಶಿಕ್ಷಣ ಕೇಂದ್ರದ ಹಳೆಯ ವಿದ್ಯಾರ್ಥಿ ‘ತಲಕಾಡು ಗುರುರಾಜು’ ರಚನೆ ಹಾಗೂ ನಿರ್ದೇಶನ ಮಾಡಿರುವ ‘ಕಾದು ಕಥೆಯಾದವರು’ ನಾಟಕ ಇತ್ತೀಚೆಗೆ ಕೆ.ಎಚ್‌.ಕಲಾಸೌಧದಲ್ಲಿ ಪ್ರದರ್ಶನಗೊಂಡಿತ್ತು. ಈ ನಾಟಕ ನೋಡಿದವರು ವಿದ್ಯಾರ್ಥಿಗಳು ಹೀಗೂ ನಟನೆ ಮಾಡಬಲ್ಲರಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ.

ADVERTISEMENT

ಈ ತಂಡ ಕೇಂದ್ರ ಸರ್ಕಾರದ ಜನೌಷಧಿ ಕುರಿತು ಬೀದಿ ನಾಟಕ ರಚನೆ ಮಾಡಿ ನಟಿಸಿದ್ದು, ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ನ್ಯಾಷನಲ್‌ ಕಾಲೇಜಿನ ವಿದ್ಯಾರ್ಥಿ ಶ್ರೀನಿಧಿ ಈ ತಂಡದ ಆಧಾರ. ಈ ಹುಡುಗನ ದೊಡ್ಡ ಕನಸುಗಳಿಗೆ ನೀರೆರೆದದ್ದು ಎನ್‌. ಧನುಷ್‌.

‘ಈ ರಂಗ ತಂಡ ಕಟ್ಟೋಕೆ ನನ್ನ ಹತ್ತಿರ ದುಡ್ಡು ಇರಲಿಲ್ಲ. ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದೇನೆ. ಆದರೆ ಜನರ ಪ್ರೀತಿ, ವಿಶ್ವಾಸ ನಮ್ಮ ತಂಡದ ಮೇಲಿದೆ. ನಾನು ದುಡ್ಡು ಹಾಕಿದೆ. ಶ್ರೀನಿಧಿ ಅದನ್ನು ಉಳಿಸಿಕೊಂಡು ಹೋಗುವಂತೆ ಕೆಲಸ ಮಾಡಿದ. ನಮ್ಮ ತಂಡದ ಬಹುತೇಕ ನಾಟಕಗಳಿಗೆ ಅವನೇ ನಿರ್ದೇಶಕ’ ಎನ್ನುವುದು ತಂಡದ ಸಂಸ್ಥಾಪಕ ಧನುಷ್‌ ಅವರ ಮಾತು.

ಪ್ರಶಸ್ತಿಯ ಹಾದಿ: ಈ ತಂಡದ ಮೂರು ನಾಟಕಗಳಿಗೆ ರಾಜ್ಯ ಮಟ್ಟದ ‘ರಂಗಶ್ರೀ’ ಪ್ರಶಸ್ತಿ ಬಂದಿದೆ. ‘ನಾವು ನಾಟಕ ಮಾಡ್ತಿಲ್ಲ’, ‘ನಮ್ಮೂರ ರಾಮಾಯಣ’, ‘ಕಡೇ ದಿನ ಕಡೇ ಷೋ’ ನಾಟಗಳಿಗೆ ಪ್ರಶಸ್ತಿಗಳು ಅರಸಿ
ಬಂದಿವೆ.

‘ನಮ್ಮ ರಂಗ ತಂಡಕ್ಕೆ ಯಾವುದೇ ನಿರ್ದಿಷ್ಟ ಜಾಗ ಇಲ್ಲ. ಕಾಲೇಜು ಸೇರಿದಂತೆ ಸಿಕ್ಕ ಸಿಕ್ಕ ಜಾಗಗಳಲ್ಲಿ ನಾಟಕ ಅಭ್ಯಾಸ ಮಾಡುತ್ತೇವೆ. ನಮ್ಮ ತಂಡದ ಕಲಾವಿದರೇ ನಾಟಕಗಳಿಗೆ ಬೆಳಕು, ರಂಗ ಸಂಯೋಜನೆ, ನಟನೆ, ನಿರ್ದೇಶನ, ಸಂಗೀತ ಎಲ್ಲವನ್ನೂ ಮಾಡುತ್ತಾರೆ. ಹೊರಗಿನಿಂದ ನಾವು ಯಾವುದೇ ಸಹಾಯ ಪಡೆದುಕೊಂಡಿಲ್ಲ. ಸ್ವಾವಲಂಭಿಯಾಗಿಯೇ ನಮ್ಮ ತಂಡ ನಡೆದುಬಂದಿದೆ’ ಎಂದು ಧನುಷ್‌ ಹೇಳಿದರು.

ಕಲಾವಿದೆಗೆ ಮೇಕಪ್‌ ಮಾಡುವುದರಲ್ಲಿ ನಿರತರಾಗಿರುವ ನಿರ್ದೇಶಕ ತಲಕಾಡು ಗುರುರಾಜು -ಚಿತ್ರಗಳು:ಸತೀಶ್ ಬಡಿಗೇರ್

ನಾಳೆ 2ನೇ ಪ್ರದರ್ಶನ
ರಂಗಾಸ್ಥೆ ರಂಗ ತಂಡದ ‘ಕಾದು ಕಥೆಯಾದವರು’ ನಾಟಕದ ಎರಡನೇ ಪ್ರದರ್ಶನ ಸೆಪ್ಟೆಂಬರ್‌ 1ರಂದು ವ್ಯೋಮ ಆರ್ಟ್ಸ್‌ ಸ್ಪೇಸ್‌ ಆ್ಯಂಡ್‌ ಸ್ಟುಡಿಯೋ ಥಿಯೇಟರ್‌ನಲ್ಲಿ ನಡೆಯಲಿದೆ. ಇದು ಜೆ.ಪಿ.ನಗರ 3ನೇ ಹಂತದ 8ನೇ ಮುಖ್ಯರಸ್ತೆಯಲ್ಲಿದೆ.
ಸಮಯ: ಮಧ್ಯಾಹ್ನ 3.30 ಹಾಗೂ ಸಂಜೆ 7.30.
ಪ್ರವೇಶ ಶುಲ್ಕ ₹100.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.