ADVERTISEMENT

ಬಿಗ್‌ಬಾಸ್‌ ಕಾಲೆಳೆದ ಮೀಮ್‌

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 8:49 IST
Last Updated 30 ಜನವರಿ 2017, 8:49 IST
ಬಿಗ್‌ಬಾಸ್‌ ಕಾಲೆಳೆದ ಮೀಮ್‌
ಬಿಗ್‌ಬಾಸ್‌ ಕಾಲೆಳೆದ ಮೀಮ್‌   

ಇಂಟರ್ನೆಟ್‌ ಲೋಕದಲ್ಲಿ ಮೀಮ್‌ಗಳು ಭಾರಿ ಜನಪ್ರಿಯ. ಮೀಮ್‌ಗಳನ್ನು ಪ್ರಚಲಿತ ವಿದ್ಯಮಾನವನ್ನು ಲೇವಡಿ ಮಾಡುವ ‘ಬಿಗ್‌ ರಿಲೀಫ್‌’ ಎಂದು ಅನೇಕರು ಹೇಳುತ್ತಾರೆ.

ರಾಜಕೀಯ, ಚಲನಚಿತ್ರ, ಸ್ಟಾರ್‌ ನಟರು, ಸಾಹಿತ್ಯ, ಧಾರವಾಹಿ ಎಲ್ಲವೂ ಮೀಮ್‌ಗೆ ಆಹಾರವೇ. ಬಿಗ್‌ಬಾಸ್‌ ಕಾರ್ಯಕ್ರಮವಂತೂ ಮೀಮ್‌ ಕಲಾವಿದರಿಗೆ ಅಚ್ಚುಮೆಚ್ಚು.

ಬಿಗ್‌ಬಾಸ್‌ ಪ್ರಾರಂಭ ಆದಾಗಲಿನಿಂದಲೂ ಅಲ್ಲಿನ ಸ್ಪರ್ಧಿಗಳು, ಅವರ ಹಾವಭಾವ, ಬಟ್ಟೆ, ಹೇರ್‌ಸ್ಟೈಲ್, ಮಾತು, ನಡೆ ನುಡಿ ಎಲ್ಲವೂ ಮೀಮ್‌ಗಳಲ್ಲಿ ಲೇವಡಿಗೊಳಪಟ್ಟಿವೆ.

ADVERTISEMENT

ಬಿಗ್‌ಬಾಸ್‌ ಸೀಸನ್‌–4 ಸಹ ಮೀಮ್‌ಗಳ ವ್ಯಂಗಕ್ಕೆ ಆಹಾರವಾಗಿದೆ.  ಸ್ಪರ್ಧಿಗಳು ಒಬ್ಬೊಬ್ಬರೇ ಹೊರಹೋಗಿ ಅಂತಿಮ ಹಂತ ಹತ್ತಿರವಾಗುತ್ತಲೂ ಟ್ರಾಲ್‌ ಪೇಜ್‌ಗಳು ಹೆಚ್ಚು ಚುರುಕಾಗಿ ಮೀಮ್‌ಗಳನ್ನು ಪ್ರಕಟಿಸುತ್ತಿವೆ.

ಈ ಬಾರಿಯ ವಿಜಯಿಯೆಂದು ಎಣಿಕೆ ಮಾಡಲಾಗಿದ್ದ ಮಾಳವಿಕ ಹೊರಬಂದಾಗ ‘ಮಾಳವಿಕ ವಿಜಯಿಯೆಂದು ಭಾವಿಸಿದ್ದ ಎಲ್ಲರಿಗಾಗಿ ಒಂದು ನಿಮಿಷ ಮೌನಾಚರಣೆ’ ಎಂಬ ಮೀಮ್‌ ಮಾಳವಿಕ ಅವರೊಂದಿಗೆ ಅವರ ಅಭಿಮಾನಿಗಳನ್ನು ವ್ಯಂಗ್ಯ ಮಾಡಿತ್ತು.

ಬಿಗ್‌ಬಾಸ್ ಕಾರ್ಯಕ್ರಮದ ವಿಜಯಿಯ ಬಗ್ಗೆ ಎದ್ದಿದ್ದ ಊಹಾಪೋಹಗಳ ಬಗ್ಗೆ ಒಂದು ಮೀಮ್ ಹೀಗೆ ಪ್ರತಿಕ್ರಿಯಿಸಿದೆ, ‘ಬೆಳಿಗ್ಗೆ ಪ್ರಥಮ್, ಮಧ್ಯಾಹ್ನ ರೇಖಾ ಮತ್ತು ರಾತ್ರಿ ಕೀರ್ತಿ ಬಿಗ್‌ಬಾಸ್ ಶೋನ ವಿಜಯಿ ಎಂದು ಸುದೀಪ್ ಘೋಷಣೆ ಮಾಡುತ್ತಾರೆ’ ಎಂದು ಬಿಗ್‌ಬಾಸ್ ಕಾರ್ಯಕ್ರಮದ ಬಗ್ಗೆ ಕುತೂಹಲ ಹೊಂದಿರುವವರ ಕಾಲೆಳೆದಿತ್ತು.

ಒಬಾಮ ತನ್ನ ಸಿಬ್ಬಂದಿಯೊಂದಿಗೆ ಟಿವಿ ವೀಕ್ಷಿಸುತ್ತಿರುವ ಚಿತ್ರದ ಕೆಳಗೆ ಬರೆದಿರುವ ‘ಬಿಗ್‌ಬಾಸ್‌ ಪೈನಲ್‌ ಹವಾ’ ಟ್ಯಾಗ್‌ಲೈನ್‌ ನಗು ಉಕ್ಕಿಸುತ್ತದೆ.

