ADVERTISEMENT

ಕಿರುತೆರೆಯಲ್ಲಿ ಸಿಐಡಿ ಕಥೆಗಳು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ಅಪರಾಧ ಜಗತ್ತಿನ ಘಟನೆಗಳು ಮತ್ತು ರೋಚಕತೆ ದೃಶ್ಯ ಮಾಧ್ಯಮಕ್ಕೆ ಉತ್ತಮ ಸರಕಾಗುತ್ತಿವೆ. ಈ ಆಟವನ್ನು ಕ್ಲೀಷೆಯೆನ್ನಿಸದಂತೆ ನಿರೂಪಿಸುವ ಪ್ರಯತ್ನಗಳಿಗೆ ಜನಪ್ರಿಯತೆಯೂ ದೊರೆಯುತ್ತಿದೆ. ಈ ಅನುಕೂಲವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಝೀ ಕನ್ನಡ ವಾಹಿನಿ ಹೊಸದೊಂದು ಕಾರ್ಯಕ್ರಮ ರೂಪಿಸುತ್ತಿದೆ. ಅದರ ಹೆಸರು– ‘ಸಿಐಡಿ ಕರ್ನಾಟಕ’.

ಇದೇ 21ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 10 ಗಂಟೆಗೆ ಪ್ರಸಾರವಾಗಲಿರುವ ‘ಸಿಐಡಿ ಕರ್ನಾಟಕ’ ಅಪರಾಧ, ತನಿಖೆ ಹಾಗೂ ಮಾಹಿತಿಯನ್ನೊಳಗೊಂಡ ಕಾರ್ಯಕ್ರಮ. ‘ಇದು ತನಿಖೆ ಆಧಾರಿತದಲ್ಲಿ ಸಾಗುವ, ಕಾಲ್ಪನಿಕ ಕಥೆ... ಎನ್ನುವ ವಿವರಣೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ಸಿದ್ದು ಕಾಳೋಜಿ ಅವರದು.

ಒಟ್ಟು 26 ಸಂಚಿಕೆಗಳಲ್ಲಿ ‘ಸಿಐಡಿ ಕರ್ನಾಟಕ’ ಪ್ರಸಾರಗೊಳ್ಳಲಿದೆ. ಈಗಾಗಲೇ ನಾಲ್ಕು ಕಂತುಗಳ ಚಿತ್ರೀಕರಣ ಮುಗಿದಿದೆಯಂತೆ. ಪ್ರತಿ ಕಂತಿನಲ್ಲಿ ಸೆಲೆಬ್ರಿಟಿಗಳು–ಗಣ್ಯರು ಕಾಣಿಸಿಕೊಳ್ಳಲಿದ್ದಾರೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮುತ್ತಪ್ಪ ರೈ ಮತ್ತಿತರರು ಈ ಯಾದಿಯಲ್ಲಿರುವ ವಿಶೇಷ ವ್ಯಕ್ತಿಗಳು.

‘ತನಿಖಾ ತಂಡವೊಂದರ ನಡೆಗಳನ್ನು ಕಾರ್ಯಕ್ರಮದಲ್ಲಿ ತೋರಿಸಲಾಗುವುದು. ನಮ್ಮ ಪ್ರಯತ್ನ ಯಾವುದೇ ರೀತಿಯ ಅನುಕರಣೆಯಲ್ಲ. ಸಿಐಡಿ ತಂಡ ಸಾಹಸ ಮತ್ತು ಬುದ್ಧಿವಂತಿಕೆಯಿಂದ ಹಂತಕರನ್ನು ಹಿಡಿಯುವ ಪರಿ ಕಿರುತೆರೆಯಲ್ಲಿ ತೆರೆದುಕೊಳ್ಳಲಿದೆ’ ಎಂದು ಕಾರ್ಯಕ್ರಮದ ನಿರ್ದೇಶಕ ಕಲಾಗಂಗೋತ್ರಿ ಮಂಜು ಹೇಳಿದರು.

ಸಿಐಡಿ ತಂಡದ ಮುಖ್ಯಸ್ಥ ಎ.ಪಿ. ಅರ್ಜುನ್ ಪಾತ್ರಧಾರಿ ಸಚಿನ್ ಸುವರ್ಣ, ಇನ್‌ಸ್ಪೆಕ್ಟರ್ ಪ್ರತಾಪ್‌ ಪಾತ್ರದಲ್ಲಿರುವ ಲೋಕೇಶ್  (ಭಜರಂಗಿ ಚಿತ್ರದ ಖಳನಾಯಕ) ಅವರುಗಳು ಚುಟುಕಾಗಿ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ವೀಣಾ ಪೊನ್ನಪ್ಪ, ತೇಜು ಪೊನ್ನಪ್ಪ, ಹೇಮಂತ್‌, ಅಂಜಲಿ ತಂಡದ ಇತರ ಸದಸ್ಯರು. ವಾಹಿನಿಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಬಾಲರಾಜ್ ನಾಯ್ಡು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.