ADVERTISEMENT

ಜೀವನೋತ್ಸಾಹದ ‘ನಿತ್ಯೋತ್ಸವ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST
‘ನಿತ್ಸೋತ್ಸವ’ 	ವಿನಯಾ ಪ್ರಸಾದ್‌, ಅನಂತನಾಗ್‌
‘ನಿತ್ಸೋತ್ಸವ’ ವಿನಯಾ ಪ್ರಸಾದ್‌, ಅನಂತನಾಗ್‌   

ಮಿನಿ ಧಾರಾವಾಹಿ, ಮಿನಿ ಸಿನಿಮಾಗಳ ಪರಿಕಲ್ಪನೆಗಳ ಪ್ರಯೋಗದಲ್ಲಿರುವ ‘ಝೀ’ ಕನ್ನಡ ವಾಹಿನಿಯ ಎರಡನೇ ಮಿನಿ ಧಾರಾವಾಹಿ ‘ನಿತ್ಯೋತ್ಸವ’ ಸೆ. 30ರಿಂದ ಪ್ರಸಾರಗೊಳ್ಳಲಿದೆ. ನಿಗದಿತ 65 ಸಂಚಿಕೆಗಳ ಈ ಕಥನ ಪ್ರತಿ ರಾತ್ರಿ 8ಕ್ಕೆ (ಸೋಮವಾರದಿಂದ-ಶುಕ್ರವಾರ) ಪ್ರಸಾರವಾಗಲಿದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ, ಅನಂತನಾಗ್-ವಿನಯಾಪ್ರಸಾದ್ ಮುಖ್ಯ ಭೂಮಿಕೆಯಲ್ಲಿರುವ ‘ನಿತ್ಯೋತ್ಸವ’ ಬದುಕಿನ ಚೆಲುವನ್ನು ಅನಾವರಣಗೊಳಿಸುವ ಜೀವನೋತ್ಸಾಹದ ಕಥನವನ್ನು ಒಳಗೊಂಡಿದೆ. ಕಥೆಗಾರ ಎಂ.ಎಸ್. ಶ್ರೀರಾಮ್ ಅವರ ‘ಲಾಟರಿ’ ಕಥೆಯನ್ನು ಆಧರಿಸಿದ ಈ ಧಾರಾವಾಹಿ– ಗಂಡನನ್ನು ಕಳೆದುಕೊಂಡರೂ ಜೀವನೋತ್ಸಾಹ ಕಳೆದುಕೊಳ್ಳದ ಹೆಣ್ಣುಮಗಳೊಬ್ಬಳ ಬದುಕಿನ ಸುತ್ತ ನಡೆಯುವ ಕಥೆ. ಇಳಿ ವಯಸ್ಸಿನಲ್ಲಿ ಮತ್ತೊಬ್ಬ ಪುರುಷನೊಡನೆ ಸಾಂಗತ್ಯದ ಹಂಬಲ ಆಕೆಯಲ್ಲಿ ಚಿಗುರುವುದು ಕಥೆಯ ಮುಖ್ಯಭಾಗ.

ಪರಸ್ಪರ ಒಡನಾಟಕ್ಕೆ ಹಾತೊರೆಯುವ ಹಿರಿಯ ನಾಗರಿಕರ ಪಾತ್ರಗಳಲ್ಲಿ ಅನಂತನಾಗ್‌ ಮತ್ತು ವಿನಯಾ ಪ್ರಕಾಶ್‌ ನಟಿಸಿದ್ದಾರೆ. ‘ಗಣೇಶನ ಮದುವೆ’, ‘ಗೌರಿ ಗಣೇಶ’ ರೀತಿಯ ಯಶಸ್ವಿ ಚಿತ್ರಗಳ ಈ ಜೋಡಿ ಈಗ ಕಿರುತೆರೆಯ ಪ್ರೇಕ್ಷಕರಿಗೆ ಮೋಡಿ ಮಾಡಲು ಹೊರಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.