ADVERTISEMENT

‘ಶ್ರೀ’ಕಾರ ಹಾಕಿದ ‘ಸೂಪರ್‌ ಸ್ಟಾರ್‌’ ಜೆಕೆ

ಗುರು ಪಿ.ಎಸ್‌
Published 23 ಆಗಸ್ಟ್ 2018, 19:30 IST
Last Updated 23 ಆಗಸ್ಟ್ 2018, 19:30 IST
ಜಯರಾಂ ಕಾರ್ತಿಕ್
ಜಯರಾಂ ಕಾರ್ತಿಕ್   

‘ಅಶ್ವಿನಿ ನಕ್ಷತ್ರ’ದ ಸೂಪರ್‌ಸ್ಟಾರ್‌ ಖ್ಯಾತಿಯ ಜಯರಾಮ್‌ ಕಾರ್ತಿಕ್‌ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್‌ ಬಾಸ್‌ ನಂತರ ಅವರನ್ನು ಕಿರುತೆರೆಗೆ ಸೆಳೆದಿರುವುದು ‘ಶ್ರೀ’ ಧಾರಾವಾಹಿ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ಅವರು ‘ಸೂಪರ್‌ ಸ್ಟಾರ್‌’ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

‘ಶ್ರೀ’ ಪ್ರಾಣಕ್ಕೇ ಕುತ್ತು ತರುವಂತಹ ಅಪಾಯಕಾರಿ ಸನ್ನಿವೇಶವೊಂದು ಸೃಷ್ಟಿಯಾದಾಗ ಆಪತ್ಬಾಂಧವನಂತೆ ಜೆ.ಕೆ. ಪ್ರತ್ಯಕ್ಷವಾಗಲಿದ್ದಾರೆ. ಜೆ.ಕೆ. ಹೋರಾಟದಿಂದ ಶ್ರೀ ಪ್ರಾಣಾಪಾಯದಿಂದ ಪಾರಾಗುತ್ತಾಳಾ, ತಾಯಿ ರೇವತಿ ಮತ್ತು ಶ್ರೀ ಇಬ್ಬರನ್ನೂ ‘ಸೂಪರ್‌ ಸ್ಟಾರ್‌’ ಒಂದು ಮಾಡುತ್ತಾರಾ ಎಂಬ ಪ್ರಶ್ನೆಗೆ, ‘ಕುತೂಹಲ ಇರಲಿ’ ಎಂದು ಉತ್ತರಿಸುತ್ತಾರೆ ಕಾರ್ತಿಕ್‌ ಜಯರಾಮ್.

‘ಅಶ್ವಿನಿ ನಕ್ಷತ್ರದ ನಂತರ ನಾನು ಯಾವುದೇ ಧಾರಾವಾಹಿಯನ್ನು ಒಪ್ಪಿಕೊಂಡಿಲ್ಲ. ಕಲರ್ಸ್‌ ಕನ್ನಡ ಚಾನೆಲ್‌ ಮನವಿ ಮಾಡಿಕೊಂಡಿದ್ದಕ್ಕೆ ಬಿಗ್‌ ಬಾಸ್‌ನಲ್ಲಿ ಭಾಗವಹಿಸಿದ್ದೆ. ಶ್ರೀ ಧಾರಾವಾಹಿಯಲ್ಲಿ ಮಹತ್ವದ ಪಾತ್ರವಿತ್ತು. ಅತಿಥಿ ನಟನಾಗಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕೆಲವೇ ಎಪಿಸೋಡ್‌ಗಳಲ್ಲಿ ಬಂದರೂ, ಪಾತ್ರಕ್ಕೆ ಮಹತ್ವದ ತಿರುವು ಇದೆ’ ಎಂದು ಜೆ.ಕೆ. ಹೇಳುತ್ತಾರೆ.

ADVERTISEMENT

ಸಿನಿಮಾದಲ್ಲಿ ತೊಡಗಿಸಿ-ಕೊಂಡಿರುವುದರಿಂದ ಕಿರುತೆರೆಗೆ ಹೆಚ್ಚು ಸಮಯ ನೀಡಲು ಅವರಿಗೆ ಆಗುತ್ತಿಲ್ಲ. ‘ಶ್ರೀ’ ಧಾರಾವಾಹಿಯ ನಿರ್ದೇಶಕ ರಮೇಶ್ ಕೃಷ್ಣ ಮನವಿ ಮಾಡಿಕೊಂಡಿದ್ದರಿಂದ ಕೆಲವು ಕಂತುಗಳಲ್ಲಿ ನಟಿಸಿದ್ದಾರೆ. ‘ಸೂಪರ್‌ಸ್ಟಾರ್‌ ಜೆ.ಕೆ.ಯಾಗಿಯೇ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಅವರು ತಿಳಿಸಿದರು.

ಮೇ 1ರ ಹುಮ್ಮಸ್ಸು:
ಜಯರಾಮ್‌ ಕಾರ್ತಿಕ್‌ ನಟನೆ ಮತ್ತು ನಿರ್ಮಾಣದ ‘ಮೇ 1’ ಶುಕ್ರವಾರ (ಆಗಸ್ಟ್‌ 24) ಬಿಡುಗಡೆಯಾಗಲಿದೆ. ಚಿತ್ರಕಥೆಯನ್ನು ಬರೆದಿರುವ ಜೆ.ಕೆ. ಸಹ ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಚಿತ್ರಕ್ಕೆ ಪ್ರೇಕ್ಷಕರು ಪ್ರೋತ್ಸಾಹ ನೀಡುವ ವಿಶ್ವಾಸವಿದೆ ಎಂದು ಅವರು ಹೇಳುತ್ತಾರೆ.

