ADVERTISEMENT

ಮಾತೆಂದರೆ ನನಗೆ ಬದುಕು

ಪ್ರಜಾವಾಣಿ ವಿಶೇಷ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST
ಮಾತೆಂದರೆ  ನನಗೆ ಬದುಕು
ಮಾತೆಂದರೆ ನನಗೆ ಬದುಕು   

ಹುಟ್ಟಿ ಬೆಳೆದಿದ್ದು ಹಾಸನದ ಅರಸೀಕೆರೆ. ಏಳನೇ ತರಗತಿ ಬಳಿಕ ಬಂದಿದ್ದು ಬೆಂಗಳೂರಿಗೆ. ಬಾಲ್ಯದಿಂದಲೂ ಡಾನ್ಸ್ ಹುಚ್ಚು. ಕಾಲೇಜು ಓದುವಾಗ ಕೊರಿಯೋಗ್ರಫರ್ ಆಗಿಯೂ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ರಂಗಭೂಮಿ ನಂಟು ಆರಂಭವಾಯಿತು. ನಟರಂಗ ಹಾಗೂ ದೃಷ್ಟಿ ತಂಡದಲ್ಲಿ ಅಭಿನಯಿಸುತ್ತಿದ್ದೆ.

ನಾನು ಬಣ್ಣದ ಬದುಕಿನ ಕನಸು ಕಂಡವನೇ ಅಲ್ಲ. ಒಳ್ಳೆಯ ನೃತ್ಯಶಿಕ್ಷಕ ಆಗಬೇಕು ಅಂದುಕೊಂಡಿದ್ದೆ. ನಟ ವೆಂಕಿ (ಈಗ ಅವರು ಬದುಕಿಲ್ಲ) ಕಿರುತೆರೆಗೆ ಎಳೆತಂದು `ಸಿನಿ ಕಿಚಡಿ~ ಕಾರ್ಯಕ್ರಮ ನಡೆಸುವ ಜವಾಬ್ದಾರಿ ನೀಡಿದರು. ಅದು ಒತ್ತಾಯಕ್ಕೆ ಒಪ್ಪಿಕೊಂಡ ಕಾರ್ಯಕ್ರಮವಾಗಿತ್ತು. ಆದರೂ ಆಸ್ಥೆಯಿಂದ ನಿರ್ವಹಿಸಿದೆ. ಅದೇ ಬದುಕಿನ ಹಾದಿಗೆ ದಾರಿದೀಪವಾಗುತ್ತದೆ ಎಂಬ ಅರಿವೂ ಇರಲಿಲ್ಲ.

ಕಂಬದ ಮನೆ ನಾನು ನಟಿಸಿದ ಮೊದಲ ಟೆಲಿಸೀರಿಯಲ್. ಆ ಬಳಿಕ `ಜನನಿ~, `ಅರ್ಧಸತ್ಯ~, `ಮಳೆಬಿಲ್ಲು~, `ರಥಸಪ್ತಮಿ~, `ಪ್ರೀತಿ ಇಲ್ಲದ ಮೇಲೆ~, `ಕುಂಕುಮಭಾಗ್ಯ~ ಧಾರವಾಹಿಗಳಲ್ಲಿ ನಟಿಸಿದೆ. `ಮಳೆಬಿಲ್ಲು~ ಧಾರವಾಹಿಯ ಆದಿತ್ಯ ನನಗಿಷ್ಟದ ಪಾತ್ರ. ಇಂದಿಗೂ ನನ್ನನ್ನು ಆದಿ ಎಂಬ ಹೆಸರಿನಿಂದ ಬಹಳಷ್ಟು ಮಂದಿ ಗುರುತಿಸುತ್ತಾರೆ.

