ADVERTISEMENT

ಕವಿತಾ ಕಿರುತೆರೆ ವ್ಯಾಕರಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ರೇವತಿ ಮತ್ತು ಶ್ರೀಮತಿ ಅಕ್ಕ-ತಂಗಿಯರು. ಇಬ್ಬರದೂ ತದ್ವಿರುದ್ಧ ಸ್ವಭಾವ. ಅಕ್ಕನದು ಸಂಕೋಚದ ಸ್ವಭಾವ. ತಂಗಿ ತರಲೆ ಹುಡುಗಿ. ಅಕ್ಕನಿಗೆ ಕಂಕಣಬಲ ಕೂಡಿ ಬರುತ್ತಿಲ್ಲ ಎನ್ನುವ ತಲೆನೋವು. ತಂಗಿಯೋ ಈ ಶತಮಾನದ ಮಾದರಿ ಹೆಣ್ಣು- ಸ್ವತಂತ್ರ ಮನಸ್ಸಿನ ಗಟ್ಟಿ ಹುಡುಗಿ.

ಈ ಸೋದರಿಯರ ಬದುಕಿನಲ್ಲಿ ಬರುವ ಯುವಕನ ಹೆಸರು ಪ್ರಭಾಕರ. ಈ ಹುಡುಗ ರೇವತಿ-ಶ್ರೀಮತಿಯರ ಬಾಳಿನಲ್ಲಿ ತರುವ ಬದಲಾವಣೆ ಎಂತಹದ್ದು? ಉತ್ತರಕ್ಕಾಗಿ `ನನ್ನ ಪ್ರೀತಿಯ ಶ್ರೀಮತಿ~ ಧಾರಾವಾಹಿ ನೋಡಬೇಕು.

`ನನ್ನ ಪ್ರೀತಿಯ ಶ್ರೀಮತಿ~ ಕವಿತಾ ಲಂಕೇಶ್ ನಿರ್ದೇಶನದ ಧಾರಾವಾಹಿ. ಬೆಳ್ಳಿತೆರೆಯಲ್ಲಿ ಸದಭಿರುಚಿಯ ಚಿತ್ರಗಳ ನಿರ್ದೇಶನದ ಮೂಲಕ ಪ್ರಸಿದ್ಧರಾದ ಕವಿತಾ, ಈಗ ಕಿರುತೆರೆಯನ್ನು ತಮ್ಮ ಪ್ರಯೋಗಶೀಲತೆಗೆ ವೇದಿಕೆಯನ್ನಾಗಿ ಆರಿಸಿಕೊಂಡಿದ್ದಾರೆ.

ಸಾಕಷ್ಟು ತಿರುವು ಪಡೆದುಕೊಳ್ಳುವ ಕತೆಯನ್ನು `ನನ್ನ ಪ್ರೀತಿಯ ಶ್ರೀಮತಿ~ ಧಾರಾವಾಹಿಯ ಮೂಲಕ ಹೇಳಲು ಹೊರಟಿದ್ದಾರೆ.

`ಮೂರು ವರ್ಷದಿಂದ ಝೀ ವಾಹಿನಿ ಜೊತೆ ಕೆಲಸ ಮಾಡುವ ಪ್ರಯತ್ನದ ಹಂಬಲಕ್ಕೆ ಇದೀಗ ಕಾಲ ಕೂಡಿ ಬಂದಿದೆ~ ಎಂದರು ಕವಿತಾ. ಸಮಕಾಲೀನ ಅಂಶಗಳು, ಸಂಸ್ಕೃತಿ ಎರಡನ್ನೂ ಸಮನಾಗಿ ತೂಗಿಸಿಕೊಂಡು ಹೋಗುವ ಪ್ರಯತ್ನ ಅವರ ಧಾರಾವಾಹಿಯಲ್ಲಿ ಇದೆಯಂತೆ.

ರೇವತಿ ಪಾತ್ರಧಾರಿ ಸ್ನೇಹಾಗೆ ತಮಗೆ ಸಿಕ್ಕಿರುವ ಪಾತ್ರ ತಮ್ಮ ಸಂಕೋಚದ ಸ್ವಭಾವಕ್ಕೆ ಸರಿ ಹೊಂದುವಂತಹದು ಎನಿಸಿದೆ. ಇನ್ನು ಶ್ರೀಮತಿ ಪಾತ್ರಧಾರಿ ಅನುಶ್ರೀಗೆ ತಮ್ಮ ಸ್ವಭಾವಕ್ಕೆ ವಿರುದ್ಧವಾದ ಪಾತ್ರ ನಿರ್ವಹಿಸುತ್ತಿರುವ ಖುಷಿ.

ಪ್ರಭಾಕರನ ಪಾತ್ರಧಾರಿ ಹರ್ಷವರ್ಧನ್ ಅವರಿಗೆ ಮಹಿಳಾ ಪ್ರಧಾನವಾದ ಧಾರಾವಾಹಿಗಳ ಲೋಕದಲ್ಲಿ ಪುರುಷರಿಗೂ ಸಮಾನ ಅವಕಾಶ ಇರುವ ಪಾತ್ರ ಸಿಕ್ಕಿರುವುದು ಅದೃಷ್ಟ ಎನಿಸಿದೆ. ತಮಗೆ ಅವಕಾಶ ನೀಡಿದ ಕವಿತಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಸುರೇಶ್ ಅವರಿಗೆ ವಿಲನ್ ಅಲ್ಲದ, ಒಳ್ಳೆಯವನೂ ಅಲ್ಲದ, ನಯವಂಚಕನ ಪಾತ್ರವಂತೆ. ಉಳಿದಂತೆ ಶೃಂಗೇರಿ ರಾಮಣ್ಣ, ಶೋಭ, ಬಿ.ಎಲ್. ಮಂಜುಳಾ,  ವಿ.ಎಚ್.ಸುರೇಶ್, ರಶ್ಮಿ , ಪ್ರಕೃತಿ ಮುಂತಾದ ಕಲಾವಿದರಿದ್ದಾರೆ.

ಅ. 22ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಝೀ ವಾಹಿನಿಯಲ್ಲಿ `ನನ್ನ ಪ್ರೀತಿಯ ಶ್ರೀಮತಿ~ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.