ಕಳೆದ ಬಾರಿಯ ಸ್ಪರ್ಧಿ ಹುಚ್ಚ ವೆಂಕಟ್‌ ಕಾಣಿಸಿಕೊಳ್ಳುವ ಮೀಮ್‌ ಒಂದರಲ್ಲಿ, ‘ನಾನು ಪ್ರಥಮ್‌ಗೆ ಹೋಡೆಯದೇ ಇದ್ದಿದ್ದರೆ ಜನ ಅವನಿಗೆ ವೋಟ್ ಹಾಕ್ತಾ ಇರ್ಲಿಲ್ಲ. ಪ್ರಥಮ್‌ ಗೆದ್ದರೆ ಅದರಲ್ಲಿ ನನ್ನದೂ ಪಾಲಿದೆ, ಗೊತ್ತಾಯ್ತಾ...’ ಎಂದು ಹೇಳುತ್ತಾರೆ.

ತಲೆ ಮೇಲೆ ಕೈ ಹೊತ್ತ ಮಾಜಿ ಪ್ರಧಾನಿ ದೇವೇಗೌಡರು ‘ತಮ್ಮ ಮನೆಗಿಂತಾ ಜಾಸ್ತಿ ಬಿಗ್‌ಬಾಸ್‌ ಮನೆ ಬಗ್ಗೆ ತಲೆ ಕೆಡ್ಸ್ಕೋತಾವ್ರಲ್ಲಪ್ಪ ಜನ’   ಎನ್ನುತ್ತದೆ ಇನ್ನೊಂದು ಮೀಮ್.

ಸುದೀಪ್‌ ಅವರ ಬಗ್ಗೆಯೂ ಸಾಕಷ್ಟು ಮೀಮ್‌ಗಳಿವೆ. ಡಾ.ರಾಜ್‌ಕುಮಾರ್‌ ಅವರು ಕಾಳಿದಾಸ ಚಿತ್ರದಲ್ಲಿ ಹಲವು ಕನ್ನಡಿಗಳ ಮುಂದೆ ನಿಂತು ‘ಎಲ್ಲೆಲ್ಲೂ ನಾನೆ, ಎಲ್ಲೆಲ್ಲೂ ನಾನೆ’ ಎಂದು ಹಾಡುವ ಚಿತ್ರದ ಕೆಳಗೆ ‘ಬಿಗ್‌ಬಾಸ್‌ ಫೈನಲ್‌ ದಿನ ಸುದೀಪ್‌ ಸ್ಥಿತಿ ಇದು’ ಎಂಬ ಟ್ಯಾಗ್‌ ಲೈನ್‌ ಬಿಗ್‌ಬಾಸ್‌ನ ಜನಪ್ರಿಯತೆಯನ್ನು ಹೇಳುವ ಜೊತೆಗೆ ಸುದೀಪ್‌ ಅವರ ಒನ್‌ಮ್ಯಾನ್‌ ಶೋ ಮನಃಸ್ಥಿತಿಗೂ ಕನ್ನಡಿ ಹಿಡಿಯುತ್ತದೆ.

ಫೇಸ್‌ಬುಕ್‌ನ ಬಹುತೇಕ ಟ್ರಾಲ್‌ ಪೇಜ್‌ಗಳು ಜಿದ್ದಿಗೆ ಬಿದ್ದಂತೆ ಬಿಗ್‌ಬಾಸ್‌ ಕಾರ್ಯಕ್ರಮ ಕುರಿತು ಮೀಮ್‌ಗಳನ್ನು ಪ್ರಕಟಿಸುತ್ತಿವೆ.
ಬಿಗ್‌ಬಾಸ್‌ ಸ್ಪರ್ಧಿಗಳ ಪರ ವಿರೋಧ ಮೀಮ್‌ಗಳ ಜೊತೆಗೆ ಬಿಗ್‌ಬಾಸ್‌ ಅನ್ನು ಟೀಕಿಸುವ ಮೀಮ್‌ಗಳೂ ಇವೆ, ‘ಸ್ಪರ್ಧಿಗಳು ಕನ್ನಡದಲ್ಲೇ ಮಾತನಾಡಬೇಕು ಎಂದು ಟಾಸ್ಕ್‌ ನೀಡುವ ಬಿಗ್‌ಬಾಸ್‌ ಬೆಳಿಗ್ಗೆ ಸ್ಪರ್ಧಿಗಳಿಗಾಗಿ ಹಿಂದಿ ಹಾಡುಗಳನ್ನು ಹಾಕುತ್ತಾರೆ’ ಎನ್ನುವ ಮೀಮ್‌ ಬಿಗ್‌ಬಾಸ್‌ನ ಕಾರ್ಯ ವಿಧಾನವನ್ನು ಟೀಕಿಸುತ್ತದೆ.

ಬಿಗ್‌ಬಾಸ್‌ ಮುಗಿದರೂ ಮೀಮ್‌ಗಳು ಮುಗಿಯುವುದಿಲ್ಲ, ವಿಜೇತರ ಪರ ವಿರೋಧ ಮೀಮ್‌ಗಳು, ಆಯ್ಕೆಯನ್ನು ಟೀಕಿಸುವ ಮೀಮ್‌ಗಳು, ಮುಂದಿನ ಬಿಗ್‌ಬಾಸ್‌ನ ಸ್ಪರ್ಧಿಗಳ ಬಗೆಗಿನ ಮೀಮ್‌ಗಳು ಬರಲಿವೆ ಎನ್ನುತ್ತಾರೆ ಮೀಮ್‌ ಫಾಲೋವರ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.