ನಾನು ನಟಿಸಿದ ಧಾರಾವಾಹಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಆದರೆ ಸಿಕ್ಕ ಪಾತ್ರಗಳು ಮಾತ್ರ ಒಂದಕ್ಕಿಂತ ಒಂದು ವಿಭಿನ್ನ. ಧಾರಾವಾಹಿಗಳಲ್ಲಿ ಕತೆ-ನಟನೆಗಿಂತ ಅಲ್ಲಿ ಸಿಗುವ ಪಾತ್ರಗಳು ಪ್ರಸಿದ್ಧಿ ತಂದುಕೊಡುತ್ತವೆ ಎಂಬ ಸಿದ್ಧಾಂತ ನಂಬಿಕೊಂಡವನು ನಾನು. ಉತ್ತಮ ಪಾತ್ರ ಇಲ್ಲವಾದರೆ ಸಿನಿಮಾ ಆಗಿರಲಿ ನಿರೂಪಣೆ ಆಗಿರಲಿ, ನಿರ್ದಾಕ್ಷಿಣ್ಯವಾಗಿ ಇಲ್ಲವೆನ್ನುತ್ತಿದ್ದೆ. ನನ್ನ ಅಷ್ಟೂ ಧಾರವಾಹಿಗಳು ಹೆಸರು ತಂದುಕೊಟ್ಟವೆಂದರೆ ಅದು ವಿಭಿನ್ನ ಪಾತ್ರಗಳಿಂದಲೇ.

ಮಾಯಾನಗರಿಗೆ ಕಾಲಿಟ್ಟಿದ್ದು `ಬಾಯ್‌ಫ್ರೆಂಡ್~ ಚಿತ್ರದ ಮೂಲಕ. ಚಿತ್ರ ಮುಹೂರ್ತದವರೆಗೂ ನನ್ನ ಪಾತ್ರದ ನಟನ ಆಯ್ಕೆ ನಡೆದಿರಲಿಲ್ಲ. ಆಕಸ್ಮಿಕವಾಗಿ ನನಗೆ ಮುಖ್ಯಪಾತ್ರ ದೊರೆಯಿತು. ಆ ಬಳಿಕ `7 ಒ ಕ್ಲಾಕ್~, `ಕ್ಷಣ ಕ್ಷಣ~, `ಲವ್‌ಗುರು~, `ಮಿಲನ~, `ಗಾನಬಜಾನ~, `ಪೊಲೀಸ್ ಕ್ವಾಟ್ರರ್ಸ್~ ಎಲ್ಲದರಲ್ಲೂ ಭಿನ್ನ ಸ್ವರೂಪದ ಪಾತ್ರಗಳೇ ಸಿಕ್ಕವು. ಚಿತ್ರಗಳ ಆಯ್ಕೆಯಲ್ಲೂ ನಾನು ಭಾರಿ ಚೂಸಿ. ನಾಯಕನ ಪಾತ್ರ ಮಾತ್ರ ಎಂಬ ಬೌಂಡರಿಗೆ ಸೀಮಿತನಾಗಿಲ್ಲ. ಅದೇ ಕಾರಣಕ್ಕೆ ಹೆಚ್ಚು ಪಾತ್ರಗಳು ಹುಡುಕಿ ಬಂದವು.

ಇದೀಗ  `ಕ್ರೇಜಿಸ್ಟಾರ್~, `ಟೋನಿ~ ಚಿತ್ರ ಬಹುತೇಕ ಮುಗಿದಿದೆ. ದಿಗಂತ್  ನಟಿಸಿರುವ `ಮಿಂಚಾಗಿ ನೀನು ಬರಲು~, `ಮಹಾನದಿ~ ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ.

ಅಲ್ಲಿಂದ ರಿಯಾಲಿಟಿ ಶೋನತ್ತ ಪಯಣ. ಈ-ಟಿವಿಯಲ್ಲಿ ನಡೆಸಿಕೊಟ್ಟ `ಡಿ ಫಾರ್ ಡೇಂಜರ್~ ಸಾಹಸ ಕಾರ್ಯಕ್ರಮ ಹೆಸರು ತಂದುಕೊಟ್ಟಿತು. ಅಂತಹುದೇ ಅಸಮಾನ್ಯ ಪ್ರತಿಭೆಗಳನ್ನು ಹುಡುಕಿ ತಂದು `ಸೂಪರ್~ ಶೋ ನಡೆಸಿದೆವು. ಧಾರಾವಾಹಿ ಹಾಗೂ ಸಿನಿಮಾಗೆ ಹೋಲಿಸಿದರೆ ರಿಯಾಲಿಟಿ ಶೋಗಳಲ್ಲಿ ಭಾವನಾತ್ಮಕ ಸಂಬಂಧವೇ ಹಿರಿದು.