ಕಿರುತೆರೆಯಿಂದ ಕನ್ನಡ ಹಿರಿತೆರೆಗೆ ಬಂದಿದ್ದ ಅವರು, ಬಾಲಿವುಡ್‌ಗೂ ಹಾರಿದ್ದಾರೆ. ಹಿಂದಿಯ ಎರಡು ಚಿತ್ರಕ್ಕೆ ಸಹಿ ಹಾಕಿದ್ದು, ಒಂದು ಚಿತ್ರದ ಚಿತ್ರೀಕರಣ ಮುಗಿಯುವ ಹಂತದಲ್ಲಿದೆ.

ದಿನಕರ್‌ ಕಪೂರ್‌ ನಿರ್ದೇಶನದಲ್ಲಿ ಹೊಸ ಬ್ಯಾನರ್‌ನ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಜೆ.ಕೆ. ಕಾಣಿಸಿಕೊಳ್ಳುತ್ತಿದ್ದಾರೆ. ‘ಪುಷ್ಪಾ ಐ ಹೇಟ್‌ ಟಿಯರ್ಸ್‌’ ಎಂಬ ಥ್ರಿಲ್ಲರ್‌ ಸಿನಿಮಾಗೆ ಅವರು ಬಣ್ಣ ಹಚ್ಚಿದ್ದಾರೆ.

‘70ರಿಂದ 80 ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವಿರುವ ದಿನಕರ್‌ ಕಪೂರ್‌, ಅಕ್ಷಯ್‌ ಕುಮಾರ್‌ ಅವರಂತಹ ನಟರ ಚಿತ್ರವನ್ನು ನಿರ್ದೇಶಿಸಿದವರು. ಅವರ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ನನ್ನ ಜೊತೆಗೆ, ಕೃಷ್ಣ ಅಭಿಷೇಕ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್‌ ವೇಳೆಗೆ ಚಿತ್ರೀಕರಣ ಮುಗಿಯಲಿದೆ. ನಂತರ, ಮತ್ತೊಂದು ಹಿಂದಿ ಚಿತ್ರ ಪ್ರಾರಂಭವಾಗುತ್ತದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ’ ಎಂದು ಜೆ.ಕೆ ತಿಳಿಸಿದರು.

ಕನ್ನಡದಲ್ಲಿ, ‘ಮೇ 1’ ಬಿಡುಗಡೆಯಾದ ನಂತರ, ಜೆ.ಕೆ. ನಟನೆಯ ‘ಪುಟ 109’ ತೆರೆಗೆ ಬರಲಿದೆ. ದಯಾಳ್‌ ಅವರು ನಿರ್ದೇಶಿಸಿದ ಈ ಚಿತ್ರ ಸೆಪ್ಟೆಂಬರ್‌ ಕೊನೆಯ ವಾರ ಬಿಡುಗಡೆಯಾಗುತ್ತದೆ. ಈ ವರ್ಷಾಂತ್ಯದಲ್ಲಿ ಕನ್ನಡದಲ್ಲಿಯೇ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದೇನೆ ಎನ್ನುತ್ತಾರೆ ಜೆ.ಕೆ.

ಧಾರಾವಾಹಿ, ರಿಯಾಲಿಟಿ ಷೋ, ಸಿನಿಮಾ, ಕ್ರಿಕೆಟ್‌ ಹೀಗೆ ಎಲ್ಲ ವಿಭಾಗದಲ್ಲಿಯೂ ಸಕ್ರಿಯವಾಗಿರುವುದಕ್ಕೆ ವಿಶೇಷ ಉತ್ಸಾಹ ಬೇಕಾಗುತ್ತದೆ. ಹೀಗೆ, ಸದಾಕಾಲ ಚಟುವಟಿಕೆಯಿಂದಿರುವುದರ ಹಿಂದಿನ ಗುಟ್ಟೇನು ಎನ್ನುವ ಪ್ರಶ್ನೆಗೆ, ‘24 ವರ್ಷಗಳಿಂದ ನಾನು ನಿಯಮಿತವಾಗಿ ದೈಹಿಕ ಕಸರತ್ತು ನಡೆಸುತ್ತಿದ್ದೇನೆ. ಆಹಾರ ಪಥ್ಯದ ಕಡೆಗೂ ಹೆಚ್ಚು ಗಮನ ನೀಡುತ್ತೇನೆ. ಬಾಲಿವುಡ್‌ ಚಿತ್ರಗಳಲ್ಲಿ ನಾಯಕನಾಗಿ ನಟಿಸಬೇಕೆಂದರೆ ದೈಹಿಕ ಸದೃಢತೆಗೆ ಹೆಚ್ಚು ಗಮನ ನೀಡಬೇಕು. ಹೀರೋ ಲುಕ್‌ ಕಾಯ್ದುಕೊಳ್ಳಬೇಕು ಎಂದರೆ ನಾವು ಈ ನಿಟ್ಟಿನಲ್ಲಿ ಗಮನ ಹರಿಸಲೇಬೇಕಾಗುತ್ತದೆ. ನಿಯಮಿತವಾಗಿ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಸದಾಕಾಲ ಚಟುವಟಿಕೆಯಿಂದಿರುವುದು ಸಾಧ್ಯವಾಗಿದೆ’ ಎಂದು ಉತ್ತರಿಸುತ್ತಾರೆ ಜೆ.ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.