ಸ್ಪರ್ಧಿಗಳ ಪ್ರತಿಕ್ರಿಯೆಯೂ ತಕ್ಷಣವೇ ಸಿಗುವುದರಿಂದ ಕಾರ್ಯಕ್ರಮವೆಲ್ಲಾ ನಾಟಕೀಯವಾಗಿ ಗೋಚರಿಸುವುದುಂಟು. ಆದರೆ ಕ್ಯಾಮೆರಾ ಕಣ್ಣಿಗಾಗಿ ಕಣ್ಣೀರು ಹಾಕುತ್ತಾರೆ ಎಂಬ ಅಪವಾದ ಸುಳ್ಳು.

ರಿಯಾಲಿಟಿ ಶೋ ಕ್ಲಿಕ್ ಆಗುವುದು ನಿರ್ದೇಶಕರು ಬರೆದು ಕೊಟ್ಟ ಸ್ಕ್ರಿಪ್ಟ್ ಅನ್ನು ಸುಧಾರಿಸಲು ತಿಳಿದಾಗಲೇ. ಅಲ್ಲಿನ ಜೋಕ್‌ಗಳೂ ಅಷ್ಟೇ ತಕ್ಷಣಕ್ಕೆ ಮೂಡುವ ಹಾಗೂ ಅಲ್ಲಿನ ವಾತಾವರಣವನ್ನು ಅವಲಂಬಿಸಿದವು. ಕಾರ್ಯಕ್ರಮದ ಪಿನ್ ಟು ಪಿನ್ ಮಾಹಿತಿ ಇದ್ದಾಗ ನಿರೂಪಣೆ ಭಾರವಾಗುವುದಿಲ್ಲ. ಆದರೆ ಸಿನಿಮಾಗಳಲ್ಲಿ ಸಿದ್ಧಮಾತುಗಳು. ಅಲ್ಲಿ ಚಿತ್ರೀಕರಣಕ್ಕೆ ಹೆಚ್ಚು ಗಮನ ನೀಡಬೇಕು. ಇನ್ನೊಂದು ಪಾತ್ರಕ್ಕೆ ನಾವು ಜೀವ ತುಂಬಬೇಕು.

ನನಗೆ ಮಾತು ಅಂದರೆ ಬದುಕು. ನಿಮಗೆ ಅನಿಸಿದನ್ನ ಮಾತಿನ ಮೂಲಕ ಹೇಳಿಲ್ಲ ಅಂದರೆ ಜೀವನ ಮುಂದೆ ಸಾಗುವುದಿಲ್ಲ. ಅದು ನಿಂತ ನೀರಾಗುತ್ತದೆ. ಅದೇ ಮಾತು ಅತಿ ಆದ್ರೆ  ಕಿರಿಕಿರಿ ಮೂಡಿಸಬಹುದು. ಆಡುವ ಮಾತಿನ ಮೇಲೆ ಗಮನ ಇದ್ದರೆ ಈ ಸಮಸ್ಯೆ ಬಾರದು. ಹೊಸದಾಗಿ ನಿರೂಪಣೆ ಕ್ಷೇತ್ರಕ್ಕೆ ಬರುವವರು ಆಡಿದ ಮಾತುಗಳನ್ನು ಒಮ್ಮೆ ರೆಕಾರ್ಡ್ ಮಾಡಿಟ್ಟು ಮತ್ತೆ ಕೇಳುವುದು ಉತ್ತಮ. ಸೂಕ್ಷ್ಮತೆ, ಜಾಣ್ಮೆ ಇದ್ದಾಗಲೇ ಮಾತಿಗೊಂದು ಮೌಲ್ಯ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT